- ಭಾರತೀಯ ಸಂವಿಧಾನದ 21 ನೇ ಅನುಚ್ಚೇದದ ಪ್ರಕಾರ ಯಾವುದೇ ಆರೋಪ ಹೊಂದಿರುವ ವ್ಯಕ್ತಿಯನ್ನು ಬಂಧನದಲ್ಲಿ ಇಡುವ ಆದೇಶವು ನ್ಯಾಯೋಚಿತ ಹಾಗೂ ಕಾನೂನುಬದ್ಧವಾಗಿರಬೇಕು. ವಿನಹಾ ಅದು ಇಚ್ಛಾನುಸಾರ ಅಥವಾ ಹಿಂಸಿಸುವಂತಹ ರೀತಿಯಲ್ಲಿ ಇರಬಾರದು. ಈ ಕಾರಣದಿಂದ ಪ್ರಜೆಗಳ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲು ಕಾನೂನು ವಿವಿಧ ನ್ಯಾಯಾಲಯಗಳಿಗೆ ಅಧಿಕಾರವನ್ನು ನೀಡಿದೆ.
- ಯಾವುದೇ ಜಿಲ್ಲಾ ದಂಡಾಧಿಕಾರಿ, ವಿಭಾಗ ದಂಡಾಧಿಕಾರಿ ಅಥವಾ ಪ್ರಥಮ ದರ್ಜೆಯ ದಂಡಾಧಿಕಾರಿಯವರ ಗಮನಕ್ಕೆ ಒಬ್ಬ ವ್ಯಕ್ತಿಯನ್ನು ಕಾನೂುಬಾಹಿರವಾಗಿ ಅಕ್ರಮ ಬಂಧನದಲ್ಲಿ ಇಟ್ಟಿರುವ ವಿಚಾರವು ಬಂದ ಸಂದರ್ಭದಲ್ಲಿ ಅವರು ಅಕ್ರಮ ಬಂಧಿತ ವ್ಯಕ್ತಿಯ ಶೋಧನೆಗೆ ಆದೇಶವನ್ನು (ಸರ್ಚ್ ವಾರಂಟ್) ನೀಡುವ ಅಧಿಕಾರವನ್ನು ಹೊಂದಿರುತ್ತಾರೆ. ಶೋಧನೆ ಸಂದರ್ಭದಲ್ಲಿ ಅಕ್ರಮವಾಗಿ ಬಂಧನದಲ್ಲಿರುವ ವ್ಯಕ್ತಿ ಕಂಡುಬಂದಾಗ ಆತನನ್ನು ದಂಡಾಧಿಕಾರಿಯ ಮುಂದೆ ಹಾಜರು ಪಡಿಸಬೇಕು ಮತ್ತು ಸಂದರ್ಭಕ್ಕಾನುಸಾರವಾದ ಆದೇಶವನ್ನು ನೀಡುವ ಅಧಿಕಾರವನ್ನು ದಂಡಾಧಿಕಾರಿಯವರು ಹೊಂದಿರುತ್ತಾರೆ.
- ಯಾವುದೇ ಕೈದಿ ಅಥವಾ ಅಪರಾಧಿತ ವ್ಯಕ್ತಿಯನ್ನು ಬಂಧಿಸಿ ಅಕ್ರಮ ಬಂಧನದಲ್ಲಿ ಇರಿಸಿದ ಸಂದರ್ಭದಲ್ಲಿ ಆತನ ಪರವಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿ ಅಕ್ರಮವಾಗಿ ಬಂಧನದಲ್ಲಿರುವ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ಸೂಕ್ತ ನಿರ್ದೇಶನವನ್ನು ಮತ್ತು ಇತರ ಸೂಕ್ತ ಪರಿಹಾರವನ್ನು ಉಚ್ಚ ನ್ಯಾಯಾಲಯದಿಂದ ಪಡೆಯಬಹುದು. ಯಾವುದೇ ಅಕ್ರಮ ಬಂಧನ, ತಡೆ ಅಥವಾ ಸೆರೆಮನೆಯಲ್ಲಿರುವ ವ್ಯಕ್ತಿಯ ಪರವಾಗಿ ಶೀಘ್ರ ಪರಿಹಾರವನ್ನು ಪಡೆಯಲು ಈ ರೀತಿಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಬಹುದು.
- ನ್ಯಾಯಾಲಯದ ನಿರ್ದೇಶನದ ಪ್ರಕಾರ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಸಮಕ್ಷಮ ಹಾಜರು ಪಡಿಸಿದ ಸಂದರ್ಭದಲ್ಲಿ ಅಂಥ ವ್ಯಕ್ತಿಯ ಬಂಧನದ ಕಾರಣ ಇತ್ಯಾದಿಗಳನ್ನು ಪರಿಶೀಲಿಸಿ ಒಂದು ವೇಳೆ ಬಂಧಿತ ವ್ಯಕ್ತಿಯನ್ನು ಬಂಧನದಲ್ಲಿ ಇಡಲು ಕಾನೂನಿನ ಪ್ರಕಾರ ಸೂಕ್ತ ಕಾರಣ ಇರುವುದಿಲ್ಲ ಎಂಬ ಬಗ್ಗೆ ನ್ಯಾಯಾಲಯವು ಅಭಿಪ್ರಾಯ ಹೊಂದಿದಲ್ಲಿ ನ್ಯಾಯಾಲಯವು ಆತನ ಬಿಡುಗಡೆಗೆ ಸೂಕ್ತ ಆದೇಶ ಹೊರಡಿಸಬಹುದು.
- ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಕಾನೂನಿನ ಪ್ರಕಾರ ಸೂಕ್ತ ಕಾಲಮಿತಿ ಇರುವುದಿಲ್ಲ. ಆದರೂ ಇಂಥ ಅರ್ಜಿಯನ್ನು ಸಲ್ಲಿಸುವ ವೇಳೆ ವಿಳಂಬವಾಗಿರುವ ಸಂದರ್ಭದಲ್ಲಿ ಸೂಕ್ತ ಕಾರಣವನ್ನು ನ್ಯಾಯಾಲಯಕ್ಕೆ ತಿಳಿಸಬೇಕಾಗುತ್ತದೆ.
- ಅಕ್ರಮವಾಗಿ ಬಂಧಿಸಲ್ಪಟ್ಟ ವ್ಯಕ್ತಿಯ ಬಿಡುಗಡೆಗೆ ಅರ್ಜಿಯನ್ನು ಬಂಧಿತ ವ್ಯಕ್ತಿಯಾಗಲಿ ಅಥವಾ ಆತನ ಸಂಬಂಧಿಕರಾಗಲಿ ಸಲ್ಲಿಸಬಹುದು ಅಥವಾ ನ್ಯಾಯಾಲಯವು ಸ್ವ ಪ್ರೇರಣೆಯಿಂದ ಬಂಧಿತ ವ್ಯಕ್ತಿಯ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬಹುದು. ಬಂಧಿತ ವ್ಯಕ್ತಿಯನ್ನು ಯಾವುದೇ ಸರಕಾರ ಅಥವಾ ಸರಕಾರದ ಅಧಿಕಾರಿಗಳಿಂದ ಮಾತ್ರವಲ್ಲದೆ ಇನ್ನಿತರ ಯಾವುದೇ ಖಾಸಗಿ ವ್ಯಕ್ತಿಗಳಿಂದ ಬಿಡುಗಡೆ ಕುರಿತು ಸೂಕ್ತ ಆದೇಶ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ.

ಮೊ: 9845232490/9611682681