ಸಾರ್ವಜನಿಕ ವಲಯದಲ್ಲಿನ ವಿವಿಧ ರೀತಿಯ ಭ್ರಷ್ಟಾಚಾರ, ಲಂಚ ಪ್ರಕರಣಗಳ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಮತ್ತು ತಪ್ಪಿತಸ್ಥ ವ್ಯಕ್ತಿಗಳ ಮತ್ತು ತಪ್ಪಿತಸ್ಥ ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವ ವಿಶೇಷ ಅಧಿಕಾರವನ್ನುಕರ್ನಾಟಕ ಲೋಕಾಯುಕ್ತ ಹೊಂದಿದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿದ್ದು ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಅವರಿಗೆ ದೂರು ಸಲ್ಲಿಸಲು ಅವಕಾಶವಿದೆ.
ಸಾರ್ವಜನಿಕ ನೌಕರ ಯಾವುದೇ ವ್ಯಕ್ತಿಯ ಕೆಲಸವನ್ನು ಮಾಡಿಕೊಡಲು ಅಕ್ರಮ ಸಂಭಾವನೆಯನ್ನು ಅಪೇಕ್ಷಿಸಿದಲ್ಲಿ ನೊಂದ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಾಗ ಸಂಬಂಧಪಟ್ಟ ಅಧಿಕಾರಿ ದೂರನ್ನು ನೋಂದಾಯಿಸಿಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕರ್ನಾಟಕ ಲೋಕಾಯುಕ್ತ ಪ್ರತ್ಯೇಕವಾದ ಪೊಲೀಸ್ ಅಧಿಕಾರಿಗಳ ಕಚೇರಿಯನ್ನು ಹೊಂದಿರುತ್ತದೆ. ಸಾರ್ವಜನಿಕರಿಂದ ಪಡೆಯುವ ದೂರನ್ನು ಅವರು ತನಿಖೆ ಮಾಡಿದಾಗ ಅಪರಾಧ ಆಗಿದೆಯೆಂದು ಮನವರಿಕೆಯಾದಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮತ್ತು ದೂರಿನ ಬಗ್ಗೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಂಗ್ರಹವಾದಾಗ ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸುವ ಅಧಿಕಾರವನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಹೊಂದಿರುತ್ತಾರೆ. ಅನಂತರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ಆ ನೌಕರ ಭ್ರಷ್ಟನೆಂದು ಕಂಡು ಬಂದಲ್ಲಿ ಅವನಿಗೆ ಶಿಕ್ಷೆಯನ್ನು ವಿಧಿಸಲು ಅವಕಾಶವಿರುತ್ತದೆ. ಇದಲ್ಲದೆ ಈ ಭ್ರಷ್ಟಾಚಾರದ ಆರೋಪ ಸರ್ಕಾರಿ ನೌಕರನ ಮೇಲೆ ಇದ್ದಾಗ ಸೇವಾ ನಿಯಮಾವಳಿಗಳ ಪ್ರಕಾರ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಆಜ್ಞೆ ಮಾಡಲು ಅವಕಾಶವಿದೆ.
ಯಾವುದೇ ಸಾರ್ವಜನಿಕ ನೌಕರ ಗೊತ್ತಾದ ಆದಾಯದ ಮೂಲಕ್ಕಿಂತಲೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾನೆಂಬುದು ಕಂಡು ಬಂದಲ್ಲಿ ಆ ಬಗ್ಗೆಯೂ ಸಹಾ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೊಷಾರೋಪಣ ಪತ್ರವನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರ ಕುಂದುಕೊರತೆಗಳಿಗೆ ಸಂಬಂಧಪಟ್ಟಂತೆ ದುರಾಡಳಿತದ ವಿರುದ್ಧ ಯಾರಾದರೂ ತಾನು ಅನ್ಯಾಯಕ್ಕೆ ಅಥವಾ ತೊಂದರೆಗೆ ಒಳಗಾಗಿದ್ದೇನೆಂದು ದೂರು ನೀಡಿದ್ದಲ್ಲಿ ಈ ಬಗ್ಗೆ ವಿವರವಾದ ವಿಚಾರಣೆ ಮಾಡುವ ಅಧಿಕಾರವನ್ನು ಕರ್ನಾಟಕ ಲೋಕಾಯುಕ್ತ ಹೊಂದಿದೆ.

ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681