ದಾವಣಗೆರೆ: ಆಡಳಿತಾರೂಢ ಬಿಜೆಪಿಯ ಶಾಸಕರ ಕರೆ ಸ್ವೀಕರಿಸಲು ಸಿದ್ಧರಿಲ್ಲದ ದುರಹಂಕಾರಿ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡುವಂತೆ ಬಿಜೆಪಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದುರಹಂಕಾರಿ ಸಚಿವರಿಗೆ ಕ್ಷೇತ್ರದ ಕಾಮಗಾರಿಗಳು ಸರಿಯಾಗಿ ಆಗುವುದಾಗಲಿ, ಶಾಸಕರ ಕರೆಗಳನ್ನು ಸ್ವೀಕರಿಸುವುದರಲ್ಲಾಗಲೀ ಆಸಕ್ತಿಯಿಲ್ಲ. ಅವರಿಗೆ ಸರ್ಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ, ಹೀಗಾಗಿ ಅಂತಹ ಸಚಿವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಪಕ್ಷನಿಷ್ಠರಿಗೆ ಅವಕಾಶ ಕೊಡಬೇಕು. 15ಕ್ಕೂ ಹೆಚ್ಚು ಸಚಿವರು ನಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಡೆಪಕ್ಷ ನಮ್ಮನ್ನು ಗೌರವದಿಂದಲೂ ಕಾಣುವುದಿಲ್ಲ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದೊಳಗೆ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ಇದೆ ಎಂದು ತಿಳಿಸಿದರು.
ನಮಗೆ ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಬಗ್ಗೆ ಅಪಾರ ಗೌರವವಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೂ ಇದನ್ನು ತರಲಿದ್ದೇವೆ. ನಾನು ಸರ್ಕಾರ ಅಥವಾ ಸಂಘಟನೆ ವಿರುದ್ಧವಾಗಿ ಮಾತನಾಡುತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಐದು ನಿಮಿಷದಲ್ಲೇ ಭೇಟಿಯಾಗಿ ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳು, ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಬಹುದಿತ್ತು. ಈಗಲೂ ಕೂಡ ಬೊಮ್ಮಾಯಿ ಅವರು ನಮ್ಮನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ಕೆಲವು ದುರಹಂಕಾರಿ ಸಚಿವರಿಂದ ಮುಜುಗರ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.