Saturday, January 22, 2022
spot_img
Homeಅಂಕಣಕಗ್ಗದ ಸಂದೇಶ- ಕಷ್ಟಕ್ಕಂಜದಿರು, ಸುಖಕ್ಕೆ ಹಿಗ್ಗದಿರು...

ಕಗ್ಗದ ಸಂದೇಶ- ಕಷ್ಟಕ್ಕಂಜದಿರು, ಸುಖಕ್ಕೆ ಹಿಗ್ಗದಿರು…

“ತಲೆಪಾಗಿನೊಳಕೊಳಕ ಪಂಚೆನಿರಿಯೊಳಹರಕ|
ತಿಳಿಸುವೆಯ ರಜಕಗಲ್ಲದೆ ಲೋಗರಿಗೆ||
ಅಳಲು ದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ|
ನಿಳೆಗೆ ಹರಡುವುದೇಕೋ?-ಮಂಕುತಿಮ್ಮ||”

  ತಲೆಗೆ ಸುತ್ತಿದ ಸುಂದರವಾದ ಮುಂಡಾಸಿನ ಒಳಗಿರುವ ಕೊಳೆಯನ್ನು  ಅಥವಾ ಉಡುವ ಪಂಚೆಯ ನೆರಿಗೆಯಲ್ಲಿರುವ ಹರಿದಿರುವುದನ್ನು ಅದನ್ನು ಒಗೆಯುವ ಅಗಸನಿಗೆ ಮಾತ್ರ ತಿಳಿಯುತ್ತದೆಯೇ ಹೊರತು ಅದನ್ನು ಲೋಕದ ಜನರಿಗೆಲ್ಲಾ ಸಾರಿ ಹೇಳುವುದಿಲ್ಲ.ಅದೇ ರೀತಿಯಲ್ಲಿ ನಮ್ಮ ಬದುಕಿನ ಕಷ್ಟಗಳನ್ನು ಮತ್ತು ನೋವುಗಳನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳದೆ ಭುವಿಯ ಜನರಿಗೆಲ್ಲಾ ಸಾರಿ ಹೇಳುವುದು ಸರಿಯಲ್ಲ ಎಂದು ಮಾನ್ಯ ಡಿವಿಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
 ಜೀವನವೆಂದ ಮೇಲೆ ಕಷ್ಟಕಾರ್ಪಣ್ಯಗಳು ದುಗುಡ ದುಮ್ಮಾನಗಳು ತಪ್ಪಿದ್ದಲ್ಲ.ಸುಖ ಮತ್ತು ಕಷ್ಟಗಳು ಒಂದೇ ನಾಣ್ಯದ ಎರಡು ಮುಖಗಳು.ಜೀವನದಲ್ಲಿ ಒಮ್ಮೊಮ್ಮೆ ಒಂದೊಂದು ಮೇಲುಗೈ ಸಾಧಿಸುತ್ತದೆ.ಎರಡನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು.ಸಂಕಟಸಂಕಷ್ಟಗಳು ಬಂದಾಗ ಇಡೀ ಜಗತ್ತಿನಲ್ಲಿ ನನಗೆ ಮಾತ್ರ ಬಂದಿಹುದು ಎಂಬಂತೆ ಗೋಳಾಡಿ ಬೊಬ್ಬಿಡುವುದನ್ನು ಬಿಟ್ಟು ಇದು ಜೀವನದ ಅನಿವಾರ್ಯ ಭಾಗವೆಂದು ಭಾವಿಸಿ ಮೌನವಾಗಿ ಸಹಿಸಿಕೊಳ್ಳುವುದನ್ನು ಕಲಿಯಬೇಕು.ಸಮುದ್ರ ಮಥನದಿಂದ ಬಂದ ವಿಷವನ್ನು ಶಿವನೊಬ್ಬನೇ ಕುಡಿದು ಅಮೃತವನ್ನು ಎಲ್ಲಾ ದೇವತೆಗಳಿಗೆ ಹಂಚಿದಂತೆ ಕಷ್ಟದ ಕಹಿಯನ್ನು ನಾವೇ ನುಂಗಿ ಸಂತೋಷದ ಸಿಹಿಯನ್ನು ಎಲ್ಲರಿಗೂ ಹಂಚಬೇಕು.
  " ಬಾಳೆಲ್ಲ ಬೇವಲ್ಲ ಬರಿ ಬೆಲ್ಲಮುಂ ಅಲ್ಲ| ಮೇಳವಿಸಿ ಕೂಡಿಹವು ಇವುಗಳೆರಡು|

ಗೋಳಾಡದಿರು ಬರಿದೆ ಬಹು ಕಷ್ಟ ಬಂತೆಂದು| ತಾಳು ಸುಖ ಬರುವನಕ -ಬೋಳುಬಸವ”ಎಂಬ ನಿಜಗುಣ ಕವಿಯ ಮಾತಿನಂತೆ ಕಷ್ಟಗಳನ್ನು ಸಹಿಸಿದವನಿಗೆ ಮಾತ್ರ ಸುಖದ ನಿಜವಾದ ಸ್ವಾದ ತಿಳಿಯುವುದು.”ಕಷ್ಟ ಭಯ ತೋರ್ದಂದು ನಷ್ಟನಿಗದಾಂದು| ದೃಷ್ಟಿಯನು ತಿರುಗಿಸೊಳಗಡೆಗೆ ನೋಡಲ್ಲಿ| ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ| ಪುಷ್ಟಿಗೊಳ್ಳದರಿಂದೆ-ಮರುಳಮುನಿಯ” ಎಂಬಂತೆ ಕಷ್ಟನಷ್ಟಗಳು ಎದುರಾದಾಗ ಗೋಳಾಡುವುದನ್ನು ಬಿಟ್ಟು ದೃಷ್ಟಿಯನು ಮನಸ್ಸಿನೊಳಗೆ ತಿರುಗಿಸಿದಾಗ ಅಲ್ಲಿ ಗುಟ್ಟಾಗಿ ಶ್ರವಿಸುವ ಅಮೃತದ್ರವ ಪ್ರಾಪ್ತಿಯಾಗುವುದು. ಅದನ್ನು ಕುಡಿದು ಗಟ್ಟಿಯಾಗಬೇಕು ಎನ್ನುವ ಡಿವಿಜಿಯವರು ಹೇಳಿದ ತತ್ತ್ವವನ್ನು ಅರ್ಥಮಾಡಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!