ಮಸಾಲೆ ಪದಾರ್ಥಗಳಲ್ಲಿ ಒಂದಾದ ಹಾಗೂ ಒಗ್ಗರಣೆಗೆ ಬಳಸುವಂತಹ ಸಾಸಿವೆಯ ಅತ್ಯಂತ ಆರೋಗ್ಯವರ್ಧಕ ದ್ರವ್ಯ. ಆಯುರ್ವೇದದಲ್ಲಿ ಇದರ ಬಾಹ್ಯ ಹಾಗು ಅಭ್ಯಂತರ ಪ್ರಯೋಗವನ್ನು ಮಾಡುತ್ತಾರೆ. ಮುಖ್ಯವಾಗಿ ಕ್ರಿಮಿ, ತುರಿಕೆ, ಮಾನಸಿಕ ವಿಕಾರ, ಜೀರ್ಣದ ಸಮಸ್ಯೆಗಳಲ್ಲಿ ಸಹಾಯಕಾರಿ.
ಇದರ ಗಿಡ ಮೂರರಿಂದ ಐದು ಫೀಟ್ ಎತ್ತರ ಬೆಳೆಯುತ್ತದೆ. ಎಲೆಗಳು ಹತ್ತು ಇಂಚು ಉದ್ದ, ಪುಷ್ಪವು ಹಳದಿ ವರ್ಣಯುಕ್ತವಾಗಿರುತ್ತದೆ. ಸಂಸ್ಕೃತದಲ್ಲಿ ಸರ್ಷಪ ಎಂದು ಹೆಸರು. ಇದರ ಎರಡು ಪ್ರಭೇದಗಳು ಕೃಷ್ಣ ಸರ್ಷಪ ಹಾಗೂ ರಕ್ತ ಸರ್ಷಪ. ವಿಶೇಷವಾಗಿ ಪಶ್ಚಿಮಬಂಗಾಳ, ಬಿಹಾರ, ಪಂಜಾಬ್ ನಲ್ಲಿ ಅಧಿಕವಾಗಿ ಇದರ ಕೃಷಿ ಮಾಡುತ್ತಾರೆ. ರುಚಿಯಲ್ಲಿ ಕಹಿ ಹಾಗೂ ಖಾರ ರಸ ಉಳ್ಳದ್ದು. ಉಷ್ಣವೀರ್ಯ, ತೀಕ್ಷ್ಣ, ರೂಕ್ಷ ಹಾಗೂ ಜಿಡ್ಡಿನ ಅಂಶದಿಂದ ಕೂಡಿದೆ. ಕಫ ಹಾಗೂ ವಾತ ದೋಷವನ್ನು ಸಮತೋಲನದಲ್ಲಿಡುತ್ತದೆ ಹಾಗೂ ಪಿತ್ತದೋಷವನ್ನು ಕುಪಿತಗೊಳಿಸುತ್ತದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ.
ಇದರ ಆರೋಗ್ಯ ಲಾಭಗಳು
ತ್ವಚೆಯ ರೋಗಗಳಲ್ಲಿ ಇದರ ಬೀಜದ ಚೂರ್ಣವನ್ನು ಲೇಪಿಸುವುದರಿಂದ ತುರಿಕೆ, ಅಲರ್ಜಿ ಕಡಿಮೆಯಾಗುತ್ತದೆ. ಕುಷ್ಟರೋಗದಲ್ಲಿ ಬಹೂಪಯೋಗಿ. ಸಾಸಿವೆ ಚೂರ್ಣದ ಜೊತೆ ಅರಶಿನ ಚೂರ್ಣವನ್ನು ಕೂಡ ಬೆರೆಸಬಹುದು. ಸಾಸಿವೆ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಹಣೆಗೆ ಹಚ್ಚಿದರೆ ತಲೆನೋವು ಗುಣವಾಗುವುದು. ಹಲ್ಲು ನೋವಿದ್ದಾಗ ಚೂರ್ಣವನ್ನು ಉಪ್ಪಿನ ಜೊತೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಕೈಕಾಲು ನೋವಿರುವ ಜಾಗದಲ್ಲಿ ಸಾಸಿವೆ ಎಣ್ಣೆಯ ಅಭ್ಯಂಗ ಮಾಡಿದರೆ ನೋವು ಶಮನಗೊಳ್ಳುತ್ತದೆ. ಆಹಾರವನ್ನು ಜೀರ್ಣಮಾಡುತ್ತದೆ, ಆದ್ದರಿಂದ ಇದರ ಒಗ್ಗರಣೆ ನಮ್ಮ ದೇಹಕ್ಕೆ ಒಳ್ಳೆಯದು. ಅಗ್ನಿಮಾಂದ್ಯವನ್ನು ದೂರಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಮುಖಕ್ಕೆ ದಿನಾಲು ಸಾಸಿವೆ ಎಣ್ಣೆಯ ಅಭ್ಯಂಗ ಮಾಡಿದರೆ ತ್ವಚೆಯ ಹೊಳಪು ಹೆಚ್ಚಿಸಬಹುದು. ಹೃದಯಕ್ಕೆ, ಯಕೃತ್ತಿಗೆ ಬಹಳ ಒಳ್ಳೆಯದು. ನೆಗಡಿ ಶೀತವಾದಾಗ ಸಾಸಿವೆ ಚೂರ್ಣ ಹಾಗೂ ಕರಿ ಮೆಣಸಿನ ಚೂರ್ಣ ಸಮಪ್ರಮಾಣದ ಜೇನು ತುಪ್ಪದ ಜೊತೆ ಸೇವಿಸುವುದರಿಂದ ನೆಗಡಿ ಶೀತ ಮಾಯವಾಗುವುದು. ರುಮಟಾಯಿಡ್ ಆರ್ಥ್ರೈಟಿಸ್ ಸಾಸಿವೆ ಎಣ್ಣೆಯ ಅಭ್ಯಂಗ ಲಾಭದಾಯಕ.
ಸಾಸಿವೆಯನ್ನು ಯಾವಾಗ ಉಪಯೋಗಿಸಬಾರದು
ಸಾಸಿವೆಯು ಪಿತ್ತದೋಷವನ್ನು ಕುಪಿತಗೊಳಿಸುವುದರಿಂದ ಗ್ಯಾಸ್ಟ್ರೈಟಿಸ್, ಬ್ಲೀಡಿಂಗ್ ಡಿಸಾರ್ಡರ್ಸ್, ಉರಿ ಇದ್ದಲ್ಲಿ ಉಪಯೋಗಿಸುವುದು ಕಡಿಮೆ ಮಾಡಬೇಕು. ಉಪಯೋಗಿಸುವ ಅಂಗ- ಬೀಜ ಹಾಗೂ ಎಣ್ಣೆ.
ಪ್ರಮಾಣ – ಬೀಜಚೂರ್ಣ ಎರಡರಿಂದ ನಾಲ್ಕು ಗ್ರಾಂ.
ಎಣ್ಣೆ – ಒಂದರಿಂದ ಎರಡು ಚಮಚ

ಡಾ. ಹರ್ಷಾ ಕಾಮತ್