ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕುತಂತ್ರವಾಗಿದೆ. ನಮ್ಮೂರನ್ನು ತಾಲಿಬಾನ್ ಮಾಡುವ ಮುನ್ಸೂಚನೆಯಿದು. ಸರಕಾರ ಹಿಜಾಬ್ ಪ್ರಕರಣಕ್ಕೆ ಅಂತ್ಯ ಹಾಕಬೇಕಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನದ ಪುನರ್ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ನಡೆದ ೨ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮ ಬಿಟ್ಟು ಬದುಕು ಇಲ್ಲ. ನಮ್ಮ ಧರ್ಮವನ್ನು ನಾವು ಉಳಿಸಿದರೆ ಬದುಕು ಎಂದು ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. ಧರ್ಮದ ಸೇವೆಯನ್ನು ಮಾಡುವ ಪುಣ್ಯದ ಕೆಲಸವೂ ಮುದ್ರಾಡಿಯಲ್ಲಿ ನಡೆಯುತ್ತಿದೆ. ಧರ್ಮ ಸಂಸ್ಕೃತಿ ರಾಜಕೀಯದ ಅಸ್ತ್ರವಾಗಬಾರದು ಎಂದವರು ಅಭಿಪ್ರಾಯಪಟ್ಟರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ದೇವಸ್ಥಾನದ ಕಾಷ್ಠಶಿಲ್ಪಿ ಉಡುಪಿ ಮಾಧವ ಆಚಾರ್ಯ, ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಶುಭದರ ಶೆಟ್ಟಿ ಮುದ್ರಾಡಿ, ಮಾಜಿ ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ, ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಿದ ಸುಧಾಕರ ಭಂಡಾರಿ ಸಹಿತ ಹಲವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ. ಪೂಜಾರಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಹೆಬ್ರಿ ಟಿ.ಜಿ. ಆಚಾರ್ಯ, ಉದ್ಯಮಿ ಪ್ರಸನ್ನ ಸೂಡ ಶಿವಪುರ, ವಾಸ್ತುತಜ್ಞ ಪ್ರಮಲ್ ಕುಮಾರ್, ರಂಗ ನಟ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್, ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಭೋಜ ಪೂಜಾರಿ ಬೈದರಬೆಟ್ಟು, ದೇವಸ್ಥಾನದ ಆಡಳಿತ ಮೋಕ್ತೇಸರ ಸುಕುಮಾರ ಮೋಹನ್, ಕಾರ್ಯದರ್ಶಿ ಗಣಪತಿ ಎಂ., ಸಹ ಕಾರ್ಯದರ್ಶಿ ನವೀನ್ ಕೋಟ್ಯಾನ್, ಕಮಲಾ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಸುಕುಮಾರ್ ಮೋಹನ್ ಸ್ವಾಗತಿಸಿ, ಪ್ರಜ್ನಾ ವಡಿಲ್ನಾಳ ನಿರೂಪಿಸಿದರು.