ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕದ ಸಂಸದರು ಹಾಗೂ ಸಚಿವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಕರ್ನಾಟಕದ ಸಂಸದರು ಮತ್ತು ಸಚಿವರೊಂದಿಗೆ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಮತ್ತು ಇತರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕು ಮುನ್ನ ದೆಹಲಿಯಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಹೈಕೋರ್ಟ್ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದೆ. ಅಲ್ಲಿಯವರಿಗೆ ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದು ರಾಜ್ಯದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.