ಕಾರ್ಕಳ : ಖ್ಯಾತ ರಂಗಕಲಾವಿದ, ನಾಟಕಕಾರ ಕಡ್ತಲ ಉಮೇಶ್ ಹೆಗ್ಡೆ (47) ಫೆ. 11 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಡ್ತಲ ಗ್ರಾಮದ ಮೂರ್ಸಾಲು ನಿವಾಸಿ ಲಿಂಗಯ್ಯ ಹೆಗ್ಡೆ ಮತ್ತು ಲಲಿತಾ ಹೆಗ್ಡೆಯವರ ಪುತ್ರ ಉಮೇಶ್ ಹೆಗ್ಡೆ ಅವರು ಪ್ರಾಥಮಿಕ ಶಿಕ್ಷಣ ಕಾರ್ಕಳದಲ್ಲಿ ಪೂರೈಸಿದ್ದರು.
ಉದ್ಯೋಗವನ್ನರಸಿಕೊಂಡು ಮುಂಬೈಗೆ ತೆರಳಿದ ಅವರು ಶಂಕರ್ ಹೆಗ್ಡೆ ಎಣ್ಣೆಹೊಳೆ ಅವರಿಂದ ಪ್ರೇರಿತರಾಗಿ ಮೇದಿನಿರ್ಮಾಣ ಎಂಬ ನಾಟಕದಲ್ಲಿ ಪ್ರಥಮವಾಗಿ ಅಭಿನಯಕ್ಕಿಳಿದರು.
ಮುಂಬೈಯಲ್ಲಿ ನೆಲೆಸಿರುವ ರಮೇಶ್ ಶಿವಪುರ ಅವರಿಂದ ನಟನಾ ತರಬೇತಿ ಪಡೆದಿದ್ದರು. ರಂಗಭೂಮಿಯೊಂದಿಗೆ ತುಳು ಚಿತ್ರರಂಗದಲ್ಲೂ ತೊಡಗಿಸಿಕೊಂಡ ಉಮೇಶ್ ಹೆಗ್ಡೆ ಯಕ್ಷಗಾನ ಕಲಾವಿದರಾಗಿಯೂ ಜನಮನ್ನಣೆ ಗಳಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಫೆ. 11ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನುಅಗಲಿದ್ದಾರೆ.