“ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ|
ತಿದ್ದಿಕೆಗಮೊಂದು ಮಿತಿಯುಟು ಮರೆಯದಿರು||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ|
ಸ್ಪರ್ಧಿಯೆ ತ್ರಿವಿಕ್ರಮಗೆ?-ಮಂಕುತಿಮ್ಮ”.
ಜಗತ್ತನ್ನು ತಿದ್ದುವುದಕ್ಕೆ ಹೊರಡುವ ಮೊದಲು ನಿನ್ನನ್ನು ನೀನು ತಿದ್ದಿಕೊಳ್ಳಬೇಕು. ತಿದ್ದುವುದಕ್ಕೂ ಕೂಡ ಒಂದು ಇತಿಮಿತಿ ಇರುತ್ತದೆ. ನೀನು ನಿನ್ನ ಸ್ವಸಾಮರ್ಥದಿಂದ ಒಂದು ಬೆರಳಿನಷ್ಟು ಉದ್ದ ಬೆಳೆಯಬಹುದು ಅಷ್ಟೆ. ವಾಮನ ತ್ರಿವಿಕ್ರಮನಾದ ಹಾಗೆ ನಿನಗೆ ಬೆಳೆಯಲು ಸಾಧ್ಯವಾಗದು ಮತ್ತು ಅವನಿಗೆ ನೀನು ಸ್ಫರ್ಧಿಯಾಗಲು ಸಾಧ್ಯವಿಲ್ಲವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಮಹಾವಿಷ್ಣುವು ವಾಮನಾವತಾರದಲ್ಲಿ ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಯಲ್ಲಿ ಭೂಮಿಯಾಕಾಶವನ್ನು ಅಳೆದು ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೊತ್ತಿದ ಕತೆ ನಮಗೆಲ್ಲರಿಗೂ ಗೊತ್ತು. ಅದನ್ನು ಒಂದು ಉದಾಹರಣೆಯಾಗಿ ಕೊಟ್ಟ ಡಿವಿಜಿಯವರು ನೀನು ಆ ತಿವಿಕ್ರಮನ ಹಾಗೆ ಬೆಳೆಯಲು ಸಾಧ್ಯವಾಗದು. ಆ ಸಾಮರ್ಥವು ನಮ್ಮಲ್ಲಿಲ್ಲ. ಜಗತ್ತಿನಲ್ಲಿರುವ ಎಲ್ಲಾ ಅಂಕುಡೊಂಕುಗಳನ್ನು ತಿದ್ದಲು ನಿನ್ನಿಂದಾಗದು. ನಿನ್ನನ್ನು ನೀನು ಸರಿಯಾಗಿ ಅರಿತುಕೊಂಡು; ತಪ್ಪುಗಳಿದ್ದರೆ ತಿದ್ದಿಕೊಂಡು ನಡೆ ಎಂದಿದ್ದಾರೆ. ” ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತೈಸಿಕೊಳ್ಳಿ. ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲ ಸಂಗಮದೇವ” ಎಂಬ ಭಕ್ತಿ ಭಂಡಾರಿ ಬಸವಣ್ಣನವರ ವಚನವು ಹೇಳುವಂತೆ ಅನ್ಯರ ತಪ್ಪುಗಳನ್ನುಎತ್ತಿ ಹೇಳುವ ಮೊದಲು; ಇತರರನ್ನು ಟೀಕಿಸುವ ಬದಲು ನಮ್ಮನ್ನು ನಾವು ನೋಡಿಕೊಂಡು ದೋಷಗಳಿದ್ದರೆ ತಿದ್ದಿಕೊಂಡರೆ ಒಳ್ಳೆಯದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

“ಲೋಕ ತಿದ್ದುವ ಕೆಲಸ ಅದು ಸರ್ಪ ಸಹವಾಸ| ಹೆಡೆ ಎತ್ತಿ ಯಾವಾಗ ಯಾರ ಕಚ್ಚುವುದೋ| ಬಿಡು ಜನರ ಅವರಂತೆ, ತಿದ್ದಿಕೋ ನೀ ನಿನ್ನ| ತಿದ್ದುವಿಕೆ ಬಲು ಕಷ್ಟ-ಮುದ್ದುರಾಮ|” ಎಂಬ ಕವಿ ಕೆ.ಶಿವಪ್ಪನವರ ಮಾತಿನಂತೆ ಸಮಾಜವನ್ನು ತಿದ್ದುವುದು ಬಲು ಕಷ್ಟ ಆದರೆ ಅವರನ್ನು ಅವರಷ್ಟಕ್ಜೆ ಬಿಟ್ಟು ನಮ್ಮ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದು ಉತ್ತಮ. ಜಗತ್ತನ್ನು ತಿದ್ದಿ ಸರಿಪಡಿಸಲು ಪರಮಾತ್ಮನಿದ್ದಾನೆ ಅವನಿಗೆ ಪತಿಸ್ಪರ್ಧಿಯಾಗುವ ಅಧಿಕ ಪ್ರಸಂಗ ಮಾಡದೆ ನಮ್ಮನ್ನು ನಾವು ಸರಿಯಾಗಿ ನೋಡಿಕೊಂಡು,, ತಿದ್ದಿಕೊಂಡು ನಡೆದಾಗಲೇ ಜೀವನ ಸಾರ್ಥಕಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ