ಕಾರ್ಕಳ : ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟ ಬಹುನಿರೀಕ್ಷಿತ ಕಾರ್ಕಳ ಉತ್ಸವ ಮಾ. 10ರಿಂದ 20ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಾ. 10ರಿಂದ 17ರವರೆಗೆ ಗಾಂಧಿ ಮೈದಾನದಲ್ಲಿ ಹಾಗೂ ಮಾ. 18ರಿಂದ 20ರವರೆಗೆ ಸ್ವರಾಜ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಸಚಿವ ವಿ. ಸುನಿಲ್ ಕುಮಾರ್ ಅವರ ಪರಿಕಲ್ಪನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾರ್ಕಳ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರಗಲಿದ್ದು, ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ವಸ್ತುಪ್ರದರ್ಶನ, ಹೆಲಿ ಟೂರಿಸಂ, ಗುರುಕಿರಣ್, ವಿಜಯ್ ಪ್ರಕಾಶ್ ಸೇರಿದಂತೆ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮ, ಯಕ್ಷಗಾನ, ನಾಟಕ ಪ್ರದರ್ಶನಗೊಳ್ಳಲಿದೆ. ರಾಜ್ಯ, ಹೊರ ರಾಜ್ಯದ ನೂರಾರು ಕಲಾವಿದರು ಪಾಲ್ಗೊಳ್ಳಲಿದ್ದು, ಮಾ.18ರಂದು ಉತ್ಸವ ಮೆರವಣಿಗೆ ನಡೆಯಲಿದೆ ಎಂದು ತಿಳಿದುಬಂದಿದೆ.