ಕಾರ್ಕಳ : ಪೋಷಕರು ಜವಾಬ್ಧಾರಿಯುತ ವರ್ತನೆ ತೋರಬೇಕು. ಪೋಷಕರ ಅತಿಯಾದ ಮಮತೆ, ಪ್ರೀತಿ ಮಕ್ಕಳನ್ನು ದಾರಿ ತಪ್ಪುವಂತೆ ಮಾಡಬಹುದು. ಗಂಡು ಹೆಣ್ಣು ಎಂಬ ಭೇದ ಭಾವ ಪೋಷಕರಲ್ಲಿ ಇರಬಾರದು. ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡುವ ಜವಾಬ್ಧಾರಿ ಪೋಷಕರದ್ದು ಎಂದು ಎಕ್ಷ್ಪರ್ಟ್ ಸಂಸ್ಥೆಯ ಸಂಸ್ಥಾಪಕ ಎಸ್.ಎಸ್. ನಾಯಕ್ ಅವರು ಹೇಳಿದರು.
ಅವರು ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ನಡೆದ ಶಿಕ್ಷಕ-ರಕ್ಷಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿಯ ವೈಕುಂಠ ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮಾತನಾಡಿ, ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವಾಗ ಅವರ ಮೇಲೆ ನಿಗಾ ವಹಿಸುವುದು ಅಗತ್ಯವೆಂದರು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ವಿವೇಕಾನಂದ ಶೆಣೈ, ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಮೇರಿಯನ್ ಡಿ’ಸೋಜ, ಪ್ರಾಥಮಿಕ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಉಮಾ ಫ್ರಾನ್ಸಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ ನಡೆದ ಉದ್ಘಟನಾ ಸಮಾರಂಭವನ್ನು ಪೆರ್ವಾಜೆಯ ಸುಂದರ ಪುರಾಣಿಕ್ ಸ್ಮಾರಕ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹರ್ಷಿಣಿ ವಿಜಯರಾಜ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಕರ್ತವ್ಯ ಮುಗಿಯುವುದಿಲ್ಲ. ಪೋಷಕರು ನಿಯಮಿತವಾಗಿ ಶಾಲೆಗೆ ಭೇಟಿಕೊಟ್ಟು ಮಕ್ಕಳ ಕಲಿಕೆಯ ಕುರಿತು ಮಾಹಿತಿ ಪಡೆಯುತ್ತಿರಬೇಕೆಂದರು. ಮಿಯ್ಯಾರು ಚರ್ಚಿನ ಧರ್ಮಗುರು ವಂ.ಫಾ. ಪಾವ್ಲ್ ರೇಗೋ ಅಧ್ಯಕ್ಷತೆ ವಹಿಸಿದ್ದರು. ಅರುಣ್ ಸಂದೀಪ್ ಡಿ’ಸೋಜಾ, ಸುನೀತಾ ಸ್ವಾಗತಿಸಿ, ನಯನ, ಕು. ಕಾವ್ಯ ವಂದಿಸಿದರು. ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.