ಕಾರ್ಕಳ : ಸರಕಾರ ರಾತ್ರಿ ಕರ್ಫ್ಯೂ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿಕೊಡುವಂತೆ ಕಂಬಳ ಸಮಿತಿ ಸಚಿವ ಸುನಿಲ್ ಕುಮಾರ್ ಅವರಿಗೆ ಜ. 29ರಂದು ಮನವಿ ಸಲ್ಲಿಸಿತು.
ಕಂಬಳ ಸಮಿತಿ ಉಡುಪಿ, ದ.ಕ., ಕಾಸರಗೋಡು ಜಿಲ್ಲಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್ ಅವರ ನೇತೃತ್ವದಲ್ಲಿ ಕಾರ್ಕಳದಲ್ಲಿ ಸಚಿವರನ್ನು ಭೇಟಿ ಮಾಡಿ, ಕಂಬಳವನ್ನು ನಡೆಸಲು ಜಿಲ್ಲಾಡಳಿತ, ಸರಕಾರದಿಂದ ಅನುಮತಿ ದೊರಕಿಸಿಕೊಡುವಂತೆ ವಿನಂತಿಸಲಾಯಿತು. ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಅಡ್ವೆ ಕಂಬಳ ಸಮಿತಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ರಕ್ಷಿತ್ ಜೈನ್, ಕೋಶಾಧಿಕಾರಿ ಹರ್ಷವರ್ಧನ್ ಪಡಿವಾಳ್ ಈ ಸಂದರ್ಭದಲ್ಲಿದ್ದರು.
ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು- ಸುನಿಲ್ ಕುಮಾರ್
ನೂರಾರು ವರ್ಷಗಳ ಇತಿಹಾಸವಿರುವ, ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಲಾಗುವುದು. ಕಂಬಳ ಸಮಿತಿ ಹಾಗೂ ಕಂಬಳ ಪ್ರೇಮಿಗಳ ಒತ್ತಾಸೆಯಂತೆ ಕಂಬಳ ನಡೆಸಲು ಪೂರಕ ವಾತಾವರಣ ಕಲ್ಪಿಸಿಕೊಡುವಲ್ಲಿ ಪ್ರಯತ್ನಿಸುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದರು.