ಮೈಸೂರು: ಎಲ್ಲಾ ಒತ್ತಡ, ಟೀಕೆಗಳ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರಕಾರ ಬದ್ಧವಾಗಿರುವುದು ಒಳ್ಳೆಯ ವಿಚಾರ. ಹಿಜಾಬ್ ಗಾಗಿ ವಿದ್ಯಾರ್ಥಿಗಳು ಇಷ್ಟು ಹಟ ಹಿಡಿದಿರುವುದಾದರೂ ಏಕೆ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ, ಅದು ಎಲ್ಲಾ ಮಕ್ಕಳ ಸಮಾನತೆಯನ್ನು ಸಾರುವ ಉಡುಪು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಕಾಲೇಜಿಗೆ ‘ಜಾಬ್’ ಗಾಗಿ ಬಂದರೆ, ನೀವು ಮಾತ್ರ ʼಹಿಜಾಬ್’ ಗಾಗಿ ಬರುತ್ತೀದ್ದೀರಾ? ನಿಮಗೆ ಹಿಜಾಬ್, ಟೋಪಿ ಹಾಕಿಕೊಂಡೇ ಕಲಿಯಬೇಕು ಎಂದಾದರೆ ಮದರಸಗೆ ಹೋಗಿ. ಮದರಸದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಆದರೆ ಸರ್ಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ. ಇದು ಬ್ರಿಟಿಷರ ಭಾರತವಲ್ಲ, ಇದು ಭರತ ಖಂಡ ಎಂದರು.
ನಮ್ಮ ದೇಶ ನಿಂತಿರುವುದು ಹಿಂದೂ ಧರ್ಮದ ಬುನಾದಿಯ ಮೇಲೆ. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ ಸಂಸ್ಕೃತಿಯ ಭಾಗ. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ಇಸ್ಲಾಂ- ಕ್ರಿಶ್ಚಿಯನ್ ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿರುವುದು. ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಹೇರಿಕೆ ಇಲ್ಲಿ ನಡೆಯುವುದಿಲ್ಲ. ಈ ನೆಲದಲ್ಲಿ ಎಲ್ಲರೂ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಹಿಜಾಬ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯರನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆಯಲ್ಲಿ ಚುನಾವಣೆ ಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯನವರು ‘ಸಿದ್ದರಹೀಮ್ ಅಯ್ಯ’ ಎಂದು ಬೇಕಾದರೆ ಹೆಸರು ಬದಲಾಯಿಸಿ ಕೊಳ್ಳುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ತಿರುಗೇಟು ನೀಡಿದರು.