Tuesday, July 5, 2022
spot_img
Homeಸುದ್ದಿಕಾರ್ಕಳ ತಾ.ಪಂ. ನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಕಾರ್ಕಳ ತಾ.ಪಂ. ನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಕಾರ್ಕಳ : ಕಾರ್ಕಳ ತಾಲೂಕಿನ 34 ಗ್ರಾಮ ಪಂಚಾಯತ್‌ಗಳಲ್ಲೂ ಮನೆ ರಹಿತರಿಗಾಗಿ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜಾಗ ಕಾದಿರಿಸುವಂತೆ ಸಚಿವ ಸುನಿಲ್‌ ಕುಮಾರ್‌ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಣ್ಣ ಗ್ರಾಮಗಳಲ್ಲಿ 5 ಎಕ್ರೆ, ದೊಡ್ಡ ಗ್ರಾಮಗಳಲ್ಲಿ 10 ಎಕ್ರೆ ಜಾಗವನ್ನು ನಿವೇಶನಕ್ಕಾಗಿ ಗುರುತಿಸಬೇಕು. ಜಾಗ ಕಾದಿರಿಸುವ ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ರೋಗಿಗಳಿಗೆ ತೊಂದರೆಯಾಗಬಾರದು
ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಅಲ್ಲಿನ ಸೇವೆ ಸಮರ್ಪಕವಾಗಿಲ್ಲ ಎಂಬ ದೂರು ಸಾಕಷ್ಟು ಬಾರಿ ಕೇಳಿಬರುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಿಂಚಿತ್ತೂ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅಲ್ಲಿನ ವೈದ್ಯರು, ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಸುನಿಲ್‌ ಕುಮಾರ್‌ ಆಸ್ಪತ್ರೆ ವೈದ್ಯಾಧಿಕಾರಿಗೆ ತಿಳಿಸಿದರು.

ಸಮರ್ಪಕ ಮಾಹಿತಿಯೊಂದಿಗೆ ಬನ್ನಿ
ಸಮರ್ಪಕವಾಗಿ ಅಂಕಿ ಸಂಖ್ಯೆ ನೀಡಲು ತಡವರಿಸುತ್ತಿದ್ದ ಅಧಿಕಾರಿಗಳಿಗೆ ಕ್ಲಾಸ್‌ ತಗೊಂಡ ಸಚಿವರು ಸಭೆಗೆ ಬರುವಾಗ ಸಮರ್ಪಕವಾಗಿ ಮಾಹಿತಿಯೊಂದಿಗೆ ಬರಬೇಕು ಎಂದು ತಾಕೀತು ಮಾಡಿದರು. ತಾಲೂಕಿನಲ್ಲಿ ಎಷ್ಟು ಮನೆಗಳಿವೆ ? ಎಷ್ಟು ಮನೆಗಳಿಗೆ ನಲ್ಲಿ ನೀರು ಕನೆಕ್ಷನ್ ನೀಡಲಾಗಿದೆ ? ಎಷ್ಟು ಬಾಕಿ ಇದೆ ಎಂದು ವಿಚಾರಿಸಿದಾಗ ಮಾಹಿತಿ ನೀಡಲು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಸುರೇಂದ್ರ ನಾಥ್‌ ತಡವರಿಸಿದರು. ಈ ವೇಳೆ ಮಾಹಿತಿ ಸಂಗ್ರಹಿಸಿ, ಸಭೆ ಮುಗಿಯುವ ಮುಂಚೆ ತಿಳಿಸುವಂತೆ ಸುನಿಲ್‌ ಕುಮಾರ್‌ ಹೇಳಿದರು.

ಸರಕಾರದ ಪ್ರತಿಯೊಂದು ಯೋಜನೆ ಕಾರ್ಕಳಕ್ಕೆ ಗರಿಷ್ಠ ಪ್ರಮಾಣದಲ್ಲಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಡೀಮ್ಡ್ ಅರಣ್ಯ ವಿಷಯದಲ್ಲಿ ಸರಕಾರ ದಿಟ್ಟ ಕ್ರಮ ಕೈಗೊಂಡಿದೆ. ಸರಕಾರಿ ಕಚೇರಿ ನಿರ್ಮಾಣಕ್ಕಾಗಿ ಜಾಗ ಕಾದಿರಿಸುವ ಕಾರ್ಯವಾಗಬೇಕು. ಅಗತ್ಯವಿರುವೆಡೆ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುವುದು ಎಂದರು.

ಬಜಗೋಳಿ, ಹೊಸ್ಮಾರು, ಮುಡಾರು ಭಾಗದಲ್ಲಿ ಲೋ ವೋಲ್ಟೇಜ್‌ ಸಮಸ್ಯೆಯಿದೆ. ಬೆಳಕು ಯೋಜನೆಯಡಿ 790 ಅರ್ಜಿ ಸಲ್ಲಿಕೆಯಾಗಿದ್ದು ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 200 ಅರ್ಜಿಗಳು ಹೊಸದಾಗಿ ಬಂದಿದೆ ಎಂದು ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್‌ ದಿಲೀಪ್‌ ಸಭೆಗೆ ತಿಳಿಸಿದರು.

ಕೆಲಸ ಪ್ರಾರಂಭಿಸಲಾಗಿದೆ
ಬೆಳ್ಮಣ್- ಶಿರ್ವ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಪಿಡ್ಲ್ಯುಡಿ ಇಂಜಿನಿಯರ್‌ ಸುಂದರ್‌ ಮಾಹಿತಿ ನೀಡಿದರು. ಕೋಟಿಚೆನ್ನಯ ಥೀಮ್ ಪಾರ್ಕ್ ನಿರ್ವಹಣೆ ಕಾಮಗಾರಿ ಮುಗಿದಿದೆ ಎಂದು ನಿರ್ಮಿತಿ ಕೇಂದ್ರದ ಪವನ್‌ ತಿಳಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್‌ ಕೆ. ಪುರಂದರ್‌, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಹೆಬ್ರಿ ಇಒ ಶಶಿಧರ್‌, ಆಡಳಿತಾಧಿಕಾರಿ ಪ್ರಸನ್ನ ಭಕ್ತಾ ಉಪಸ್ಥಿತರಿದ್ದರು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!