ಕಾರ್ಕಳ : ಮನೆ ಬಾಗಿಲಿಗೆ ಸರಕಾರ ಬಂದ ಅನುಭವವಾಗುವಂತೆ ಹಳ್ಳಿಯ ಜನಸಾಮಾನ್ಯರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಇಲ್ಲಿನ ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ಶನಿವಾರ ಆಯೋಜಿಸಿದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ತಾಲ್ಲೂಕು ಮಟ್ಟದ ಕಂದಾಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಕಟ್ಟಕಡೆಯ ಫಲಾನುಭವಿಗೂ ಪ್ರಯೋಜನವಾಗಬೇಕು. ಪಿಂಚಣಿಗಾಗಿ ಯಾರೂ ಅಲೆದಾಡುವಂತಿಲ್ಲ. ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ವ್ಯವವ್ಥೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಗ್ರಾಮದ ಪೂರ್ಣ ಸಮಸ್ಯೆ ಅರ್ಥೈಸುವ ಪ್ರಯತ್ನ ಮಾಡಲಾಗುವುದು. ಕುಮ್ಕಿ ಭೂಮಿಯನ್ನು ಉಳುವವನಿಗೆ ನೀಡುವ ವಿಶೇಷ ಕಾನೂನನ್ನು ಜಾರಿಗೊಳಿಸಿ ಹಳೆಯ ಸಮಸ್ಯೆಗಳನ್ನು ಪರಿಹಾರ ನೀಡಲಾಗುವುದು. ಅರಣ್ಯ ಇಲಾಖೆಯ 15 ಲಕ್ಷ ಎಕರೆ ಜಾಗವನ್ನು ಮರಳಿ ರೈತರಿಗೆ ನೀಡಲು ಕ್ರಮಕೈಗೊಳ್ಳಲಾಗುವುದು. ಅದರಂತೆಯೇ ಒಂದು ತಿಂಗಳಲ್ಲಿ ರೈತರ ದಾಖಲೆಯನ್ನು ಮನೆ ಮನೆಗೆ ಉಚಿತವಾಗಿ ತಲುಪಿಸುವ ಸರ್ಕಾರದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ರಿಯಲ್ ಪವರ್ ಸುನಿಲ್ ಕುಮಾರ್
ಶಾಸಕರಾಗಿ, ಸಚಿವರಾಗಿ ಸುನಿಲ್ ಕುಮಾರ್ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಜನರಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಅವರು ರಿಯಲ್ ಪವರ್ ಎಂದು ಆರ್. ಅಶೋಕ್ ಇದೇ ವೇಳೆ ಬಣ್ಣಿಸಿದರು.
ಅಧಿಕಾರಿ ಪರಿಶ್ರಮದಿಂದಾಗಿ ಕಡತ ವಿಲೇವಾರಿ ಸಪ್ತಾಹ ಯಶಸ್ವಿ – ಸುನಿಲ್ ಕುಮಾರ್
ಎಲ್ಲ ಅಧಿಕಾರಿಗಳ ಪರಿಶ್ರಮ, ಸಹಕಾರದಿಂದಾಗಿ ಕಡತ ವಿಲೇವಾರಿ ಪರಿಕಲ್ಪನೆ ಯಶಸ್ವಿಯಾಗಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು. ಆಗ ಆಡಳಿತದ ಪೂರ್ಣ ಗಮನ ಆರೋಗ್ಯದ ಮೇಲಿತ್ತು. ಹೀಗಾಗಿ ಅರ್ಜಿಗಳೆಲ್ಲಾ ಬಾಕಿ ಉಳಿಯುವಂತಾಯಿತು. ಇದನ್ನು ಅರ್ಥೈಸಿಕೊಂಡು ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ . ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಂದಾಯ ಸೇರಿದಂತೆ ಸರಕಾರದ 33 ಇಲಾಖೆಗಳ ಸುಮಾರು 13, 700 ಕಡತಗಳು ಪೆಂಡಿಂಗ್ ನಲ್ಲಿತ್ತು. ಇದರಲ್ಲಿ 11 ಸಾವಿರ ಕಡತಗಳು ಪೂರ್ಣಗೊಂಡಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಜಿ.ಪಂ. ಸಿಇಒ ನವೀನ್ ಭಟ್, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಕುಕ್ಕುಂದೂರು ಪಂಚಾಯತ್ ಅಧ್ಯಕ್ಷೆ ಶಶಿಮಣಿ ಸಂಪತ್, ಎಪಿಎಂಸಿ ಅಧ್ಯಕ್ಷ ರತ್ನಾಕರ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಕೆ. ರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಪುರಂದರ ಸ್ವಾಗತಿಸಿ, ಯೋಗೀಶ್ ಕಿಣಿ ನಾಡಗೀತೆ ಹಾಡಿದರು. ಶಿಕ್ಷಕಿ ಸಂಗೀತಾ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಉಡುಪಿಯ ಘಟನೆ ಕ್ಷಣಾರ್ಧದಲ್ಲಿ ವಿಶ್ವದೆಲ್ಲೆಡೆ ಹಬ್ಬಿದೆ ಎಂದಾದರೆ ಇದರ ಯೋಚನೆ ಮಾಡಬೇಕಿದೆ. ಮಕ್ಕಳು ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕಾಗಿ ಧರ್ಮಪ್ರಚಾರಕ್ಕಲ್ಲ. ಅದೇನಿದ್ದರೂ ಮನೆಯೊಳಗಿರಲಿ. ಕೋರ್ಟ್ ತೀರ್ಪನ್ನು ನಾವು ಪಾಲಿಸುತ್ತೇವೆ. ಮಕ್ಕಳಾದ ಕಾರಣದಿಂದ ವಿದ್ಯಾರ್ಥಿಗಳ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಹಂತ ಹಂತವಾಗಿ ಈ ಕುರಿತು ಮುಂದುವರಿಯುತ್ತೇವೆ. ಜಾಗೃತಿ ಮೂಡಿಸುತ್ತೇವೆ. ಹಿಜಾಬ್ ವಿವಾದದ ಬಗ್ಗೆ ತನಿಖೆಯ ಅಗತ್ಯವಿದ್ದು, ಯಾರ ಷಡ್ಯಂತ್ರ ಎಂದು ತಿಳಿದುಬರಲಿದೆ ಎಂದರು.
