ಕಾರ್ಕಳ : ನಗರದ ಮಣ್ಣಗೋಪುರ ಬಳಿ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿಗಳು ಕಸವನ್ನು ವಿಂಗಡಿಸದೇ ರಸ್ತೆ ಬದಿ ಸುರಿಯುತ್ತಿರುವ ಪರಿಣಾಮ ಪುರಸಭೆಯವರು ಕಸ ವಿಲೇವಾರಿ ಮಾಡುತ್ತಿಲ್ಲ. ಕಳೆದ 4 ದಿನಗಳಿಂದ ಈ ಪರಿಸರದಿಂದ ಕಸ ವಿಲೇವಾರಿಯಾಗದೇ ಪರಿಸರ ದುರ್ನಾಥ ಬೀರುತ್ತಿದೆ.
ಮನವಿಗೆ ಸ್ಪಂದನೆಯಿಲ್ಲ
ಕಸವನ್ನು ವಿಂಗಡಿಸಿ ಕೊಡುವಂತೆ ಪುರಸಭೆ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಕೆಲವರು ಕಸ ವಿಂಗಡಿಸದೇ ತೊಟ್ಟಿಗೆ ಸುರಿಯುವುದು ಕಂಡುಬರುತ್ತಿದೆ. ತ್ಯಾಜ್ಯ ರಸ್ತೆ ಬದಿಯಿರುವುದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡೇ ನಡೆದಾಡಬೇಕಿದೆ. ಪ್ರಾಣಿ ಪಕ್ಷಿಗಳು ಕೂಡ ತ್ಯಾಜ್ಯವನ್ನಎಲ್ಲೆಂದರಲ್ಲಿ ಚೆಲ್ಲುತ್ತಿದೆ.
ನಗರದ ಸೌಂದರ್ಯ ತೊಡಕು
ಸ್ವಚ್ಛ ಕಾರ್ಕಳವಾಗಬೇಕೆನ್ನುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ನಿರಂತರವಾಗಿ ಸಚ್ಛತಾ ಕಾರ್ಯ ನಡೆಸಿದರೆ ಕೆಲವೊಂದು ಅನಾಗರಿಕರು ಎಲ್ಲೆಂದರಲ್ಲಿ ಕಸ ಬಿಸಾಡಿ ನಗರದ ಸೌಂದರ್ಯ ಕೆಡಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಇದಕ್ಕೆ ಕಡಿವಾಣ ಹಾಕುವುದು ಕಷ್ಟಸಾಧ್ಯ.