Wednesday, July 6, 2022
spot_img
Homeಅಂಕಣಆರೋಗ್ಯಧಾರ - ಕೆಮ್ಮಿಗೆ ಹಾಕಿ ಕಡಿವಾಣ

ಆರೋಗ್ಯಧಾರ – ಕೆಮ್ಮಿಗೆ ಹಾಕಿ ಕಡಿವಾಣ

ಚಳಿಗಾಲದಲ್ಲಿ ಅಧಿಕವಾಗಿ ನೆಗಡಿ, ಕೆಮ್ಮು, ಜ್ವರದ ಸಮಸ್ಯೆ ಬಾಧಿಸದವರು ಇಲ್ಲ ಎನ್ನಬಹುದು. ಎಲ್ಲೆಡೆ ಕೆಮ್ಮು ಅಧಿಕವಾಗಿ ಕಂಡುಬರುತ್ತಿದೆ. ಇದು ವೈರಸ್ ನಿಂದ ಆಗಬಹುದು ಅಥವಾ ಋತುಗಳ ವೈಪರಿತ್ಯಗಳಿಂದ ಕೂಡ ಇರಬಹುದು. ಒಣಕೆಮ್ಮುಅಥವಾ ಕಫಯುಕ್ತ ಕೆಮ್ಮು ಇರಬಹುದು ಅದು ಅನುಭವಿಸಿದವರಿಗೇ ಗೊತ್ತು ಅದರ ಕಷ್ಟ. ಆಯುರ್ವೇದದಲ್ಲಿ ಕೆಮ್ಮಿಗೆ ಕಾಸ ಎಂದು ಕರೆಯುತ್ತಾರೆ. ಇದು ರೋಗವೂ ಹೌದು ಬೇರೆ ರೋಗದ ಲಕ್ಷಣ ಕೂಡ ಆಗಬಹುದು. ಇವತ್ತು ಕೆಮ್ಮು ಇದ್ದಾಗ ಮನೆಯಲ್ಲಿ ಏನು ಮಾಡಬಹುದೆಂದು ತಿಳಿದುಕೊಳ್ಳೋಣ. ರೋಗದ ಲಕ್ಷಣವಾಗಿ ಕೆಮ್ಮು ಬಂದರೆ ಚಿಕಿತ್ಸೆ ಅವಶ್ಯಕ.
ಕಾರಣಗಳು

ವಾತದೋಷ ದುಷ್ಟಿಯಿಂದ ಮುಖ್ಯವಾಗಿ ಪ್ರಾಣವಾಯು ದುಷ್ಟಿಯಿಂದ ಬರುವುದು.ಧೂಳು, ಶುಷ್ಕ ಆಹಾರಸೇವನೆ, ಎಲರ್ಜಿ, ಅಧಿಕವಾಗಿ ಥಂಡಿ ಪ್ರದೇಶದಲ್ಲಿ ಸುತ್ತಾಡುವುದು , ಐಸ್ ಕ್ರೀಂ, ಕೋಲ್ಡ್ ಡ್ರಿಂಕ್ಸ್ ಸೇವನೆ .
ಕೆಮ್ಮಿನಲ್ಲಿ ಎರಡು ವಿಧ ಒಣ ಕೆಮ್ಮು ಹಾಗೂ ಕಫಯುಕ್ತ ಕೆಮ್ಮು . ಒಣಕೆಮ್ಮಿನಲ್ಲಿ ವಾತದೋಷ ಅಧಿಕವಿರುವುದು. ಕಲ್ಲು ಸಕ್ಕರೆಯನ್ನು ಚೀಪುವುದರಿಂದ ಒಣಕೆಮ್ಮು ತಕ್ಷಣ ಕಡಿಮೆಯಾಗುವುದು. ಬಿಸಿನೀರಿನ ಸೇವನೆ ಅವಶ್ಯಕ. ಹೃದಯ ಭಾಗವನ್ನು ಹಾಗೂ ಬೆನ್ನಿನ ಮೇಲೆ ಎಳ್ಳೆಣ್ಣೆ, ಸಾಸಿವೆ ಎಣ್ಣೆ ಅಥವಾ ಕರ್ಪೂರ ಎಣ್ಣೆ ಹಚ್ಚುವುದರಿಂದ ಲಾಭವಿದೆ. ಕರ್ಪೂರವನ್ನು ಎಳ್ಳೆಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಕರಗಿಸಿ ಸ್ವಲ್ಪ ಬಿಸಿ ಇರುವಾಗ ಹೃದಯ ಭಾಗಕ್ಕೆ ಹಚ್ಚಿ .ಚಿಕ್ಕ ಮಕ್ಕಳಿಗೂ ಕೂಡ ಹಚ್ಚಬಹುದು .ಅಧಿಕ ದಿನಗಳಿಂದ ಕಾಡುವ ಒಣ ಕೆಮ್ಮು ಇದ್ದರೆ ಯಷ್ಟಿಮಧು ಅತ್ಯುಪಯೋಗಿ. ಇದು ವಾತ ಹಾಗೂ ಪಿತ್ತವನ್ನು ಕಡಿಮೆ ಮಾಡುತ್ತದೆ. ಯಷ್ಟಿಮಧುವಿನ ಸಣ್ಣ ಸಣ್ಣ ತುಂಡು ಮಾಡಿ ಅಥವಾ ಚೂರ್ಣವನ್ನು ಮಾಡಿ ಅರ್ಧ ಚಮಚ ಚೂರ್ಣವನ್ನು ಒಂದು ಚಮಚ ಜೇನುತುಪ್ಪದ ಜೊತೆ ಖಾಲಿಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿ. ಜ್ವರವಿದ್ದರೆ ಅದು ಕೂಡ ಕಡಿಮೆಯಾಗುವುದು. ದೇಹದ ಸುಸ್ತು ಕೂಡ ಕಡಿಮೆಯಾಗುವುದು.ರಾತ್ರಿ ಅರಿಶಿನ ಚೂರ್ಣ ಕಾಲು ಚಮಚ ಬಿಸಿ ಹಾಲಿಗೆ ಹಾಕಿ ಕಲ್ಲುಸಕ್ಕರೆ ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುವುದು. ಕರಿಮೆಣಸನ್ನು ಜಜ್ಜಿ ತುಪ್ಪದಲ್ಲಿ ಸ್ವಲ್ಪ ಹುರಿದು ಸೇವಿಸುವುದರಿಂದ ಒಣಕೆಮ್ಮನ್ನು ಗುಣಪಡಿಸಬಹುದು .
ಕಫಯುಕ್ತ ಕೆಮ್ಮಿಗೆ ಶುಂಠಿ ರಸದ ಸೇವನೆ ಬಹಳ ಉಪಯೋಗಿ. ಶುಂಠಿಯನ್ನು ಜಜ್ಜಿ ರಸವನ್ನು ತೆಗೆದು ಅರ್ಧ ಚಮಚ ಶುಂಠಿ ರಸವನ್ನು ಒಂದು ಚಮಚ ಜೇನುತುಪ್ಪದ ಜೊತೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಆರೋಗ್ಯದ ಸಮಸ್ಯೆ ಇರುವಾಗ ನಮ್ಮ ಜೀರ್ಣ ಶಕ್ತಿ ಕುಂದುವುದು ಶುಂಠಿ ಸೇವಿಸುವುದರಿಂದ ಜೀರ್ಣಶಕ್ತಿ ಕೂಡ ಸರಿಪಡಿಸಬಹುದು.ತ್ರಿಕಟು ಚೂರ್ಣ ಅರ್ಧ ಚಮಚ ಒಂದು ಚಮಚ ಜೇನುತುಪ್ಪದ ಜೊತೆ ಸೇವಿಸಿದರೆ ಕಫಯುಕ್ತ ಕೆಮ್ಮು ಮಾಯವಾಗುವುದು. ಬಿಸಿನೀರಿನ ಸೇವನೆ ಅವಶ್ಯಕ. ಶುಂಠಿ ಕರಿಮೆಣಸು ಹಿಪ್ಪಲಿಯ ಸಮಪ್ರಮಾಣ ಚೂರ್ಣವನ್ನು ತ್ರಿಕಟು ಚೂರ್ಣವೆನ್ನುತ್ತಾರೆ .ನಾಕೈದು ತುಳಸಿಯ ಎಲೆ, ಅರ್ಧ ಚಮಚ ಕರಿಮೆಣಸಿನ ಹುಡಿ, ಸ್ವಲ್ಪ ಶುಂಠಿ, ಕಾಲು ಚಮಚ ಅರಶಿನ ಹುಡಿ, ಬೆಲ್ಲ 2 ಗ್ಲಾಸ್ ನೀರು ಹಾಕಿ ಕುದಿಸಿ ಅರ್ಧ ಕಪ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿ.
ದೀರ್ಘಕಾಲದ ಕೆಮ್ಮು ಇದ್ದರೆ ವೈದ್ಯರ ಸಲಹೆ ಪಡೆದು ಔಷಧವನ್ನು ಸೇವಿಸಿ .
ಆಯುರ್ವೇದ ಔಷಧಿಗಳು

ಕಂಟಕಾರಿ ಘೃತ, ರಾಸ್ನಾದಿ ಘೃತ, ಅಗಸ್ತ್ಯ ಹರೀತಕಿ ,ಪಿಪ್ಪಲ್ಯಾದಿ ಲೇಹ, ಸೀತೋಪಲಾದಿ ಚೂರ್ಣ, ತಾಲೀಸಾದಿ ಚೂರ್ಣ, ಶ್ವಾಸಕುಠಾರ ರಸ, ಲಕ್ಷ್ಮಿ ವಿಲಾಸ ರಸ, ರಸ ಸಿಂಧೂರ.

ಡಾ.ಹರ್ಷಾ ಕಾಮತ್










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!