ಕಾರ್ಕಳ : ರಾಜಕೀಯದ ಹೆಸರಿನಲ್ಲಿ ಛಿದ್ರವಾಗಿದ್ದ ಬಿಲ್ಲವ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಒಂದಾಗಲು ಮೊದಲ ಮೆಟ್ಟಿಲು ಎಂಬಂತೆ ಕಾರ್ಕಳದಿಂದ ಬ್ರಹತ್ ಸ್ವಾಭಿಮಾನ ಜಾಥಾ ಹೊರಡಲಿದೆ ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು ತಿಳಿಸಿದ್ದಾರೆ.
ಜ. 26ರಂದು ಪೂರ್ವಾಹ್ನ 10-30 ಗಂಟೆಗೆ ಕಾರ್ಕಳ ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆಯಿಂದ ಹೊರಟು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತದವರೆಗೆ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ಹಾಗೂ ವಾಹನಗಳೊಂದಿಗೆ ಸ್ವಾಭಿಮಾನ ಜಾಥಾವು ಸಾಗಲಿದೆ.
ಬಿಲ್ಲವ ಸಮಾಜದ ಮುಖಂಡ ಭಾಸ್ಕರ್ ಕೋಟ್ಯಾನ್, ಬಿಲ್ಲವ ಸಮಾಜದ ಜನಪ್ರತಿನಿಧಿಗಳು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಗಣ್ಯರು, ಗರಡಿಯ ಸಮಸ್ತ ಪೂಜಾರಿ, ಬಿಲ್ಲವ ಸಂಘ ಹಾಗೂ ಬಿಲ್ಲವ ಸಂಘಟನೆಗಳ ಮುಖಂಡರು ಸ್ವಾಭಿಮಾನದ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೆರವಣಿಗೆ ಆನೆಕೆರೆ, ಅನಂತಶಯನ,ಕಾರ್ಕಳ ಪೇಟೆ, ಬಂಡೀಮಠ, ಅತ್ತೂರು, ನಿಟ್ಟೆ 11-30 ಗಂಟೆಗೆ ಬೆಳ್ಮಣ್, ಸೂಡ ಪಳ್ಳಿ -ರಂಗನಪಲ್ಕೆ -ಕಣಜಾರು, ಮಧ್ಯಾಹ್ನ 1-30 ಗಂಟೆಗೆ ಬೈಲೂರು ಜಾಥಾ ತಲುಪಲಿದೆ. ಹಿರಿಯಡ್ಕದಿಂದ ಹೊರಟು ಬನ್ನಂಜೆ ಬಿಲ್ಲವ ಸಂಘಕ್ಕೆ ತೆರಳಿ ಅಲ್ಲಿಂದ ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ವಾಹನಗಳು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಿರ್ಗಮಿಸುವುದು.
ಹೆಬ್ರಿ : ಜ. 26 ರಂದು ಅಜೆಕಾರು ರಾಮ ಮಂದಿರದಿಂದ ಬೆಳಿಗ್ಗೆ 8.30ಕ್ಕೆ ಹೊರಟು ಅಲ್ಲಿಂದ ಮುನಿಯಾಲು ಮಾತಿಬೆಟ್ಟು ನಾರಾಯಣ ಗುರು ಸಂಘದಲ್ಲಿ ಪೂಜೆಯನ್ನು ನಡೆಸಿ ವರಂಗ, ಮುದ್ರಾಡಿ, ಹೆಬ್ರಿ ಸಂಘಕ್ಕೆ ಬಂದು ಪೂಜೆ ನಡೆಸಿ ಹೆಬ್ರಿ ಪೇಟೆಯಲ್ಲಿ ಜಾಥಾ ಮುಂದುವರೆದು ಶಿವಪುರ, ಪೆರ್ಡೂರು ಮಾರ್ಗವಾಗಿ ಹಿರಿಯಡ್ಕದಿಂದ ಹೊರಟು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾಥಾ ನಿರ್ಗಮಿಸುವುದು.
ಬಿಲ್ಲವರ ಸ್ವಾಭಿಮಾನದ ಜಾಥಾ ಆಗಿರುವುದರಿಂದ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತದ ಪ್ರತೀಕವಾಗಿ ಕೇವಲ ಹಳದಿ ಬಣ್ಣದ ಧ್ವಜಗಳನ್ನ ವಾಹನಗಳಿಗೆ ಅಂಟಿಸಿ, ಹಳದಿ ಶಾಲುಗಳನ್ನೇ ಧರಿಸಿಕೊಂಡು ಬರುವಂತೆ ಡಿ.ಆರ್. ರಾಜು ವಿನಂತಿದ್ದಾರೆ.
ಅದನ್ನು ಹೊರತುಪಡಿಸಿ ಬೇರೆ ಬೇರೆ ರಾಜಕೀಯ ಪಕ್ಷಗಳ ಧ್ವಜ, ಶಾಲುಗಳನ್ನು ಹಾಕಿ ಕೊಂಡು ಬಿಲ್ಲವರಲ್ಲಿ ಒಡಕನ್ನು ಸೃಷ್ಟಿಸುವಂಥಹ ಕೆಲಸವನ್ನು ಯಾರೂ ಮಾಡಬಾರದಾಗಿ ಅವರು ವಿನಂತಿಸಿದರು.