ಬೆಂಗಳೂರು: ಮುಖ್ಯಮಂತ್ರಿಯಾದ ನಂತರ ಬಸವರಾಜ ಬೊಮ್ಮಾಯಿಯವರು ಮಾರ್ಚ್ ಮೊದಲ ವಾರದಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಈ ನಿಟ್ಟಿನಲ್ಲಿ ಫೆ.2 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಲಾಖಾವಾರು ಬಜೆಟ್ ಪೂರ್ವ ಸಭೆಗಳು ಮುಂದಿನವಾರ ನಡೆಯಲಿದೆ. ವಿವಿಧ ಯೋಜನೆಗಳಿಗೆ ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಲ್ಲಿ ಎಷ್ಟು ಅನುದಾನ ಸಿಕ್ಕಿದೆ ಎಂದು ಇನ್ನೆರಡು ಮೂರು ದಿನಗಳಲ್ಲಿ ನಮಗೆ ಸ್ಪಷ್ಟವಾಗಿ ಗೊತ್ತಾಗಲಿದೆ. ಅದರ ಆಧಾರದ ಮೇಲೆ ರಾಜ್ಯ ಬಜೆಟ್ ನ್ನು ಮಂಡಿಸಲಾಗುತ್ತದೆ
ಫೆಬ್ರವರಿ 7ರಂದು ಮುಖ್ಯಮಂತ್ರಿ ಸಚಿವಾಲಯದಲ್ಲಿ ಬಜೆಟ್ ಪೂರ್ವ ಸಭೆ ನಿಗದಿಯಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳು ಅದೇ ದಿನ ದೆಹಲಿಗೆ ಹೋಗುತ್ತಿರುವುದರಿಂದ ಸಭೆ ಮುಂದೂಡಲಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ನೀಡಿರುವ ಸಾಲ ಮತ್ತು ಅನುದಾನವನ್ನು ಆಧರಿಸಿ ಸರ್ಕಾರವು ಬಜೆಟ್ ಅನ್ನು ರಚಿಸುತ್ತದೆ. ನಾವು ಕರ್ನಾಟಕದಲ್ಲಿ ಜಾರಿಗೆ ತರಬೇಕಾದ ಯೋಜನೆಗಳ ಬಗ್ಗೆ ನಿರ್ಧರಿಸುತ್ತೇವೆ. ಈಗಾಗಲೇ ಪೂರ್ಣಗೊಳಿಸಿರುವ 1008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಪುನರುತ್ಥಾನಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹೆದ್ದಾರಿಗಳನ್ನು ಕೆಎಸ್ ಹೆಚ್ ಪಿ, ಎಸ್ ಹೆಚ್ ಡಿ ಪಿ ಮತ್ತು ಕೆ ಆರ್ ಡಿ ಎಲ್ ಅಭಿವೃದ್ಧಿಪಡಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಅಧಿಕಾರಿಗಳ ಸಭೆ
ಸಿಎಂ ಬೊಮ್ಮಾಯಿ ಅವರು ರಸ್ತೆ ಯೋಜನೆಗಳ ಅವಶ್ಯಕತೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಸರ್ಕಾರಿ ಕಟ್ಟಡಗಳಲ್ಲಿ ಬಳಸುತ್ತಿರುವ ಎಲ್ಲಾ ಕಟ್ಟಡ ಸಾಮಗ್ರಿಗಳ ಏಕರೂಪದ ದರ ಪಟ್ಟಿಯನ್ನು ಪಿಡಬ್ಲ್ಯೂಡಿ ಅಡಿಯಲ್ಲಿ ಬರುವ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳಿಗೆ ಅನ್ವಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಶೈಲದಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಬೋರ್ಡಿಂಗ್ ಕಾಂಪ್ಲೆಕ್ಸ್‌ನ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನೂ ಪರಿಶೀಲಿಸಿದ ಸಿಎಂ, ವಿವಿಧ ಯೋಜನೆಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಿದ್ದಾರೆ. ಸಮಿತಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ) ವರದಿ ಆಧರಿಸಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಪರಿಸರ ನಷ್ಟವನ್ನು ಅಂದಾಜಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಷ್ಟವನ್ನು ಸರಿದೂಗಿಸಲು ‘ಪರಿಸರ ಬಜೆಟ್’ ಸಿದ್ಧಪಡಿಸಬೇಕೆಂದು ಹೇಳಿದ್ದಾರೆ.
ಕೃಷಿ-ಅರಣ್ಯದ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡಿರುವ ಮುಖ್ಯಮಂತ್ರಿಗಳು, ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಮತ್ತು ಬೆಳೆ ನಾಶ ಮತ್ತು ಜೀವಹಾನಿಯನ್ನು ತಡೆಯಲು ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆ: ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ
