Thursday, May 19, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ - ಆಸೆಯೆಂಬ ಕುದುರೆಯೇರಿ…

ಕಗ್ಗದ ಸಂದೇಶ – ಆಸೆಯೆಂಬ ಕುದುರೆಯೇರಿ…

ತಂಗಳುಣಿಸಾದೊಡಂ ಸಾಕೆನುವನುಪಾಸಿ|
ಸಿಂಗಾರ ಸಂಗಾತಿ ಬೇಕುಂಡವನಿಗೆ||
ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ|
ಹಿಂಗದಾಯೆದೆಚಿಲುಮೆ-ಮಂಕುತಿಮ್ಮ||

ಉಪವಾಸವಿರುವವನಿಗೆ ತಂಗಳಿನ ಊಟ ಸಿಕ್ಕಿದರೂ ಸಾಕು ಎನಿಸುತ್ತದೆ. ಊಟ ಮಾಡಿ ಹೊಟ್ಟೆ ತುಂಬಿದ ಮೇಲೆ ಅವನಿಗೆ ಮೈಗೆ ಸಿಂಗರಿಸಲು ಬಟ್ಟೆ ಹಾಗೂ ಶೃಂಗಾರ ಸಾಧನಗಳು ಬೇಕು ಮತ್ತು ಒಡನಾಟದ ಆನಂದ ಪಡೆಯಲು ಓರ್ವ ಸಂಗಾತಿ ಬೇಕೆನಿಸುತ್ತದೆ. ಹೀಗೆ ಸಂಗಾತಿ ಪಡೆದು ಸಂಸಾರಿಯಾದ ಮೇಲೆ ಬಂಗಾರ, ಪದವಿ, ಪ್ರತಿಷ್ಠೆ ಬೇಕೆನಿಸುತ್ತದೆ. ಈ ರೀತಿಯಲ್ಲಿ ಮನುಷ್ಯನ ಆಸೆಯ ಚಿಲುಮೆ ಬತ್ತದೆ ಸದಾ ಚಿಮ್ಮುತ್ತಾ ಇರುತ್ತದೆ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ಆಸೆಗಳಿಲ್ಲದಿದ್ದರೆ ಬದುಕೇ ಇಲ್ಲ. ಬಯಕೆಗಳೇ ಬದುಕಿನ ಮುನ್ನಡೆಗೆ ಸೂರ್ತಿ ಮತ್ತು ಪ್ರೇರಣೆ. ಆದರೆ ನಮ್ಮ ಬಯಕೆಗಳಿಗೊಂದು ಇತಿಮಿತಿ ಇರಬೇಕು. ವಾಸ್ತವತೆಯನ್ನು ಮೀರಿದರೆ ಬುದ್ಧ ಹೇಳಿದಂತೆ ’ಆಸೆಯೆ ದುಃಖಕ್ಕೆ ಮೂಲ’ವಾಗುತ್ತದೆ. ನಮ್ಮ ಮನದಲ್ಲಿ ನಿರಂತರವಾಗಿ ಮೂಡುವ ಅತಿಯಾದ ಬಯಕೆಗಳೇ ಬದುಕಿನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ’ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ’ ಎಂಬ ಶಿವಶರಣರ ಉಕ್ತಿಯಂತೆ ಜೀವನದ ಬಯಕೆಗಳ ನಾನಾ ಚಿಂತೆಯಲ್ಲಿ ಮನಸ್ಸು ಆಶಾಂತಿಯಿಂದ ಸದಾ ಕುದಿಯುತ್ತಿರುತ್ತದೆ.
“ಎನಿತೊಂದೊ ಸಾಮಾಗ್ರಿ ಬಾಳಿನಲಿ ಬೇಕಿಲ್ಲ| ಉಪಭೋಗ ಸಂಸ್ಕೃತಿಗೆ ದಾಸರೋ ನಾವು! ಎಷ್ಟು ಸರಳತೆ ನಮದೊ ಅಷ್ಟು ನೆಮ್ಮದಿ ನಮದು| ಸರಳತೆಯೆ ಸುಂದರವೊ-ಮುದ್ದುರಾಮ” ಎಂಬ ಕೆ. ಶಿವಪ್ಪನವರ ಕವಿತೆ ಹೇಳುವಂತೆ ಬೇಕಾಗಿರುವುದಕ್ಕಿಂತ ಬೇಡದ ಸರಕುಗಳು ನಮ್ಮ ಮನೆಮನಗಳಲ್ಲಿ ತುಂಬಿಸಿಕೊಂಡು ಕಸದತೊಟ್ಟಿಯನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ಲೆಕ್ಕ ಹಾಕಿದರೆ ನಮ್ಮೆಲ್ಲರಲ್ಲಿ ಅಗತ್ಯವಾಗಿ ಬೇಕಾಗಿರುವುದಕ್ಕಿಂತ ಬೇಡದ ಅನಗತ್ಯ ವಸ್ತುಗಳೇ ಹೆಚ್ಚಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದರೊಂದಿಗೆ ಪದವಿ ಮತ್ತು ಪ್ರತಿಷ್ಠೆಯ ಹಿಂದೆ ಬಿದ್ದು ಅತೃಪ್ತಿಯಿಂದ ಕೊರಗುವ ಮನಸ್ಥಿತಿಯಿಂದ ಮುಕ್ತರಾಗಬೇಕು. ಡಿವಿಜಿಯವರ ಕಗ್ಗದ ಆಶಯದಂತೆ ನಮ್ಮ ಬಯಕೆಗಳ ವಿಷಯದಲ್ಲಿ ವಿವೇಚನೆ ಮಾಡಿ ಆಸೆಯ ದಾಸನಾಗದೆ ನಮ್ಮ ಇತಿಮಿತಿಯೊಳಗೆ ಸರಳತೆಯಿಂದ ಬಾಳಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!