ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರ ನುರಿತ ತಜ್ಞರ ಜತೆ ಮಾಹಿತಿ ಪಡೆದು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಆದರೆ, ಸಚಿವರಾಗಿರುವ ಉಮೇಶ್ ಕತ್ತಿಯವರು ಮಾಸ್ಕ್ ಧರಿವುದಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಅಥಣಿ ಪಟ್ಟಣದಲ್ಲಿ ಲಕ್ಷ್ಮೀ ಸಸ್ಯೋದ್ಯಾನ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಉಮೇಶ್ ಕತ್ತಿಯವರು, ಕೇಂದ್ರ ಸರ್ಕಾರ ಕೊರೋನಾ ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಿದೆ. ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಸ್ಕ್ ಧರಿಸುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಹೀಗಾಗಿ ನಾನು ಮಾಸ್ಕ್ ಧರಿಸುತ್ತಿಲ್ಲ ಎಂದು ಹೇಳಿದರು.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ . ಯಾವುದೇ ನಿರ್ಬಂಧ ವಿಧಿಸಲ್ಲ. ಸ್ವಂತ ಜವಾಬ್ದಾರಿ ಹೊತ್ತು ಜನ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಹಾಕೋದು ಬಿಡೋದು ಅದು ಅವರವರ ಆಯ್ಕೆ. ಮಾಸ್ಕ್ ಹಾಕದೆ ಇರೋದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್ ಹಾಕಲ್ಲ ನನಗೆ ಮಾಸ್ಕ್ ಹಾಕಬೇಕೆಂದು ಅನಿಸಿಲ್ಲ. ಹಾಗಾಗಿ ನಾನು ಧರಿಸಲ್ಲ ಎಂದು ತಿಳಿಸಿದರು.
ಮಾಸ್ಕ್ ಹಾಕುವ ವಿಚಾರದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪಾಲಿಸಬೇಕು ಅನ್ನುವುದು ನನ್ನ ನಿಲುವು. ಅದೇ ನನ್ನ ಹೇಳಿಕೆಯೂ ಆಗಿತ್ತು. ನಾನು ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳೋದು ಬೇಡ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನನಗೆ, ನನ್ನ ಜವಾಬ್ದಾರಿಯ ಸಂಪೂರ್ಣ ಅರಿವಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೋವಿಡ್ ನಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ನಮ್ಮ ಹೊಣೆಗಾರಿಕೆ ಬಗ್ಗೆ ತಿಳಿದಿದೆ. ಹೀಗಾಗಿ ಕೋವಿಡ್ ಮುಗಿಯುವ ತನಕ ನಾವೆಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದರು.