Wednesday, July 6, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ - ಬದುಕೆಂಬ ಭವ ಸಾಗರವ ದಾಟಲು…

ಕಗ್ಗದ ಸಂದೇಶ – ಬದುಕೆಂಬ ಭವ ಸಾಗರವ ದಾಟಲು…

ಕಗ್ಗದ ಸಂದೇಶ-ಬದುಕೆಂಬ ಭವ ಸಾಗರವ ದಾಟಲು…
“ಬೆನ್ನಿನಗಲವನಳೆದು ಹೊರೆಗೆ ನೀನದನೊಡ್ಡು|
ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು||
ಬನ್ನ ನಿನಗೊದಗಲದನಾತ್ಮಶಿಕ್ಷಣವೆನ್ನು|
ಮಾನ್ಯದೊಪ್ಪಂದವಿದು -ಮಂಕುತಿಮ್ಮ||.”

     ನಿನ್ನ ಬೆನ್ನಿನ ಅಗಲ ಎಷ್ಟಿದೆಯೆಂದು ತಿಳಿದು ಅಗಲಕ್ಕೆ ತಕ್ಕಂತೆ ನಿನ್ನ ಬದುಕಿನ ಹೊರೆಗೆ ಬೆನ್ನನ್ನು ಒಡ್ಡಬೇಕು ಅಂದರೆ ಎಷ್ಟು ಭಾರವನ್ನು ಹೊರಲು ನಿನ್ನಿಂದ ಸಾಧ್ಯವಾಗುವುದೋ ಅಷ್ಟನ್ನು ನೀನು ಹೊರು‌. ಏನೇನು ಆಗಬೇಕೋ ಅದನ್ನೆಲ್ಲಾ ಆ ವಿಧಿ ನಿನ್ನಿಂದ ಮಾಡಿಸಿಕೊಳ್ಳಲಿ ಬಿಡು. ಕರ್ಮ ಮಾಡುವಾಗ ಕಷ್ಟವುಂಟಾದರೆ ಅದನ್ನು ಬದುಕಿನಲ್ಲಿ ನಿನಗೆ ಸಿಗುವ ಶಿಕ್ಷಣವೆಂದು ತಿಳಿ. ಅದುವೇ ಯೋಗ್ಯವಾದ ಒಪ್ಪಂದವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಉಪದೇಶ ಮಾಡಿದ್ದಾರೆ. 
     ನಮ್ಮ ಜೀವನವು ನರ,ಕರ್ಮ ಮತ್ತು ದೈವ ಇವು ಮೂರೂ ಸೇರಿ ನಡೆಸುವ ಆಟ.ನಮ್ಮ ಕರ್ಮ ಫಲದೊಂದಿಗೆ ದೈವ ಒಡ್ಡುವ ಸವಾಲುಗಳನ್ನು ನಾವು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಿಧಿಗೂ ಈ ಜಗದ ವ್ಯವಸ್ಥೆಯಲ್ಲಿ ಜವಾಬ್ದಾರಿ ಇದೆ. ಎಲ್ಲಾ ಭಾರವನ್ನು ನಾವೇ ಹೊರ ಬೇಕಾಗಿಲ್ಲ. ನಮ್ಮ ಬೆನ್ನು ಹೊರಬಹುದಾದ ಭಾರವನ್ನು ಮಾತ್ರ ಹೊತ್ತು ಉಳಿದ ಭಾರವನ್ನು ವಿಧಿಗೆ ಬಿಡಬೇಕು. ಆದರೆ ಎಲ್ಲವನ್ನೂ ವಿಧಿಗೆ ಬಿಡುವ ಬೇಜವಾಬ್ದಾರಿ ಸಲ್ಲದು.ಭಾರ ಹೊತ್ತಾಗಲೇ ಬಾಳು ಬೆಳಗುವುದು. ಈ ಕೆಲಸದ ಪ್ರಯತ್ನದಿಂದಲೇ ಮನಸ್ಸಿನ ಹರಿತ ಮತ್ತು ಬುದ್ದಿಗೆ ಸಂಸ್ಕಾರ ದೊರೆಯುವುದು
      ಆತ್ಮವಿಶ್ವಾಸ ಜೀವನದ ಶ್ವಾಸ. ಆದರೆ ಅಹಂಭಾವ ಒಳ್ಳೆಯದಲ್ಲ. ಎಲ್ಲವನ್ನೂ ನಾನೇ ಮಾಡಿ ಬಿಡುತ್ತೇನೆ ಎನ್ನುವುದು ಆತ್ಮವಿಶ್ವಾಸವಲ್ಲ ಆಹಂಕಾರವಾಗುತ್ತದೆ. ನಮ್ಮ ಸಾಮರ್ಥ್ಯಕ್ಕೂ ಇತಿಮಿತಿ ಇರುತ್ತದೆ. ಸಾಮರ್ಥ್ಯಕ್ಕೆ ಮೀರಿದ  ಕಾರ್ಯಕ್ಕೆ ಕೈ ಹಾಕಬಾರದು. "ಆದಿಶೇಷನೆ ನೀನು, ಲೋಕದಿಕ್ಪಾಲಕನೆ?| ತಿರೆಭಾರ ಹೊರುವಷ್ಟು ಬಲಶಾಲಿಯೇನು?| ನಿನ್ನ ಇತಿಮಿತಿಯನ್ನರಿತು ಇರುವಷ್ಟು ದೂರ ನಡೆ| ಬದುಕು ಸಂಭ್ರಮದಿಂದ - ಮುದ್ದುರಾಮ" ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ನಾವೇನು ಆದಿಶೇಷನು ಅಲ್ಲ ಅಷ್ಟದಿಕ್ಪಾಲಕರು ಅಲ್ಲ. ನಮ್ಮ ಇತಿಮಿತಿಯನ್ನರಿತು ನಮಗಾಗುವಷ್ಟು ಭಾರಹೊತ್ತು ಸಾಧ್ಯವಾದಷ್ಟು ದೂರ ಸಂತೋಷದಿಂದ ನಡೆಯಬೇಕು. ಡಿವಿಜಿ ಯವರ ಈ ಕಗ್ಗದ ಆಶಯದಂತೆ ನಮ್ಮಸಾಮರ್ಥ್ಯದ ಇತಿಮಿತಿಯನ್ನು ತಿಳಿದು ಕರ್ತವ್ಯ ನಿರ್ವಹಿಸಿದಾಗಲೇ ಬದುಕು ಹಗುರಾಗಿ ಜೀವನ ಸಾರ್ಥಕವಾಗುವುದಲ್ಲವೇ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ,
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!