Thursday, December 2, 2021
spot_img
Homeಸುದ್ದಿಆಪರೇಷನ್ ಸನ್‌ಸೆಟ್ ಯೋಜನೆ ಹಂತ ಹಂತವಾಗಿ ವಿವಿಧ ಠಾಣೆಗಳಿಗೆ ವಿಸ್ತರಣೆ-ಮಟ್ಕಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ- ಎಸ್ಪಿ...

ಆಪರೇಷನ್ ಸನ್‌ಸೆಟ್ ಯೋಜನೆ ಹಂತ ಹಂತವಾಗಿ ವಿವಿಧ ಠಾಣೆಗಳಿಗೆ ವಿಸ್ತರಣೆ-ಮಟ್ಕಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ- ಎಸ್ಪಿ ಎನ್.ವಿಷ್ಣುವರ್ಧನ್

ಉಡುಪಿ : ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಕಳವು, ಮಾದಕ ದ್ರವ್ಯ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಆಪರೇಷನ್ ಸನ್‌ಸೆಟ್ ಯೋಜನೆಯನ್ನು ಮುಂದೆ ಉಡುಪಿ ನಗರ, ಬ್ರಹ್ಮಾವರ, ಕುಂದಾಪುರ ಸೇರಿದಂತೆ ಹಂತಹಂತವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗೆ ವಿಸ್ತರಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಕೆಲವು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಕೃತ್ಯದಲ್ಲಿ ಹಿಂದೆ ಭಾಗಿಯಾಗಿದ್ದ ಆರೋಪಿಗಳ ಮೇಲೆಯೂ ನಿಗಾ ಇರಿಸಲಾಗುತ್ತಿದೆ. ಈ ಮೂಲಕ ಅನೇಕ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟ ಹಾಗೂ ಸೇವನೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ನೇರವಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮೂಲಕವೂ ಮಾಹಿತಿ ನೀಡಬಹುದು. ಈ ಕುರಿತು ಪರಿಶೀಲಿಸಿ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ಹೇಳಿದರು.

ವಂಚನೆಗೆ ಒಳಗಾಗಿ ಎಟಿಎಂ ಹಾಗೂ ಬ್ಯಾಂಕ್ ಖಾತೆಯಿಂದ ಹಣ ಕಳೆದು ಕೊಂಡವರು ತಕ್ಷಣವೇ ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ದೂರು ನೀಡಬೇಕು. ಅಲ್ಲಿಂದ ಉಡುಪಿ ಸೆನ್ ಪೊಲೀಸ್‌ಗೆ ಮಾಹಿತಿ ವರ್ಗಾಯಿಸಿ, ತನಿಖೆ ಮಾಡಲಾಗುತ್ತದೆ. ಇದರಿಂದ ಖಾತೆಯಿಂದ ಹಲವು ಬಾರಿ ಹಣ ವರ್ಗಾವಣೆ ಆಗದಂತೆ ತಡೆಯಬಹುದು. ಅದು ಬಿಟ್ಟು ತಕ್ಷಣವೇ ಹಣ ವಾಪಾಸ್ಸು ಬರುವಂತೆ ಮಾಡಲು ಆಗುವುದಿಲ್ಲ ಎಂದರು.

ಇತರ ಜಿಲ್ಲೆಗೆ ಹೊಲಿಕೆ ಮಾಡಿದರೆ ಉಡುಪಿ ಜಿಲ್ಲೆಯಿಂದ ಪೊಲೀಸ್ ವೃತ್ತಿಗೆ ಬರುವವರ ಸಂಖ್ಯೆ ತೀರಾ ಕಡಿಮೆ ಆದುದರಿಂದ ಜಿಲ್ಲೆಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಬೇಕು ಎಂದು ಅವರು ಮನವಿ ಮಾಡಿದರು.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಉಡುಪಿ ಆಗಮಿಸುವ ವಲಸೆ ಕಾರ್ಮಿಕರ ಸಂಪೂರ್ಣ ಮಾಹಿತಿಗಳು ಬೀಟ್ ಸಿಬ್ಬಂದಿ ಬಳಿ ಇರುತ್ತದೆ ಎಂದ ಅವರು, ಜಿಲ್ಲೆಯಾದ್ಯಂತ ಮಟ್ಕಾ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾಗೂ ಕಾಮುಕರ ಹಾವಳಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಮಣಿಪಾಲದಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ಗಳನ್ನು ಉಡುಪಿ ನಗರದ 12 ಕಡೆಗಳಲ್ಲಿ ಅಳವಡಿಸಲಾಗುತ್ತದೆ. ಫುಟ್‌ಪಾತ್‌ಗಳ ಮೇಲೆ ವಾಹನ ನಿಲ್ಲಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ವಾರ್ತಾಧಿಕಾರಿ ಮಂಜುನಾಥ್, ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಳ್ಳಿ ಉಪಸ್ಥಿತರಿದ್ದರು.

ಕಲ್ಸಂಕ ಜಂಕ್ಷನ್ ಅಗಲೀಕರಣಕ್ಕೆ ಕ್ರಮ
ಕಲ್ಸಂಕ ಜಂಕ್ಷನ್‌ನಲ್ಲಿ ಪ್ರತಿದಿನ ಸಂಭವಿಸುತ್ತಿರುವ ಟ್ರಾಫಿಕ್ ಸಮಸ್ಯೆ ಸಂಬಂಧ ಜಂಕ್ಷನ್ ಇನ್ನಷ್ಟು ಅಭಿವೃದ್ಧಿ ಹಾಗೂ ಅಗಲೀಕರಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿಕೊಂಡಿದ್ದೇವೆ. ಈ ಜಂಕ್ಷನ್‌ನಲ್ಲಿ ಉಡುಪಿಯಿಂದ ಗುಂಡಿಬೈಲು ಕಡೆ ಮತ್ತು ಗುಂಡಿಬೈಲು ಕಡೆಯಿಂದ ಮಣಿಪಾಲ ಕಡೆ ಫ್ರೀ ಲೆಫ್ಟ್ ಮಾಡಿದರೆ ಟ್ರಾಫಿಕ್ ಜಾಮ್ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿ ಸರಿಯಾಗಬಹುದು. ಈ ಕುರಿತು ಮಳೆ ಮುಗಿದ ಬಳಿಕ ನಾವು ಹಾಗೂ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಇಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗುವುದು ಎಂದು ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!