ಹೆಬ್ರಿ : ಸರ್ವಧರ್ಮೀಯರ ಆರಾಧನ ಕೇಂದ್ರ ಪ್ರಕೃತಿ ರಮಣೀಯ ತಾಣ ಮುದ್ರಾಡಿಯ ಶ್ರೀ ಆದಿಶಕ್ತಿ ದೇವಸ್ಥಾನವು ಸಂಪೂರ್ಣವಾಗಿ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದು, ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ. ಶ್ರೀ ಧರ್ಮಯೋಗಿ ಮೋಹನ್ ಸ್ವಾಮೀಜಿ ಅವರ ಸಾಧನಾ ಕ್ಷೇತ್ರದಲ್ಲಿ ಇದೀಗ ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ, ಹೊರಾಂಗಣ, ದ್ವಾರದಲ್ಲಿ ಸಿಂಹ ಕಂಬಗಳು, ತಾಮ್ರದ ಮುಚ್ಚಿಗೆ, ಒಳಾಂಗಣಕ್ಕೆ ಗ್ರಾನೈಟ್, ದೇವಸ್ಥಾನದ ಸುತ್ತ ಆಕರ್ಷಕ ಶಿಲಾ ಕೆತ್ತನೆಗಳ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಪರಿವಾರ ದೈವಗಳ ಗುಡಿ ನಿರ್ಮಾಣ ಗೊಂಡಿವೆ.

ಶಿಲ್ಪಿ ಮಾಧವ ಆಚಾರ್ಯರ ಕೆತ್ತನೆ
ಕಾಷ್ಠ ಶಿಲ್ಪಿ ಉಡುಪಿ ಮಾಧವ ಆಚಾರ್ಯರ ಆಕರ್ಷಕ ಕೆತ್ತನೆಗಳು ದೇವಸ್ಥಾನದ ಕಳೆಯನ್ನು ಹೆಚ್ಚಿಸಿವೆ. ಕಾರ್ಕಳ ಕಲ್ಲೋಟ್ಟೆಯ ಶಿಲ್ಪಿ ಕೆ. ಗಣೇಶ್ ಅವರಿಂದ ಸುಂದರ ಶಿಲಾ ಕೆತ್ತನೆಗಳು ಇನ್ನಷ್ಟು ಮೆರುಗು ನೀಡಿವೆ. ಅಷ್ಟಮಂಗಲ ದೇವ ಪ್ರಶ್ನೆಯಿಂದ ತಿಳಿದು ಬಂದಂತೆ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಪೂಜ್ಯರಾದ ಧರ್ಮಯೋಗಿ ಮೋಹನ್ಸ್ವಾಮೀಜಿ ಅವರ ತಪಸ್ಸು ಮತ್ತು ಸಾಧನೆ ಸಿದ್ಧಿಯ ಕ್ಷೇತ್ರ ಎಂದು ಕ್ಷೇತ್ರದ ಆಡಳಿತ ಮೋಕ್ತೇಸರ ಸುಕುಮಾರ್ ಮೋಹನ್ ತಿಳಿಸುತ್ತಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೇ ಮುಂಬಯಿ, ಪೂನಾ, ಸಾಂಗ್ಲಿ, ಗುಜರಾತ್, ಬೆಂಗಳೂರು, ದುಬೈ, ಮಸ್ಕತ್ ಸಹಿತ ದೇಶವಿದೇಶಗಳಲ್ಲೂ ಮುದ್ರಾಡಿ ಶ್ರೀಆದಿಶಕ್ತಿ ತಾಯಿಯ ಭಕ್ತರಿದ್ದಾರೆ. ಹಿಂದೂ ಮುಸ್ಲಿಂ, ಜೈನ, ಕ್ರೈಸ್ತ ಧರ್ಮಗಳ ಭಕ್ತರು ಕೂಡ ಆದಿಶಕ್ತಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಬ್ರಹ್ಮ ಬೈದರ್ಕಳ ಗರಡಿ, ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ, ನಂದಿಕೇಶ್ವರ ದೇವಸ್ಥಾನವೂ ಈಗಾಗಲೇ ನಿರ್ಮಾಣಗೊಂಡಿದೆ. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದೆ.
ಬ್ರಹ್ಮಕಲಶೋತ್ಸವ
ಮಂಗಳೂರಿನ ಡಾ. ಆರೂರು ಪ್ರಸಾದ್ ರಾವ್, ಆದಿಶಕ್ತಿ ಕ್ಷೇತ್ರದ ಮೋಕ್ತೇಸರ ಸುಕುಮಾರ್ ಮೋಹನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅವರ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಫೆ ೨ರಿಂದ ೪ ರತನಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಜರಗಲಿದೆ. ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ ಸಂಚಾಲಕತ್ವ ನೆರವೇರಲಿದೆ. ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಉಪಸಮಿತಿ ರಚಿಸಲಾಗಿದೆ. ವಿವಿಧ ಸಂಘಸಂಸ್ಥೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶ್ರಮಿಸುತ್ತಿದ್ದಾರೆ.
ದೇಣಿಗೆ ನೀಡಲಿಚ್ಚಿಸುವವರು
ಕರ್ನಾಟಕ ಬ್ಯಾಂಕ್ ಚಾರ ಶಾಖೆಯ ಖಾತೆ ನಂಬ್ರ – ೧೭೮೨೫೦೦೧೦೦೧೪೭೩೦೧. ಐಎಫ್ಎಸ್ ಸಿ ಕೋಡ್ ಕೆಎಆರ್ಬಿ ೦೦೦೦೧೭೮ ಕ್ಕೆ ದೇಣಿಗೆ ನೀಡುವಂತೆ ಸಮಿತಿಯವರು ಕೋರಿದ್ದಾರೆ.