“ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ|
ಮಿತ ಅತಿಗಳಂತರವ ಕಾಣುವುದೆ ಕಡಿದು||
ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು|
ಕೃತಿಯಿರಲಿ ದೈವಕಂ-ಮಂಕುತಿಮ್ಮ||”.

ಜೀವನದಲ್ಲಿ ಎಲ್ಲವನ್ನೂ ನಾನೇ ಸಾಧಿಸುತ್ತೇನೆ. ಅದಕ್ಕೆ ಬೇಕಾದ ಸರ್ವಶಕ್ತಿಯೂ ನನ್ನ ಕೈಯಲ್ಲಿದೆ ಎನ್ನುವುದು ಕೇವಲ ನಮ್ಮ ಭ್ರಮೆ. ನಮ್ಮ ಗುಣ ಮತ್ತು ಶಕ್ತಿಗೆ ಒಂದು ಮಿತಿಯಿದೆ. ನಮ್ಮ ಕರ್ತವ್ಯಕ್ಕೂ ಒಂದು ಮಿತಿಯಿದೆ. ಈ ಮಿತ ಮತ್ತು ಅತಿಗಳ ಅಂತರವನ್ನು ಅರಿಯುವುದು ಕಷ್ಟ. ಯಾವುದು ಹಿತವಾದುದು ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ನಮ್ಮ ಕರ್ತವ್ಯವೇನು ಎಂಬುದನ್ನು ತಿಳಿದುಕೊಂಡು ನಮ್ಮ ಶಕ್ತಿಯ ಮಿತಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ನಮಗಾಗದೆ ಉಳಿದಿರುವುದನ್ನು ದೈವಕ್ಕೆ ಬಿಡಬೇಕು. ದೈವಕ್ಕೂ ಸ್ವಲ್ಪ ಕೆಲಸ ಇಡಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ಮನುಷ್ಯ ಶಕ್ತಿಗೂ ಒಂದು ಮಿತಿಯಿದೆ. ದೈವ ಬಲವಿಲ್ಲದೆ ಮಾನವನ ಯಾವ ಕಾರ್ಯವೂ ಪರಿಪೂರ್ಣವಾಗದು. ಭಗವಂತ ಎಲ್ಲಾ ಹೊಣೆಗಾರಿಕೆಯನ್ನು ನಮಗೆ ಹೊರಿಸಿಲ್ಲ. " ಬರಿ ಧೈರ್ಯ ಬಾಹುಬಲ ಮೇಣ್ಮೇರುಸಾಹಸವು| ತರಲಾರವೈ ಜಯವ ಮನುಜ ನಿನಗೆ| ನೆರವೀಯದಿರೆ ಪೂರ್ವಸುಕೃತ ಮೇಣ್ದೈವಬಲ| ದೊರೆಯಲಾಗದು ಸಿದ್ದಿ-ಬೋಳುಬಸವ" ಎಂಬ ನಿಜಗುಣ ಮಾತಿನಂತೆ ಮಾನವ ಶಕ್ತಿ ಮತ್ತು ಪ್ರಯತ್ನದೊಂದಿಗೆ ದೈವದ ಅನುಗ್ರಹವೂ ಇದ್ದರೆ ಮಾತ್ರ ಕಾರ್ಯಸಾಧನೆ ಸಾಧ್ಯ. ನಮ್ಮ ಶಕ್ತಿ ಮಿತ ಆದರೆ ದೈವದ ಶಕ್ತಿ ಅಮಿತ. ಪೂರ್ವಕರ್ಮ ಮತ್ತು ವಿಧಿಯ ನಿಯಮದೊಂದಿಗೆ ನಮ್ಮ ಪ್ರಯತ್ನವು ಹೊಂದಿಕೆಯಾದಗಲೆ ಯಶಸ್ಸು ಪ್ರಾಪ್ತವಾಗುವುದು.
“ಮಾಡಿದೆನು ನಾನೆಂಬ ಮಮಕಾರ ನಿನಗೇಕೊ,ಮಾಡಲಿಕೆ ಬಿಡಲಿಕ್ಕೆ ನಿನ್ನಿಚ್ಚೆಯೆ, ಮಾಡಿದರು ಬಿಟ್ಟರುಂ ನಿನ್ನತನವೇನುಂಟು, ಮಾಡಿ ಬಿಡೆ ದೈವಚ್ಚೆ” ಎಂಬ ಕವಿವಾಣಿಯನ್ನು ಅರಿತು ನಡೆಯಬೇಕು. “ಕಾಯೇನಾ ವಾಚಾ ಮನಸೇಂದ್ರಿಯೈರ್ವಾ,ಬುಧಾತ್ಮನಾ ಪ್ರಕೃತೇಃ ಸ್ವಭಾವಾತ್, ಕರೋಮಿಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಮಿ” ಅಂದರೆ ನನ್ನ ಸ್ವಭಾವಕ್ಕೆ ಅನುಗುಣವಾಗಿ ನಾನು ನನ್ನ ಮನಸ್ಸು ಇಂದ್ರಿಯ, ಬುದ್ದಿ,ಆತ್ಮ ಇವುಗಳಿಂದ ಏನೇನನ್ನು ಮಾಡುತ್ತೇನೆಯೋ ಅವೆಲ್ಲವನ್ನು ಎಲ್ಲವುಗಳಿಂದ ಬೇರೆಯಾದ ಉತ್ತಮನಾದವನಿಗೆ ನಾರಾಯಣ ಎಂಬ ಶಬ್ದೋಚ್ಚಾರದಿಂದ ಸಮರ್ಪಿಸುತ್ತೇನೆ ಎಂದು.ವಿಷ್ಣುನಾಮದ ಈ ಶ್ಲೋಕ ಹೇಳುವಂತೆ ನಮ್ಮೆಲ್ಲಾ ಕಾರ್ಯಸಾಧನೆಗಳನ್ನು ನಮ್ಮನ್ನೆಲ್ಲಾ ಸಲಹುವ ಆ ದಿವ್ಯಶಕ್ತಿಗೆ ಅರ್ಪಿಸಿದಾಗ ನಮ್ಮಲ್ಲಿ ಅಹಂಕಾರ ಬೆಳೆಯುವುದಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲವೂ ನನ್ನಿಂದ ಸಾಧ್ಯವೆನ್ನುವ ಭ್ರಮೆಯಿಂದ ಹೊರಬಂದು ಸಕಲವೂ ಅವನಿಂದವೆನ್ನುವ ವಾಸ್ತವವನ್ನು ಅರಿತಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.