Thursday, December 2, 2021
spot_img
Homeಅಂಕಣಕಗ್ಗದ ಸಂದೇಶ - ಸಾಧಿಸದಿದ್ದರೆ ಸಿದ್ಧಿ ದಕ್ಕುವುದೇತು….?

ಕಗ್ಗದ ಸಂದೇಶ – ಸಾಧಿಸದಿದ್ದರೆ ಸಿದ್ಧಿ ದಕ್ಕುವುದೇತು….?

“ಏಸು ಸಲ ತಪವಗೈದೇಸು ಬನ್ನವನಾಂತು|
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್ |
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ|
ಲೇಸಾಗಿಸಾತ್ಮವನು-ಮಂಕುತಿಮ್ಮ”.

 ವಿಶ್ವಾಮಿತ್ರನು ಬ್ರಹ್ಮರ್ಷಿ ಪದವಿ ಪಡೆಯಲು ಎಷ್ಟು ಸಲ ತಪಸ್ಸನ್ನು ಮಾಡಿದನು? ಎಷ್ಟು ಕಷ್ಟವನ್ನು ಅನುಭವಿಸಿದನು? ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ಮತ್ತೆ ಮತ್ತೆ ಪ್ರಯತ್ನವನ್ನು ಮಾಡಿ ಕೊನೆಗೂ ಕೌಶಿಕ ಬ್ರಹ್ಮರ್ಷಿ ವಿಶ್ವಾಮಿತ್ರನಾಗುತ್ತಾನೆ.ಹೀಗೆ ಸಾಧನೆಯ ಹಾದಿಯಲ್ಲಿ ಎದುರಾಗುವ ಅಡ್ಡಿಆತಂಕಗಳನ್ನು ಎದುರಿಸಿ ಛಲಬಿಡದೆ ಸಾಧನೆಯ ಗುರಿ ತಲುಪಿದಾಗಲೆ ಆತ್ಮಕ್ಕೆ ಒಳಿತಾಗುವುದೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಕ್ಷತ್ರಿಯ ರಾಜನಾದ ಕೌಶಿಕ ವಶಿಷ್ಠ ಮಹರ್ಷಿಗಳ ಬ್ರಹ್ಮ ತೇಜಸ್ಸಿನ ಬಲವನ್ನು ಕಂಡು ಕ್ಷಾತ್ರಬಲಕ್ಕಿಂತ ಬ್ರಹ್ಮಬಲವೇ ಪ್ರಬಲವೆಂದರಿತು ಅದನ್ನು ಪಡೆಯಲು ತಪಸ್ಸನ್ನು ಕೈಗೊಂಡಾಗ ಅವನ ತಪಸ್ಸನ್ನು ಕೆಡಿಸಲು ಇಂದ್ರಾದಿ ದೇವತೆಗಳು ನಾನಾ ರೀತಿಯಲ್ಲಿ ಪ್ರಯತ್ನಿಸಿದರು.ಅವರು ಒಡ್ಡಿದ ಹಲವಾರು ಅಡ್ಡಿಆತಂಕಗಳನ್ನು ತಡೆದುಕೊಂಡು ಅವುಗಳೆಲ್ಲವನ್ನೂ ಮೆಟ್ಟಿನಿಂತು ಛಲಬಿಡದೆ ಮತ್ತೆ ಮತ್ತೆ ತಪಸ್ಸನ್ನು ಮಾಡಿ ಶ್ರೇಷ್ಠವಾದ ಬ್ರಹ್ಮರ್ಷಿ ಪದವಿಯನ್ನು ಪಡೆದನು. ಕೌಶಿಕನ ಹಾಗೆಯೆ ನಾವು ಕೂಡ ಜೀವನದಲ್ಲಿ ಎದುರಾಗುವ ಕಷ್ಟನಷ್ಟಕ್ಕೆ ಎದೆಗುಂದದೆ ಸಮಸ್ಯೆಗಳನ್ನು ಧೈರ್ಯದಿಂದ ಸವಾಲಾಗಿ ಸ್ವೀಕರಿಸಿ ಯಶಸ್ಸನ್ನು ಪಡೆಯಬೇಕೆಂದಿದ್ದಾರೆ ಡಿವಿಜಿ.
” ಕಲಿಸುವುದು ಪಕ್ವತೆಯ ಬಾಳಿನನುಭವ ನಮಗೆ| ಭಯ ಅಭಯ,ಶುಭ ಅಶುಭ ಒಂದೆ ಬಗೆ ಆಗ| ಯಾವ ಕಾತರವಿಲ್ಲ,ಪರಿಶುದ್ಧ ಮಾನಸದಿ| ವಾಲು ನೀ ಹಗುರತೆಗೆ-ಮುದ್ದುರಾಮ” ಎಂಬ ಕೆ.ಶಿವಪ್ಪನವರ ಮಾತಿನಂತೆ ಕಷ್ಟಗಳನ್ನು ಸಮಸ್ಯೆಗಳನ್ನು ಹಾಗೂ ಅಡ್ಡಿಆತಂಕಗಳನ್ನು ಸಕಾರಾತ್ಮಕ ಮನೋಭಾದೊಂದಿಗೆ ಎದುರಿಸಿದಾಗಲೇ ಜೀವನದಲ್ಲಿ ಪಕ್ವತೆ ಬರುವುದು.ಹಿರಿದಾದ ಜೀವನಾನುಭವ ಪ್ರಾಪ್ತವಾಗುವುದು.ಕಷ್ಟಗಳನ್ನು ಎದುರಿಸಲಾಗದೆ ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲೆ ಕೈಬಿಡುವವನು ಮಧ್ಯಮ. ಕೈಗೆತ್ತಿಕೊಂಡ ಕಾರ್ಯವನ್ನು ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಛಲಬಿಡದೆ ಪೂರ್ತಿಯಾಗಿ ಮಾಡುವವನು ಶ್ರೇಷ್ಠ ಸಾಧಕನೆನಿಸಿಕೊಳ್ಳುತ್ತಾನೆ. ಡಿವಿಜಿಯವರ ಈ ಮುಕ್ತಕದ ಸಂದೇಶವನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!