ಕಾರ್ಕಳ : ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅವರ ಮೇಲೆಯೇ ಕಾರು ಹರಿಸಲೆತ್ನಿಸಿದ ಘಟನೆ ಬಜಗೋಳಿ ಸಮೀಪ ಹೆಪೆಜಾರು ಎಂಬಲ್ಲಿ ಜ. 30ರ ಮುಂಜಾನೆ ನಡೆದಿದೆ.
ಕಾರ್ಕಳ ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ ಟಿ.ಐ. ಅವರು ಪೊಲೀಸರಾದ ರಂಜಿತ್ ಕುಮಾರ್, ಸತೀಶ್ ನಾಯ್ಕ ಅವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಬೆಳಗಿನ ಜಾವ 3:15ರ ವೇಳೆಗೆ ಮುಡಾರು ಗ್ರಾಮ ಹೆಪೆಜಾರುವಿನಲ್ಲಿ ಅಳವಡಿಸಿದ ಬ್ಯಾರಿಕೇಡ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಬಜಗೊಳಿ ಕಡೆಯಿಂದ ಮಾಳ ಕಡೆಗೆ ಓರ್ವ ಬೈಕ್ ಸವಾರ ಹಾಗೂ ಒಂದು ಕಾರು ಅತಿ ವೇಗವಾಗಿ ಬರುತ್ತಿತ್ತು. ಎಸ್ಐ ಅವರು ಬೈಕ್ ಹಾಗೂ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ ಅವರು ವಾಹನ ನಿಲ್ಲಸದೇ ಬ್ಯಾರಿಕೇಡ್ ಗೆ ಹೊಡೆದು ಪೋಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ರಸ್ತೆಗೆ ಹಾರಿದ ಪರಿಣಾಮ ಎಸ್ಐ ಹಾಗೂ ರಂಜಿತ್ ಅವರ ಕೈಗೆ ಗಾಯವಾಗಿದೆ.
ಬೆನ್ನತ್ತಿದ್ದ ಪೊಲೀಸರು
ಈ ವೇಳೆ ಪೊಲೀಸರಿಗೆ ಕಾರಿನಲ್ಲಿ ದನಗಳಿರುವುದು ದೃಢಪಟ್ಟಿದ್ದು, ಕಾರಿನ ಚಾಲಕ ಹಾಗೂ ಮತ್ತೊರ್ವ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಪೊಲೀಸ್ ಜೀಪಿನಲ್ಲಿ ಕಾರು ಹಾಗೂ ಬೈಕ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಸುಮಾರು 3 ರಿಂದ 4 ಕಿ. ಮೀ. ದೂರ ಹುಕ್ರಟ್ಟೆ ಕ್ರಾಸ್ ಬಳಿ ಬೈಕ್ ( 19-HF-9683)ಸವಾರನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ತೀರಾ ಎಡಭಾಗಕ್ಕೆ ತಿರುಗಿಸುವ ವೇಳೆ ಬೈಕ್ ಸಹಿತ ರಸ್ತೆ ಬದಿಯ ಚರಂಡಿಗೆ ಬಿದ್ದಿರುತ್ತಾನೆ.
ಬೈಕ್ ಅನ್ನು ಅಲ್ಲಿಯೇ ಬಿಟ್ಟು ಓಡಲು ಯತ್ನಿಸಿದಾಗ ಪೊಲೀಸರು ಬೈಕ್ ಸವಾರ ಸಯ್ಯದ್ ಜುಹಾದ್ ಎಂಬಾತನನ್ನು ವಶಕ್ಕೆ ಪಡೆದಿರುತ್ತಾರೆ. ಕಾರು ಚಾಲಕ ಹಾಗೂ ಅದರಲ್ಲಿದ್ದ ಮತ್ತೋರ್ವ ಪರಾರಿಯಾಗಿದ್ದಾರೆ.
ಮೊದಲ ಯಶಸ್ಸು
ಕಾರ್ಕಳ ತಾಲೂಕಿನಾದ್ಯಂತ ನಿರಂತರವಾಗಿ ದನಕಳ್ಳತನವಾಗುತ್ತಿತ್ತು. ಇದರಿಂದ ಹೈನುಗಾರರು ಆತಂಕ್ಕೀಡಾಗಿದ್ದರು. ಪೊಲೀಸರಿಗೆ ಇದೊಂದು ಸವಾಲಿನ ಸಂಗತಿಯಾಗಿತ್ತು. ದನಕಳ್ಳತನದ ಕುರಿತು ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು. ಹಿಂದೂ ಪರ ಸಂಘಟನೆಗಳು ದನಕಳ್ಳರ ಪತ್ತೆಗಾಗಿ ಪ್ರತಿಭಟನೆ ನಡೆಸಿದ್ದರು. ಸಚಿವ ಸುನಿಲ್ ಕುಮಾರ್ ಅವರು 15 ದಿನದೊಳಗಡೆ ದನಕಳ್ಳರ ಪತ್ತೆ ಹಚ್ಚುವಂತೆ ತಾಕೀತು ಮಾಡಿದ್ದರು.
ರಾತ್ರಿಯಿಡೀ ಪೊಲೀಸರ ಗಸ್ತು
ಕಳೆದ ಒಂದು ತಿಂಗಳಿನಿಂದ ದನಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ರಾತ್ರಿಯಿಡೀ ರೌಂಡ್ಸ್ ನಡೆಸುತ್ತಿದ್ದರು. ಚೆಕ್ ಪೋಸ್ಟ್ಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಹದ್ದಿನ ಕಣ್ಣಿಡಲಾಗುತ್ತಿತ್ತು. ಇದೀಗ ದನಕಳ್ಳರನ್ನು ಪತ್ತೆ ಹಚ್ಚುವ ಮೂಲಕ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.