ನೋವು ನಿವಾರಕ ದ್ರವ್ಯಗಳಲ್ಲಿ ಅತ್ಯಂತ ಶ್ರೇಷ್ಠವಾದ ದ್ರವ್ಯ ನಿರ್ಗುಂಡಿ ಸಸ್ಯ. ಇದು ವಿಷವನ್ನು ತೆಗೆಯುವ ಹಾಗೂ ಕ್ರಿಮಿಯನ್ನು ಹೊರಹಾಕುವ ಗುಣದಿಂದ ಕೂಡಿದೆ.ಯಾವುದು ಶರೀರವನ್ನು ರೋಗಗಳಿಂದ ರಕ್ಷಿಸುತ್ತದೆಯೋ ಅದನ್ನು ನಿರ್ಗುಂಡಿ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಇದನ್ನು ಲಕ್ಕಿ ಗಿಡವೆಂದು ಕರೆಯುತ್ತಾರೆ.
ಇದು ಆರರಿಂದ ಹನ್ನೆರಡು ಫೀಟ್ ಉದ್ದ ಸೂಕ್ಷ್ಮ ರೋಮಗಳುಳ್ಳ ವನಸ್ಪತಿಯಾಗಿದೆ. ಇದರ ಎಲೆಯು ಎರಡರಿಂದ ಆರಿ ಇಂಚು ಉದ್ದ, ಒಂದೂವರೆ ಇಂಚು ಅಗಲ ರೋಮಯುಕ್ತ ವಾಗಿರುತ್ತದೆ. ಎಲೆಗಳು ವಿಶಿಷ್ಟ ಗಂಧದಿಂದ ಕೂಡಿದೆ. ಪುಷ್ಪವು ಚಿಕ್ಕಚಿಕ್ಕ ಶ್ವೇತಾ ಅಥವಾ ನೀಲವರ್ಣ ಹೊಂದಿದ್ದು ಎರಡರಿಂದ ಏಳು ಇಂಚು ಉದ್ದವಿರುತ್ತದೆ. ಇದರ ಫಲ ಗೋಲಾಕಾರವಾಗಿದ್ದು ಹನ್ನೆರಡು ಇಂಚು ವ್ಯಾಸವನ್ನು ಹೊಂದಿದೆ. ಹಣ್ಣು ಪಕ್ವವಾದ ಮೇಲೆ ಕೃಷ್ಣವರ್ಣಕ್ಕೆ ತಿರುಗುತ್ತದೆ. ನೀಲ ಪುಷ್ಪ ಹೊಂದಿದ ಸಸ್ಯವನ್ನು ಕೃಷ್ಣ ನಿರ್ಗುಂಡಿ ಹಾಗೂ ಶ್ವೇತ ಪುಷ್ಪವನ್ನು ಹೊಂದಿದ ಸಸ್ಯವನ್ನು ಸಿಂದುಬಾರ ಎಂದು ಕರೆಯುತ್ತಾರೆ. ಇದು ಭಾರತದ ವಿವಿಧ ಪ್ರದೇಶಗಳಲ್ಲಿ ಬೆಳೆಯುತ್ತದೆ ವಿಶೇಷವಾಗಿ ಉಷ್ಣಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಇದರ ಗುಣಗಳು ಲಘು, ರೂಕ್ಷ ಹಾಗೂ ಉಷ್ಣವೀರ್ಯವಾಗಿದೆ. ರುಚಿಯಲ್ಲಿ ಕಹಿ ಹಾಗೂ ಖಾರ ರಸವಿರುತ್ತದೆ.
ನಿರ್ಗುಂಡಿಯ ಬಾಹ್ಯ ಪ್ರಯೋಗಗಳು
ಇದು ಉಷ್ಣ ವೀರ್ಯವಿರುವುದರಿಂದ ವಾತವನ್ನು ಹಾಗೂ ಕಪ ದೋಷವನ್ನು ಶಮನಗೊಳಿಸುತ್ತದೆ. ಇದರ ಬಾಹ್ಯ ಪ್ರಯೋಗವು ವೇದನೆಯನ್ನು, ಶೋಥವನ್ನು, ವ್ರಣವನ್ನು ಕಡಿಮೆಗೊಳಿಸುತ್ತದೆ. ತಲೆನೋವು, ಸಂದು ನೋವು, ಆಮವಾತದಲ್ಲಿ ಇದರ ಎಲೆಯನ್ನು ಬಿಸಿಮಾಡಿ ಕಟ್ಟುತ್ತಾರೆ. ಮುಖ ರೋಗಗಳಲ್ಲಿ ಇದರ ಕ್ವಾಥದಿಂದ ಬಾಯಿ ಮುಕ್ಕಳಿಸುತ್ತಾರೆ. ಎಲೆಯ ಧೂಪನದಿಂದ ತಲೆನೋವು ಹಾಗೂ ಕಟ್ಟಿದ ಮೂಗು ಕಡಿಮೆಯಾಗುತ್ತದೆ. ಇದರ ಎಣ್ಣೆಯೂ ಕೂದಲಿಗೆ ತುಂಬಾ ಒಳ್ಳೆಯದು ಹಾಗೂ ವ್ರಣವನ್ನು ಬೇಗ ಗುಣಪಡಿಸುತ್ತದೆ. ಎಣ್ಣೆಯ ಅಭ್ಯಂಗ ಮಾಡುವುದರಿಂದ ಎಲ್ಲಾ ತರಹದ ನೋವು ನಿವಾರಣೆಯಾಗುತ್ತದೆ.
ನೀರ್ಗುಂಡಿಯ ಸೇವನೆಯಿಂದ ಲಾಭಗಳು
ಇದರ ಆಭ್ಯಂತರ ಪ್ರಯೋಗದಿಂದ ಕ್ರಿಮಿ, ತಲೆನೋವು, ಆಮವಾತ, ಕೀಲುನೋವು, ಮಸ್ತಿಷ್ಕ ದೌರ್ಬಲ್ಯವನ್ನು ಗುಣಪಡಿಸುತ್ತದೆ. ಹತ್ತರಿಂದ ಇಪ್ಪತ್ತು ಎಂಎಲ್ ಪತ್ರ ಸ್ವರಸ ಗೋಮೂತ್ರದ ಜೊತೆ ಸೇವಿಸಿದಾಗ ಅರುಚಿ, ಕ್ರಿಮಿ, ಆಮದೋಷವನ್ನು ದೂರಮಾಡುತ್ತದೆ. ಕೆಮ್ಮು, ಉರಿಮೂತ್ರ ರೋಗಗಳಲ್ಲಿ ಬಾಣಂತಿ ರೋಗಗಳಲ್ಲಿ ಉಪಯೋಗಿಸುತ್ತಾರೆ. ತ್ವಚೆಯ ರೋಗಗಳಲ್ಲಿ ಲಾಭದಾಯಕ. ಜ್ವರಗಳಲ್ಲಿ ಔಷಧದ ಜೊತೆ ಪತ್ರ ಸ್ವರಸ ನೀಡಲಾಗುವುದು. ಕಿವಿ ರೋಗಗಳಲ್ಲಿ ಪತ್ರ ಸ್ವರಸದಿಂದ ಮಾಡಲಾದ ಎಣ್ಣೆಯನ್ನು ಬಳಸುತ್ತಾರೆ. ನೇತ್ರರೋಗಗಳಲ್ಲಿ ಪತ್ರ ಸ್ವರಸದಿಂದ ಕಣ್ಣುಗಳನ್ನು ತೊಳೆಯುತ್ತಾರೆ.
ಉಪಯೋಗಿಸುವ ಅಂಗ – ಪತ್ರ,ಬೇರು, ಬೀಜ.
ಉಪಯೋಗಿಸುವ ಪ್ರಮಾಣ – ಪತ್ರ ಸ್ವರಸ ಹತ್ತರಿಂದ ಇಪ್ಪತ್ತು ಎಂಎಲ್.
ಬೇರಿನ ಚೂರ್ಣ ಮೂರರಿಂದ ಆರುಗ್ರಾಂ
ಬೀಜದ ಚೂರ್ಣ ಮೂರರಿಂದ ಆರುಗ್ರಾಂ

ಡಾ. ಹರ್ಷಾ ಕಾಮತ್