Wednesday, January 26, 2022
spot_img
HomeUncategorizedಮಕರ ಸಂಕ್ರಾಂತಿಯ ವಿಶೇಷ

ಮಕರ ಸಂಕ್ರಾಂತಿಯ ವಿಶೇಷ

ಸೂರ್ಯನ ಪಥವನ್ನು ಒಟ್ಟು ಹನ್ನೆರಡು ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳಿಗೆ ರಾಶಿಗಳು ಎನ್ನುತ್ತಾರೆ. ಮೇಷ , ವೃಷಭ , ಮಿಥುನ , ಕರ್ಕಾಟಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳು. ಪ್ರತಿಯೊಂದು ರಾಶಿಯಲ್ಲಿಯೂ ಸೂರ್ಯನು ಒಂದೊಂದು ತಿಂಗಳು ಇರುತ್ತಾನೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎನ್ನುತ್ತಾರೆ. ಒಂದು ವರ್ಷಕ್ಕೆ ಒಟ್ಟು ಹನ್ನೆರಡು ಸಂಕ್ರಾಂತಿಗಳು. ಪ್ರತಿಯೊಂದು ಸಂಕ್ರಾಂತಿಯನ್ನೂ ಅದರ ಮುಂದಿನ ರಾಶಿಯ ಹೆಸರಿನಿಂದ ಕರೆಯುತ್ತಾರೆ. ಅಂತೆಯೇ ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಜನವರಿ ತಿಂಗಳ ಹದಿನಾಲ್ಕರಂದು ಮಕರ ಸಂಕ್ರಾಂತಿ ಬರುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಇದು ಜನವರಿ ಹದಿನೈದರಂದು ಬರುತ್ತಿದೆ.
ಆರು ತಿಂಗಳ ಸಮಯವನ್ನು ಒಂದು ಆಯನ ಎನ್ನುತ್ತಾರೆ. ಹೀಗಾಗಿ ಒಂದು ವರ್ಷಕ್ಕೆ ಎರಡು ಆಯನಗಳು. ಮಕರ ಸಂಕ್ರಾಂತಿಯಿಂದ (ಅಂದಾಜು ಜನವರಿ 15 ರಿಂದ) ಆರಂಭವಾಗಿ ಕರ್ಕಾಟಕ ಸಂಕ್ರಾಂತಿಯವರೆಗಿನ (ಅಂದಾಜು ಜುಲಾಯಿ 15 ರವರೆಗಿನ) ಆರು ತಿಂಗಳ ಅವಧಿಯು ಒಂದು ಆಯನವಾಗಿರುತ್ತದೆ. ಈ ಆಯನದಲ್ಲಿ ಸೂರ್ಯನು ಉತ್ತರದ ಕಡೆಗೆ ಚಲಿಸುವುದರಿಂದ ಇದನ್ನು ಉತ್ತರಾಯನ ಎನ್ನುತ್ತಾರೆ. ಈ ಮಕರ ಸಂಕ್ರಾಂತಿಯ ದಿನದಿಂದಲೇ ಸೂರ್ಯನು ಉತ್ತರದ ಕಡೆಗೆ ಪಯಣ ಆರಂಭಿಸುತ್ತಾನೆ. ಕರ್ಕಾಟಕ ಸಂಕ್ರಾಂತಿಯಿಂದ (ಅಂದಾಜು ಜುಲಾಯಿ 15 ರಿಂದ) ಆರಂಭವಾಗಿ ಮಕರ ಸಂಕ್ರಾಂತಿಯವರೆಗಿನ (ಅಂದಾಜು ಜನವರಿ 15 ರವರೆಗಿನ) ಆರು ತಿಂಗಳ ಅವಧಿಯು ಇನ್ನೊಂದು ಆಯನವಾಗಿರುತ್ತದೆ. ಈ ಆಯನದಲ್ಲಿ ಸೂರ್ಯನು ದಕ್ಷಿಣದ ಕಡೆಗೆ ಚಲಿಸುವುದರಿಂದ ಇದನ್ನು ದಕ್ಷಿಣಾಯನ ಎನ್ನುತ್ತಾರೆ. ಈ ಕರ್ಕಾಟಕ ಸಂಕ್ರಾಂತಿ ದಿನದಿಂದಲೇ ಸೂರ್ಯನು ದಕ್ಷಿಣದ ಕಡೆಗೆ ಪಯಣ ಆರಂಭಿಸುತ್ತಾನೆ.
ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ ಎಂದು ಹೇಳುತ್ತಾರೆ. ಆದರೆ, ಬೆಳಿಗ್ಗೆ ನಿಖರವಾಗಿ ಪೂರ್ವದಲ್ಲೇ ಸೂರ್ಯೋದಯವಾಗಿ ಸಂಜೆ ನಿಖರವಾಗಿ ಪಶ್ಚಿಮದಲ್ಲೇ ಸೂರ್ಯಾಸ್ತವಾಗುವುದು ವರ್ಷದಲ್ಲಿ ಎರಡೇ ದಿನಗಳಂದು ಮಾತ್ರ. ಆ ದಿನಗಳನ್ನು ವಿಷುವ (ಈಕ್ವಿನಾಕ್ಸ್) ದಿನ ಎಂದು ಕರೆಯುತ್ತಾರೆ. ಅಂದು ಹಗಲು ಮತ್ತು ರಾತ್ರಿಗಳು ಸಮಪಾಲಾಗಿ ಎರಡೂ ಕೂಡಾ ಸರಿಯಾಗಿ ಹನ್ನೆರಡು ಗಂಟೆಗಳು ಇರುತ್ತವೆ.
ಮಕರ ಸಂಕ್ರಾಂತಿ ದಿನದಂದು (ವೈಜ್ಞಾನಿಕವಾಗಿ ಅದು ಬೇರೆ ದಿನ ವಾಗಿರುತ್ತದೆ) ರಾತ್ರಿ ಅತಿ ಹೆಚ್ಚು ಇದ್ದು ಹಗಲು ಅತಿ ಕಡಿಮೆ ಇರುತ್ತದೆ. ಅಂದಿನಿಂದ ಆರಂಭವಾಗುವ ಉತ್ತರಾಯನದಲ್ಲಿ ರಾತ್ರಿಯ ಸಮಯ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಹಗಲಿನ ಸಮಯ ಹೆಚ್ಚುತ್ತಾ ಬರುತ್ತದೆ. ಉತ್ತರಾಯನದ ನಡುವಿನ ಒಂದು ದಿನ ವಸಂತ ವಿಷುವ (ಮಾರ್ಚ್ ಈಕ್ವಿನಾಕ್ಸ್) ದಿನವಾಗಿರುತ್ತದೆ. ಅದು ಸೂರ್ಯನು ಸಮಭಾಜಕ ವೃತ್ತವನ್ನು ದಾಟಿ ಮತ್ತೂ ಉತ್ತರಕ್ಕೆ ಚಲಿಸುವ ದಿನ. ಅಂದಿನಿಂದ ಸೆಕೆಗಾಲ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಕರ್ಕಾಟಕ ಸಂಕ್ರಾಂತಿಯವರೆಗೆ ರಾತ್ರಿಯ ಸಮಯ ಮತ್ತೂ ಕಡಿಮೆಯಾಗುತ್ತಾ ಹಾಗೂ ಹಗಲಿನ ಸಮಯ ಮತ್ತೂ ಹೆಚ್ಚುತ್ತಾ ಹೋಗಿ ಕರ್ಕಾಟಕ ಸಂಕ್ರಾಂತಿ ದಿನದಂದು (ವೈಜ್ಞಾನಿಕವಾಗಿ ಅದು ಬೇರೆ ದಿನ ವಾಗಿರುತ್ತದೆ) ರಾತ್ರಿ ಅತಿ ಕಡಿಮೆ ಇದ್ದು ಹಗಲು ಅತಿ ಹೆಚ್ಚು ಇರುತ್ತದೆ. ಅಂದಿನಿಂದ ಆರಂಭವಾಗುವ ದಕ್ಷಿಣಾಯನದಲ್ಲಿ ರಾತ್ರಿಯ ಸಮಯ ಹೆಚ್ಚುತ್ತಾ ಬರುತ್ತದೆ ಮತ್ತು ಹಗಲಿನ ಸಮಯ ಕಡಿಮೆಯಾಗುತ್ತಾ ಬರುತ್ತದೆ. ದಕ್ಷಿಣಾಯನದ ನಡುವಿನ ಒಂದು ದಿನ ಶರದ್ ವಿಷುವ (ಸೆಪ್ಟೆಂಬರ್ ಈಕ್ವಿನಾಕ್ಸ್) ದಿನವಾಗಿರುತ್ತದೆ. ಅದು ಸೂರ್ಯನು ಸಮಭಾಜಕ ವೃತ್ತವನ್ನು ದಾಟಿ ಮತ್ತೂ ದಕ್ಷಿಣಕ್ಕೆ ಚಲಿಸುವ ದಿನ. ಅಂದಿನಿಂದ ಚಳಿಗಾಲ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಮಕರ ಸಂಕ್ರಾಂತಿಯವರೆಗೆ ರಾತ್ರಿಯ ಸಮಯ ಮತ್ತೂ ಹೆಚ್ಚುತ್ತಾ ಹಾಗೂ ಹಗಲಿನ ಸಮಯ ಮತ್ತೂ ಕಡಿಮೆಯಾಗುತ್ತಾ ಹೋಗಿ ಮಕರ ಸಂಕ್ರಾಂತಿ ದಿನದಂದು (ವೈಜ್ಞಾನಿಕವಾಗಿ ಅದು ಬೇರೆ ದಿನ ವಾಗಿರುತ್ತದೆ) ರಾತ್ರಿ ಅತಿ ಹೆಚ್ಚು ಇದ್ದು ಹಗಲು ಅತಿ ಕಡಿಮೆ ಇರುತ್ತದೆ. ಹಗಲು ಮತ್ತು ರಾತ್ರಿಗಳ ಸಮಯದಲ್ಲಿ ಈ ರೀತಿ ವ್ಯತ್ಯಾಸವಾಗಲು ಭೂಮಿಯ ಅಕ್ಷವು ಇಪ್ಪತ್ತಮೂರುವರೆ ಡಿಗ್ರಿಗಳಷ್ಟು ಓರೆಯಾಗಿರುವುದೇ ಕಾರಣವಾಗಿರುತ್ತದೆ.
ನಮ್ಮ ಒಂದು ವರ್ಷವು ದೇವತೆಗಳಿಗೆ ಒಂದು ದಿನವಾಗಿರುತ್ತದೆ. ನಮ್ಮ ದಕ್ಷಿಣಾಯನದ ಸಮಯವು ದೇವತೆಗಳಿಗೆ ರಾತ್ರಿಯಾಗಿದ್ದು ನಮ್ಮ ಉತ್ತರಾಯನದ ಸಮಯವು ದೇವತೆಗಳಿಗೆ ಹಗಲು ಆಗಿರುತ್ತದೆ. ಹೀಗಾಗಿ ಉತ್ತರಾಯನ ಆರಂಭವಾಗುವ ಈ ಮಕರ ಸಂಕ್ರಾಂತಿಯು ದೇವತೆಗಳಿಗೆ ಬೆಳಗಿನ ಸಮಯ ಅಂದರೆ ದೇವತೆಗಳು ಎದ್ದು ಬಾಗಿಲು ತೆರೆಯುವ ಸಮಯ ಅರ್ಥಾತ್ ಸ್ವರ್ಗದ ಬಾಗಿಲು ತೆರೆಯುವ ಸಮಯವಾಗಿದೆ. ಹೀಗಾಗಿ ಈ ಉತ್ತರಾಯನದಲ್ಲಿ ತೀರಿಕೊಂಡವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯು ಪುರಾಣಗಳ ಕಾಲದಿಂದಲೂ ಇದೆ. ಅದಕ್ಕಾಗಿಯೇ ಇಚ್ಛಾಮರಣಿಗಳಾದ ಭೀಷ್ಮಾಚಾರ್ಯರು ಉತ್ತರಾಯನ ಬರುವವರೆಗೆ ಶರಮಂಚದ ಮೇಲೆಯೇ ಮಲಗಿ ಕಾದಿದ್ದು ನಂತರ ಪ್ರಾಣ ತ್ಯಾಗ ಮಾಡಿದರು ಎಂಬ ಕತೆ ಇದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!