ಆರೋಗ್ಯಧಾರ – ಆಹಾರ ಸೇವಿಸುವ ಸರಿಯಾದ ಕ್ರಮ (ಭಾಗ – 1)

ಜೀವಿಸಲು ಆಹಾರ ಬಹಳ ಮುಖ್ಯ. ಆದರೆ ಅದಕ್ಕೊಂದು ಕ್ರಮ ಆಯುರ್ವೇದದಲ್ಲಿ ಹೇಳಿದೆ. ಅದನ್ನು ಅನುಸರಿಸಿದರೆ ನಮ್ಮ ಶರೀರ ಹಾಗೂ ಮನಸ್ಸು ಸ್ವಾಸ್ಥ್ಯದಿಂದಿರುತ್ತದೆ. ವಿಧಿಪೂರ್ವಕ ಆಹಾರ ಸೇವಿಸುವುದರಿಂದ ನಮ್ಮ ಇಂದ್ರಿಯಗಳಿಗೆ ಹಿತಕಾರಿ ಹಾಗೂ ಆಯುವನ್ನು ವೃದ್ಧಿಸುವಂಥಹದ್ದು. ಇದು ರಸಾದಿ ಧಾತುಗಳನ್ನು, ಇಂದ್ರಿಯಾದಿಗಳನ್ನು, ಬಲ, ಮನಸ್ಸಿಗೆ ಪ್ರಸನ್ನ ಹಾಗೂ ಆರೋಗ್ಯವನ್ನು ವೃದ್ಧಿಸುತ್ತದೆ. ನಮ್ಮ ಜಠರಾಗ್ನಿಯನ್ನು ಸುಸ್ಥಿತಿಯಲ್ಲಿ ಇಡಲು ಇದು ಅತಿ ಅವಶ್ಯಕ. ನಮ್ಮ ಶರೀರದ ಸ್ವಾಸ್ಥ್ಯವು ನಮ್ಮ ಜಠರಾಗ್ನಿಯ ಮೇಲೆ ಅವಲಂಬಿತವಾಗಿರುತ್ತದೆ ನಮ್ಮ ಬಲ, ಆರೋಗ್ಯ, ಆಯು ಹಾಗೂ ಪ್ರಾಣವು ಅಗ್ನಿಯ ಮೇಲೆ ಆಶ್ರಿತವಾಗಿದೆ. ನಾವು ಸೇವಿಸುವ ಆಹಾರ ರೂಪಿ ಇಂಧನವು ನಮ್ಮ ಜಠರಾಗ್ನಿಯನ್ನು ಪ್ರಜ್ವಲಿಸುತ್ತದೆ, ಆಹಾರ ಸಿಗದಿದ್ದರೆ ಅದು ಶಾಂತವಾಗುತ್ತದೆ.

ಆಯುರ್ವೇದದಲ್ಲಿ ಆಹಾರದ ಈ ಏಳು ಕಲ್ಪನಗಳ ಬಗ್ಗೆ ತಿಳಿಸಿದೆ. ಆಹಾರ ಸೇವಿಸುವ ಮುನ್ನ ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

  1. ಆಹಾರದ ಸ್ವಭಾವ – ಇದರಲ್ಲಿ ಎರಡು ವಿಧಗಳು. ಲಘು ಆಹಾರ ಹಾಗೂ ಗುರು ಆಹಾರ. ಲಘು ಆಹಾರ ಎಂದರೆ ಬೇಗವಾಗಿ ಜೀರ್ಣವಾಗುವಂತಹದ್ದು. ಗುರು ಆಹಾರವೆಂದರೆ ಜೀರ್ಣಕ್ಕೆ ಅಧಿಕ ಸಮಯವನ್ನು ತೋಗೋಳುವಂಥದ್ದು. ಮಳೆ ನೀರು, ಅನ್ನ, ಹೆಸರುಕಾಳು ಇವೆಲ್ಲ ಸ್ವಭಾವದಲ್ಲಿ ಲಘು ಇರುತ್ತದೆ. ಹಾಗೆಯೇ ಹಾಲು, ಕಬ್ಬು, ಉದ್ದು ಸ್ವಭಾವದಲ್ಲಿ ಗುರುವಿರುತ್ತದೆ.
  2. ಸಂಯೋಗ – ಎರಡು ಅಥವಾ ಅನೇಕ ಆಹಾರ ದ್ರವ್ಯಗಳ ಸಂಯೋಜನೆಯನ್ನು ಸಂಯೋಗ ಎನ್ನುತ್ತಾರೆ. ಕೆಲವು ದ್ರವ್ಯಗಳ ಮಿಶ್ರಣದಿಂದ ಅದರ ಗುಣಗಳ ವೃದ್ಧಿಯಾಗುತ್ತದೆ. ಆದರೆ ಕೆಲವು ದ್ರವ್ಯಗಳ ಮಿಶ್ರಣದಿಂದ ಮಾರಕ ವಾಗುವುದೂ ಉಂಟು. ಉದಾಹರಣೆಗೆ ಸಮ ಪ್ರಮಾಣದಲ್ಲಿ ತುಪ್ಪ ಹಾಗೂ ಜೇನುತುಪ್ಪವನ್ನು ಸೇವಿಸಬಾರದು. ಅಸಮ ಪ್ರಮಾಣದಲ್ಲಿ ಅದನ್ನು ಸೇವಿಸಬಹುದು. ಇದು ನಮಗೆ ಅವಶ್ಯಕವಾಗಿ ತಿಳಿದಿರಬೇಕು.
  3. ಸಂಸ್ಕಾರ – ಆಹಾರದ್ರವ್ಯಗಳ ಗುಣಗಳನ್ನು ವೃದ್ಧಿಸಲು ಕೆಲವು ಸಂಸ್ಕರಣೆ ಮಾಡಲಾಗುತ್ತದೆ. ಉದಾಹರಣೆಗೆ ದ್ರವ್ಯಗಳನ್ನು ಸ್ವರಸದಲ್ಲಿ ಸೋಸುವುದು, ಅಗ್ನಿ ಸ್ಪರ್ಶದಿಂದ, ನೀರು ಮುಂತಾದವುಗಳಿಂದ ಅದನ್ನು ಸಂಸ್ಕರಿಸಲಾಗುತ್ತದೆ.
  4. ಮಾತ್ರ – ಸೇವಿಸುವ ಪ್ರಮಾಣ. ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು ಹಾಗೂ ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಕೂಡ ಒಳ್ಳೆಯದಲ್ಲ.
  5. ದೇಶ – ಆಹಾರ ಧಾನ್ಯಗಳನ್ನು ಬೆಳೆಸಲಾದ ಪ್ರದೇಶ. ಆಹಾರ ದ್ರವ್ಯದ ಗುಣಗಳು ಅದನ್ನು ಬೆಳೆಯುವ ಸ್ಥಳಗಳ ಮೇಲೆ ಅವಲಂಬಿತವಾಗಿದೆ. ಒಂದೇ ದ್ರವ್ಯವು ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದರೆ ಆ ಸ್ಥಳದ ಮಣ್ಣಿನ ಗುಣಗಳು ಆ ಬೆಳೆಯಲ್ಲಿ ಸೇರುತ್ತದೆ.
  6. ಕಾಲ – ಯಾವ ಕಾಲದಲ್ಲಿ ಆಹಾರವನ್ನು ಸೇವಿಸಬೇಕು, ಯಾವಾಗ ಸೇವಿಸಬೇಕು, ಯಾವ ಋತುವಿನಲ್ಲಿ ಹೇಗೆ ಸೇವಿಸಬೇಕು ಎಂದು ತಿಳಿಯುವುದು ಬಹಳ ಮುಖ್ಯ. ಉದಾಹರಣೆಗೆ ಅಜೀರ್ಣವಾದಾಗ ಆಹಾರವನ್ನು ಸೇವಿಸಬಾರದು. ರಾತ್ರಿಯಲ್ಲಿ ಮೊಸರು ಸೇವಿಸಬಾರದು. ಹೀಗೆ ಅನೇಕ ವಿಷಯಗಳ ಬಗ್ಗೆ ನಮಗೆ ತಿಳಿದಿರಬೇಕು.
    (ಮುಂದುವರಿಯುವುದು )

ಡಾ. ಹರ್ಷಾ ಕಾಮತ್





























































































































































































































error: Content is protected !!
Scroll to Top