Wednesday, January 26, 2022
spot_img
Homeವಿದೇಶಮನುಷ್ಯನಿಗೆ ಹಂದಿ ಹೃದಯ ಕಸಿ : ಅಮೆರಿಕ ವೈದ್ಯರ ಸಾಧನೆ

ಮನುಷ್ಯನಿಗೆ ಹಂದಿ ಹೃದಯ ಕಸಿ : ಅಮೆರಿಕ ವೈದ್ಯರ ಸಾಧನೆ

ವಾಷಿಂಗ್ಟನ್ : ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲಾಗಿದೆ. ಅಮೆರಿಕದ ವೈದ್ಯರು 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಅಂಗಾಂಗ ದಾನದ ಕೊರತೆಯ ಸುದೀರ್ಘ ಕಾಲದ ಸಮಸ್ಯೆಗೆ ಇದರಿಂದ ಪರಿಹಾರ ದೊರಕುವ ಭರವಸೆ ಮೂಡಿದೆ.

ಈ ಚಾರಿತ್ರಿಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಶುಕ್ರವಾರ ನಡೆದಿದೆ ಎಂದು ಮೆರಿಲ್ಯಾಂಡ್ ವೈದ್ಯಕೀಯ ಶಾಲೆ ವಿಶ್ವವಿದ್ಯಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಅತ್ಯುನ್ನತ ಪ್ರಾಯೋಗಿಕ ಶಸ್ತ್ರಚಿಕಿತ್ಸೆ ನಡೆಸಿದ ಮೂರು ದಿನಗಳ ಬಳಿಕ ಅವರು ಆರೋಗ್ಯವಂತರಾಗಿ ಇದ್ದಾರೆ. ಕುಲಾಂತರಿ ಪ್ರಾಣಿಯಲ್ಲಿನ ಹೃದಯವು ಮನುಷ್ಯನ ದೇಹದಲ್ಲಿ ತತ್‌ಕ್ಷಣದ ನಿರಾಕರಣೆಯಿಲ್ಲದೆ ಕೆಲಸ ಮಾಡಬಲ್ಲದು ಎಂಬುದನ್ನು ಇದು ಸಾಬೀತುಪಡಿಸಿದೆ. ಮನುಷ್ಯನ ಜೀವ ಉಳಿಸುವ ಕಸಿಗಳಿಗೆ ಪ್ರಾಣಿಗಳ ಅಂಗಗಳನ್ನು ಬಳಸಬಹುದೇ ಎಂಬ ಹಲವು ದಶಕಗಳ ಪ್ರಶ್ನೆಗೆ ಇದು ಉತ್ತರ ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ ಎಂಬುದಾಗಿ ವಿ.ವಿ ಹೇಳಿದೆ.

57 ವರ್ಷದ ಡೇವಿಡ್ ಬೆನೆಟ್ ಅವರ ಹೃದಯ ತೀವ್ರ ಹಾನಿಗೊಳಗಾಗಿತ್ತು. ಅವರು ಮಾನವ ಹೃದಯ ಕಸಿಗೆ ಅರ್ಹರಾಗಿರಲಿಲ್ಲ. ಅವರ ಸಾವು ಬಹುತೇಕ ಖಚಿತವಾಗಿದ್ದರಿಂದ, ಬೇರೆ ಆಯ್ಕೆ ಇಲ್ಲದೆ ಈ ಪ್ರಯೋಗಕ್ಕೆ ಒಳಗಾಗಿದ್ದರು. ಈ ಪ್ರಯೋಗ ಕೂಡ ಯಶಸ್ವಿಯಾಗಲಿದೆ ಎಂಬ ಖಾತರಿ ಇರಲಿಲ್ಲ ಎಂದು ಅವರ ಮಗ ತಿಳಿಸಿದ್ದಾರೆ.

ಸಾಯಬೇಕು ಇಲ್ಲವೇ ಈ ಕಸಿಗೆ ಒಳಗಾಗಬೇಕಾದ ಸ್ಥಿತಿ ಇದು. ನಾನು ಬದುಕಲು ಬಯಸಿದ್ದೇನೆ. ಇದೊಂದು ರೀತಿ ಕತ್ತಲಿನಲ್ಲಿ ಗುಂಡು ಹಾರಿಸಿದಂತೆ. ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಬೆನೆಟ್ ಅವರು ಶಸ್ತ್ರಚಿಕಿತ್ಸೆಗೂ ಹಿಂದಿನ ದಿನ ಹೇಳಿದ್ದರು.

ಡೇವಿಡ್ ಬೆನೆಟ್ ಅವರ ಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರಿಗೆ ಮಾನವ ಹೃದಯ ಕಸಿ ಮಾಡುವುದು ಸಾಧ್ಯವಿರಲಿಲ್ಲ. ಹೃದಯ ಕಸಿ ಯಶಸ್ವಿಯಾಗುವುದು ಖಾತರಿಯೇ ಇಲ್ಲದಷ್ಟು ವಿಕೋಪಕ್ಕೆ ಹೋಗಿದ್ದರೆ, ಈ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಏಕೆಂದರೆ ಹೃದಯ ಕಸಿಗೆ ಅಂಗಾಂಗ ದೊರಕುವುದು ಬಹಳ ವಿರಳವಾಗಿರುವುದರಿಂದ ಅದನ್ನು ವ್ಯರ್ಥ ಮಾಡಲು ವೈದ್ಯಕೀಯ ಲೋಕ ಬಯಸುವುದಿಲ್ಲ.

ಹೃದಯ- ಶ್ವಾಸಕೋಶ ಬೈಪಾಸ್ ಯಂತ್ರದ ನೆರವಿನಲ್ಲಿ ಹಲವು ತಿಂಗಳಿನಿಂದ ಹಾಸಿಗೆ ಹಿಡಿದಿರುವ ಬೆನೆಟ್, ಚೇತರಿಸಿಕೊಂಡು ಹಾಸಿಗೆಯಿಂದ ಎದ್ದು ಓಡಾಡುವ ಆಸೆ ಹೊಂದಿದ್ದಾರೆ. ಸಾಂಪ್ರದಾಯಿಕ ಹೃದಯ ಕಸಿಗೆ ಸೂಕ್ತವಾಗಿರದ ಬೆನೆಟ್ ಅವರಿಗೆ, ಕುಲಾಂತರಿ ಹಂದಿ ಹೃದಯ ಅಳವಡಿಸುವ ಕೊನೆಯ ಪ್ರಯೋಗಕ್ಕೆ ಹೊಸ ವರ್ಷದ ಹಿಂದಿನ ದಿನ ಅಮೆರಿಕ ಆರೋಗ್ಯ ಮತ್ತು ಔಷಧ ಆಡಳಿತ ಇಲಾಖೆ ತುರ್ತು ಅನುಮತಿ ನೀಡಿತ್ತು.

ನಾವು ಬಹಳ ಎಚ್ಚರಿಕೆಯಿಂದ ಪ್ರಕ್ರಿಯೆ ಅನುಸರಿಸುತ್ತಿದ್ದೇವೆ. ಆದರೆ, ಜಗತ್ತಿನಲ್ಲಿಯೇ ಈ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ರೋಗಿಗಳಿಗೆ ಮಹತ್ವದ ಹೊಸ ಆಯ್ಕೆಯನ್ನು ನೀಡಲಿದೆ ಎಂಬ ಆಶಯ ಹೊಂದಿದ್ದೇವೆ ಎಂದು ವಿಶ್ವವಿದ್ಯಾಲಯದ ಹೃದಯ ಕಸಿ ಯೋಜನೆಯ ಸಹ ಸಂಸ್ಥಾಪಕ ಮುಹಮ್ಮದ್ ಮೊಹಿಯುದ್ದೀನ್ ಹೇಳಿದ್ದಾರೆ.

ಕಸಿ ಚಿಕಿತ್ಸೆ ನಡೆಸಲು ಮಾನವ ಅಂಗಗಳ ದಾನದ ಭಾರಿ ಅಭಾವ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಅಂಗಗಳನ್ನು ಬಳಸುವ ಅವಕಾಶಗಳ ಬಗ್ಗೆ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಅಮೆರಿಕದಲ್ಲಿ 3,800 ಹೃದಯ ಕಸಿಗಳು ನಡೆದಿದ್ದವು. ಇದು ಯಶಸ್ವಿಯಾದರೆ, ಸಂಕಷ್ಟದಲ್ಲಿರುವ ರೋಗಿಗಳಿಗೆ ಅಂಗಗಳ ಅವಿರತ ಪೂರೈಕೆಯಾಗಲಿದೆ ಎಂದು ಮೊಹಿಯುದ್ದೀನ್ ತಿಳಿಸಿದ್ದಾರೆ.

ಮನುಷ್ಯರ ಹೃದಯ ಚಿಕಿತ್ಸೆಗೆ ಹಂದಿಗಳ ಹೃದಯ ಕವಾಟಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹಾಗೆಯೇ ಸುಟ್ಟ ಗಾಯಗಳಿಂದ ಬಳಲುತ್ತಿರುವ ಮನುಷ್ಯರ ಚರ್ಮಕ್ಕೆ ಪರ್ಯಾಯವಾಗಿ ಹಂದಿ ಚರ್ಮ ಅಳವಡಿಸಲಾಗುತ್ತಿದೆ. ಹಂದಿಗಳ ಗಾತ್ರ, ಅವುಗಳ ವೇಗದ ಬೆಳವಣಿಗೆ ಮುಂತಾದ ಕಾರಣಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅವುಗಳ ಬಳಕೆ ವ್ಯಾಪಕವಾಗಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!