ಮೆಧ್ಯ ದ್ರವ್ಯಗಳಲ್ಲಿ ಉತ್ತಮ ಎನಿಸಿಕೊಂಡಿರುವ ಜ್ಯೋತಿಷ್ಮತಿ ಸಸ್ಯದ ಬಗ್ಗೆ ಹಾಗೂ ಅದರ ಆರೋಗ್ಯ ಲಾಭದ ಬಗ್ಗೆ ತಿಳಿದುಕೊಳ್ಳೋಣ. ಇದು ಲತೆಯಾಗಿದ್ದು ಇದರ ಶಾಖೆಗಳು ಕೆಳಗಡೆ ಬಾಗಿರುತ್ತದೆ. ಅದರ ಮೇಲೆ ಶ್ವೇತಾ ಬಿಂದುವಿರುತ್ತದೆ. ಎಲೆಯೂ 2.5 – 5 ಇಂಚ್ ಉದ್ದ ಹಾಗು 1.25 -2.5 ಇಂಚು ಅಗಲ ವಿರುತ್ತದೆ. ಮಧುಗಂಧಿ ಪುಷ್ಪಗುಚ್ಛವು ಗ್ರೀಷ್ಮ ಋತುವಿನಲ್ಲಿ ಅರಳುತ್ತದೆ. ಫಲವು ಚಿಕ್ಕ ಚಿಕ್ಕ ಹಸಿರು ಬಟಾಣಿ ಕಾಳಿನಷ್ಟು ದೊಡ್ಡದಿರುತ್ತದೆ. ಬೀಜವು 1/3ಇಂಚು ಇದ್ದು ಕೇಸರಿ ಬಣ್ಣ ಹೊಂದಿರುತ್ತದೆ. ಭಾರತದಲ್ಲಿ ಎಲ್ಲೆಡೆ ಸಿಗುವಂತಹ ವಿಶೇಷವಾಗಿ ಪಂಜಾಬ್, ಕಾಶ್ಮೀರಲ್ಲಿ ಬೆಳೆಸಲಾಗುತ್ತದೆ.
ಇದರ ಗುಣ ವಿಶೇಷಗಳ ಬಗ್ಗೆ ತಿಳಿದುಕೊಳ್ಳೋಣ. ಇದು ಕಹಿ ಹಾಗೂ ಖಾರದ ರುಚಿಯನ್ನು ಹೊಂದಿದ್ದು ಉಷ್ಣ ಹಾಗೂ ತೀಕ್ಷ್ಣ ಗುಣವನ್ನು ಹೊಂದಿದೆ. ಉಷ್ಣವಿರುವ ಕಾರಣ ವಾತ ಹಾಗೂ ಕಫ ದೋಷಗಳನ್ನು ನಿಯಂತ್ರಿಸುತ್ತದೆ.
ಬಾಹ್ಯ ಪ್ರಯೋಗಗಳು
ಇದರ ಎಣ್ಣೆಯ ಅಭ್ಯಂಗ ಮಾಡುವುದರಿಂದ ವೇದನೆಯನ್ನು ಕಡಿಮೆ ಮಾಡಬಹುದು. ಇದನ್ನು ಸಂಧಿವಾತ, ಪ್ಯಾರಾಲಿಸಿಸ್, ಸಯಾಟಿಕಾ, ಬೆನ್ನುನೋವಿಗೆ ಬಳಸಲಾಗುವುದು. ಉರಿ ಊತವನ್ನು ಕಡಿಮೆ ಮಾಡುತ್ತದೆ. ಶೋಧ ವಿರುವ ಜಾಗದಲ್ಲಿ ಎಣ್ಣೆಯನ್ನು ಹಚ್ಚಿದರೆ ಊತ ಕಡಿಮೆಯಾಗುತ್ತದೆ.
ಅಭ್ಯಂತರ ಪ್ರಯೋಗಗಳು
ಇದು ವಿಶೇಷವಾಗಿ ಮೆದುಳಿಗೆ ತುಂಬಾ ಒಳ್ಳೆಯದು. ಉಷ್ಣವಿರುವ ಕಾರಣ ಗ್ರಹಣಶಕ್ತಿಯನ್ನು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಎಣ್ಣೆಯ ಎರಡೆರಡು ಹನಿ ಒಂದು ಚಮಚ ತುಪ್ಪದ ಜೊತೆ ರಾತ್ರಿ ಸೇವನೆ ಮಾಡಿದರೆ ಒಳ್ಳೆಯದ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೆರಡು ಹನಿ ಮೂಗಿಗೆ ಹಾಕುವುದರಿಂದ ಸ್ಮರಣಶಕ್ತಿಯನ್ನು ಹೆಚ್ಚಿಸಬಹುದು. ಇದನ್ನು ಆರು ತಿಂಗಳು ಅಥವಾ ಒಂದು ವರುಷದವರೆಗೆ ಸೇವಿಸಬಹುದು. ಆಯುರ್ವೇದ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ. ಅನೇಕ ಮಾನಸಿಕ ವಿಕಾರಗಳಲ್ಲಿ ಇದನ್ನು ಔಷಧವಾಗಿ ಬಳಸಲಾಗುತ್ತದೆ. ನೆನಪಿನ ಶಕ್ತಿ ಕಡಿಮೆ ಇರುವವರಿಗೆ ಇದು ಅತ್ಯುತ್ತಮ ದ್ರವ್ಯ.
ದೀಪನ ಗುಣವಿರುವ ಕಾರಣ ಅಗ್ನಿ ಉದ್ದೀಪನಮಾಡುತ್ತದೆ. ತಿಂದ ಆಹಾರವನ್ನು ಜೀರ್ಣಿಸುತ್ತದೆ. ಮಲಬದ್ಧತೆಯನ್ನು ದೂರಮಾಡುತ್ತದೆ. ನರಗಳಿಗೆ ಬಲವನ್ನು ನೀಡುತ್ತದೆ. ಉಷ್ಣವಿರುವ ಕಾರಣ ಹೃದಯವನ್ನು ಉತ್ತೇಜಿಸುತ್ತದೆ.ತ್ವಚೆಯ ರೋಗಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ಕುಷ್ಟ, ತುರಿಕೆಯನ್ನು ಇದು ಗುಣಪಡಿಸುತ್ತದೆ. ಸ್ವೇದವನು ಉತ್ಪತ್ತಿ ಮಾಡುತ್ತದೆ. ಕೆಮ್ಮು ಹಾಗೂ ಶ್ವಾಸದ ತೊಂದರೆಗಳಲ್ಲಿ ಇದು ಬಹಳ ಒಳ್ಳೆಯದು. ಜ್ವರವನ್ನು ಕಡಿಮೆ ಮಾಡುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳಿಗೆ ಉತ್ತಮ ಔಷಧ.
ಪಿತ್ತ ಪ್ರಕೃತಿಯವರು ಅಧಿಕ ಉಪಯೋಗಿಸಬಾರದು. ಉಪಯೋಗಿಸಿದರೆ ವಾಂತಿ ಭೇದಿಯ ತೊಂದರೆ ಕಾಡಬಹುದು. ಇದರ ಅಹಿತಕರ ಪ್ರಭಾವದಿಂದ ದೂರವಿರಲು ಇದನ್ನು ತುಪ್ಪ ಹಾಗೂ ಹಾಲಿನ ಜೊತೆ ಸೇವಿಸಬೇಕು.
ಉಪಯೋಗಿಸುವ ಅಂಗ – ಬೀಜ
ಉಪಯೋಗಿಸುವ ವಿಧಾನ – ನಾಲ್ಕರಿಂದ ಐದು ಹನಿ ಜ್ಯೋತಿಷ್ಮತಿ ಎಣ್ಣೆಯನ್ನು ನೂರು ಎಂಎಲ್ ಹಾಲಿನಲ್ಲಿ ಬೆರೆಸಿ ರಾತ್ರಿಯಲ್ಲಿ ಸೇವನೆ ಮಾಡಬೇಕು. ಎರಡರಿಂದ ಐದು ಹನಿ ಎಣ್ಣೆಯನ್ನು ಒಂದು ಚಮಚ ತುಪ್ಪದ ಜೊತೆ ಕೂಡ ಸೇವಿಸಬಹುದು. ನಸ್ಯದ ರೂಪದಲ್ಲಿಯೂ ಕೂಡ ಬಳಸಬಹುದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಮೂಗಿಗೆ ಎರಡೆರಡು ಹನಿ ಹಾಕಬಹುದು.

ಡಾ. ಹರ್ಷ ಕಾಮತ್