ಕಾರ್ಕಳ : ಹೊಸ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಬಾಹುಬಲಿ ಸ್ವಾಮಿಯ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ತ್ಯಾಗ, ಅಹಿಂಸೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಬಾಹುಬಲಿ ದೇಶದ ಸಂಸ್ಕೃತಿಯ ಪ್ರತೀಕ. ಕೇವಲ ಜೈನ ಸಮುದಾಯ ಮಾತ್ರವಲ್ಲದೇ ಎಲ್ಲ ಧರ್ಮದವರಿಂದಲೂ ಪೂಜಿಸಲ್ಪಡುವ ಮಹಾನ್ ಶಕ್ತಿ. ಈ ನೆಲದ ಪ್ರತಿ ಕಣ – ಕಣದಲ್ಲೂ ನಾವು ಬಾಹುಬಲಿಯ ಸ್ಫೂರ್ತಿ ಕಾಣುತ್ತೇವೆ. ಹಾಗಾಗಿ ಆಯೂಬ್ ಖಾನ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾ ಶುಭದರಾವ್ ಆಗ್ರಹಿಸಿದರು.
ಇತೀಚೆಗೆ ಅಯೂಬ್ ಖಾನ್ ನಿಂದ ಸ್ಥಾಪಿಸಲ್ಪಟ್ಟ ನ್ಯೂ ಕಾಂಗ್ರೇಸ್ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜೊತೆ ತಳುಕು ಹಾಕಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಕ್ಷೇತ್ರಾಧ್ಯಕ್ಷರು ಮೂರ್ಖತನದ ಹೇಳಿಕೆ ನೋಡಿ ಆಶ್ಚರ್ಯವಾಗಲಿಲ್ಲ. ಬದಲಿಗೆ ಇವರೂ ಅಯೂಬ್ ಖಾನ್ ಗುಂಪಿಗೇ ಸೇರಿದವರೆಂದು ಖಾತ್ರಿಯಾಯಿತು. ತನ್ನ ಪೂರ್ವಗ್ರಹ ಪೀಡಿತ ಹೇಳಿಕೆಯಿಂದ ನಗೆಪಾಟಲಿಗೆ ಈಡಾಗಿರುವ ಬಿಜೆಪಿ ಕ್ಷೇತ್ರಾಧ್ಯಕ್ಷರು ಜೈನ ಸಮುದಾಯದ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಇದು ಫಲಿಸದು. ಜೈನ ಸಮಾಜದವರು ಅತ್ಯಂತ ವಿದ್ಯಾವಂತರೂ, ಬುದ್ಧಿವಂತರೂ ಆಗಿದ್ದಾರೆ. ಸಮಾಜದ ಏಳಿಗೆಗೆ ಅವರ ಕೊಡುಗೆ ಅಪಾರ. ಹಾಗಾಗಿ ಸಮಾಜದಲ್ಲಿ ಒಡಕು ತರುವ ಪ್ರಯತ್ನ ನಿಲ್ಲಿಸಿ ತಮ್ಮ ಸಾಮಾನ್ಯ ಜ್ಞಾನದ ಕಡೆಗೆ ಗಮನ ಕೊಡಬೇಕು. ಯಾರೊ ಹೆಸರಿಲ್ಲದ ವ್ಯಕ್ತಿ ನೀಡಿದ ಅಸಂಬದ್ಧ ಹೇಳಿಕೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆ ತಳಕು ಹಾಕುವ ದುರ್ಬುದ್ದಿ ತೊಲಗಿ, ಒಳ್ಳೆಯ ಬುದ್ಧಿಯನ್ನು ಕಾರ್ಕಳ ಗೋಮಟೇಶ್ವರ ಕರುಣಿಸಲಿ ಎಂಬುವುದು ನನ್ನ ವೈಯಕ್ತಿಕ ಪ್ರಾರ್ಥನೆ ಎಂದು ಶುಭದ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.