Wednesday, January 26, 2022
spot_img
Homeಅಂಕಣಕಗ್ಗದ ಸಂದೇಶ - ಅನುಭವದ ಸಾರವೇ ಧರ್ಮ…

ಕಗ್ಗದ ಸಂದೇಶ – ಅನುಭವದ ಸಾರವೇ ಧರ್ಮ…

“ವೇದ ಲೋಕಾಚಾರ ನಿನ್ನನುಭವದ ಯುಕ್ತಿ|
ಶೋಧಿಸಿ ಮೂರನುಂ ಸಂವಾದಗೊಳಿಸಿ||
ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು|
ಹಾದಿ ಬೆಳಕದು ನಿನಗೆ-ಮಂಕುತಿಮ್ಮ||”.

 ಸನಾತನವಾದ ವೇದಗಳ ಜ್ಞಾನ, ಲೋಕದ ಹಿತಚಿಂತನೆಯ ದೃಷ್ಟಿಯಿಂದ ನಮ್ಮ ಹಿರಿಯರು ರೂಢಿಸಿಕೊಂಡು ಬಂದ ಆಚಾರಗಳು ಹಾಗೂ ನಮ್ಮ ಅನುಭವದಿಂದ ಕಂಡುಕೊಂಡ ಅರಿವು ಈ ಮೂರನ್ನು ಸಮನ್ವಯಗೊಳಿಸಿದಾಗ ಅದು ಸಾಧಿಸಿದ ಜ್ಞಾನವಾಗುತ್ತದೆ. ಮನುಷ್ಯನು ಸಾಧಿಸಬಹುದಾದ ಯತಾರ್ಥ ಅರಿವಾಗುತ್ತದೆ.ಇದು ನಮ್ಮ ಬದುಕಿಗೆ ಬೆಳಕಾಗಿ ದಾರಿ ತೋರುತ್ತದೆ ಎಂದು ಮಾನ್ಯ ಡಿವಿಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ವೇದಾನುಭವ, ಲೋಕಾನುಭವ ಮತ್ತು ಆತ್ಮಾನುಭವ ಹೀಗೆ ಮೂರು ಬಗೆಯ ಜ್ಞಾನವನ್ನು ಶೋಧಿಸಿ ಅಂದರೆ ಪರಿಷ್ಕೃತಗೊಳಿಸಿ ಬದುಕಿಗೆ ಅನ್ವಯಿಸಬೇಕೆ ಹೊರತು ಎಲ್ಲವನ್ನೂ  ನೇರವಾಗಿ ಯೋಚಿಸಿದೆ ವಿವೇಚಿಸದೆ ಅಳವಡಿಸಿಕೊಳ್ಳುವುದಲ್ಲ.ವೇದ  ಎನ್ನುವುದು ಕೇವಲ ಒಂದು ಮತದ ಗ್ರಂಥವಲ್ಲ ಅದು ಮಾನವನ ಬದುಕಿಗೆ ಬೇಕಾದ ಎಲ್ಲಾ ತಿಳಿವಳಕೆಗಳ ಸಾರಸಂಗ್ರಹ.ವೇದ ಎಂದರೆ ಜ್ಞಾನ ಅಥವಾ ತಿಳಿವಳಿಕೆ ಎಂದರ್ಥ. ನಾವು ಪಡೆದ ಈ ಮಾನವ ಶರೀರವನ್ನು ಸದುಪಯೋಗಪಡಿಸಿಕೊಳ್ಳುವ ಬಗೆಯನ್ನು ವೇದಗಳು ತಿಳಿಸುತ್ತವೆ. ವೇದ ಉಪನಿಷತ್ತುಗಳೆಲ್ಲವು ಮನುಷ್ಯನ ಲೋಕವ್ಯವಹಾರಗಳೆಲ್ಲವೂ ಧರ್ಮದ ನೆಲೆಗಟ್ಟಿನಲ್ಲಿಯೇ ನಡೆಯಬೇಕು ಎಂದು ತಿಳಿಸುತ್ತವೆ. ಧರ್ಮ ಎನ್ನುವುದು 'ಧೃ'ಎಂಬ ಧಾತುವಿನಿಂದ ಬಂದಿರುವುದು. ಧೃ ಎಂದರೆ ಧರಿಸುವುದು, ಆಧಾರ ಕೊಡುವುದು ಎಂದರ್ಥ. 'ಯಾವುದು ಸಕಲ ಜೀವಿಗಳ ಉದ್ಧಾರಕ್ಕೆ ಆಧಾರವಾಗುತ್ತದೋ, ನೆರವಾಗುತ್ತದೋ ಅದೇ ಧರ್ಮ. ವೇದಗಳ ಜ್ಞಾನದೊಂದಿಗೆ ಅನಾದಿಕಾಲದಿಂದ ನಡೆದುಕೊಂಡ ಬಂದ ಹಿರಿಯರ ಅನುಭವದ ಸಾರ ಮತ್ತು ಅವರ ಹೇಳಿದ ಒಳ್ಳೆಯ ಸಂಪ್ರದಾಯಗಳನ್ನು; ಹಾಗೂ ನಾವು ಪಡೆದ ಜೀವನಾನುಭವ ಈ ಮೂರನ್ನು ಒಟ್ಟು ಸೇರಿಸಿ ಭಟ್ಟಿ ಇಳಿಸಿ ಈ ಕಾಲದ ಜನಜೀವನಕ್ಕೆ ಯಾವುದು ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಪಡೆದ ಆ ಜ್ಞಾನದ ಗಟ್ಟಿ ಹರಳು ನಮ್ಮ ಬದುಕಿನ ಹಾದಿಗೆ ಬೆಳಕಾಗುತ್ತದೆ.


ಮನು ಮಹರ್ಷಿ "ಆತ್ಮ ಯಾವುದನ್ನು ಒಪ್ಪುತ್ತದೋ ಅದೇ ಧರ್ಮ" ಎಂದಿದ್ದಾರೆ. ಕುವೆಂಪು ಅವರು ಎದೆಯ ದನಿಗೆ ಕಿವಿಗೊಡುವುದೇ ಶ್ರೇಷ್ಠ ಧರ್ಮ ಎಂದಿದ್ದಾರೆ. ಎಲ್ಲ ಜ್ಞಾನಕ್ಕಿಂತ ಮಿಗಿಲಾದುದು ಆತ್ಮಜ್ಞಾನ. ಎಲ್ಲವನ್ನು ಆತ್ಮಪೂರ್ವಕವಾಗಿ ಶೋಧಿಸಿ ಬದುಕಿಗೆ ಬಳಸಬೇಕು. ಅದುವೇ ನಿಜವಾದ ಅರಿವು ಮತ್ತು ಬಾಳಿಗೆ ಬೆಳಕು. "ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳನೋದುತಂ| ಕೆಲವಂ ಮಾಳ್ವವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ| ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ| ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನ ಸೋಮೇಶ್ವರಾ"ಎಂದು ಕವಿ ಪುಲಿಗೆರೆ ಸೋಮನಾಥನು ಹೇಳುವಂತೆ ಹಲವು ಬಗೆಯಿಂದ ಜ್ಞಾನವನ್ನು ಪಡೆದು ಅದನ್ನು ಸಂಸ್ಕರಿಸಿ ಬಳಸಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!