Tuesday, December 7, 2021
spot_img
HomeUncategorizedಕರ್ನಾಟಕ ಪೌರಸಭೆಗಳ ಅಧಿನಿಯಮ 1964 - ಪುರಸಭೆಯ ಕೌನ್ಸಿಲರುಗಳ ಹೊಣೆಗಾರಿಕೆ - ಕಾನೂನು ಮಾಹಿತಿ

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 – ಪುರಸಭೆಯ ಕೌನ್ಸಿಲರುಗಳ ಹೊಣೆಗಾರಿಕೆ – ಕಾನೂನು ಮಾಹಿತಿ

  1. ಕರ್ನಾಟಕ ಪೌರಸಭೆಗಳ ಅಧಿನಿಯಮದ ಪ್ರಕಾರ ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯ ಮೂಲಕ ಸರ್ಕಾರಿ ಜನಗಣತಿಯ ಆಧಾರದ ಮೇಲೆ ಸ್ಥಳೀಯ ಪ್ರದೇಶವನ್ನು ನಗರ ಪೌರಸಭೆ ಪ್ರದೇಶ, ಅಥವಾ ಪಟ್ಟಣ ಪೌರಸಭೆ ಪ್ರದೇಶವೆಂದು ಘೋಷಿಸಬೇಕಾಗಿರುತ್ತದೆ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸ್ಥಳೀಯ ಪ್ರದೇಶವನ್ನು ನಗರ ಪೌರಸಭೆಯೆಂದು ಮತ್ತು 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಪ್ರದೇಶವನ್ನು ಪಟ್ಟಣ ಪೌರಸಭೆಯೆಂದು ಘೋಷಿಸಬೇಕಾಗಿರುತ್ತದೆ.
  2. ಪುರಸಭೆಯ ಕಾರ್ಯನಿರ್ವಹಣೆಗಾಗಿ ಕನಿಷ್ಟ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಮತ್ತು ಪುರಸಭೆಯ ಅಧ್ಯಕ್ಷರು ಸೂಕ್ತವೆಂದು ಭಾವಿಸಿದಾಗ ವಿಶೇಷ ಸಭೆಯನ್ನು ಕರೆಯಬಹುದು. ಸಾಮಾನ್ಯ ಸಭೆಗೆ ಕನಿಷ್ಟ 7 ದಿನಗಳ ನೋಟೀಸು ಮತ್ತು ವಿಶೇಷ ಸಭೆಗೆ ಕನಿಷ್ಟ 3 ದಿನಗಳ ಸ್ಪಷ್ಟ ನೋಟೀಸನ್ನು ಪ್ರತಿಯೊಬ್ಬ ಕೌನ್ಸಿಲರ್‌ಗೆ ಜಾರಿಗೊಳಿಸುವ ಹೊಣೆಗಾರಿಕೆಯು ಪುರಸಭೆಯ ಮುಖ್ಯಾಧಿಕಾರಿಯವರದ್ದಾಗಿರುತ್ತದೆ. ಅತೀ ಜರೂರು ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಯವರು ತನಗೆ ಯುಕ್ತ ಕಂಡ ಕಡಿಮೆ ಅವಧಿಯ ವಿಶೇಷವಾದ ನೋಟೀಸನ್ನು ಸಂಬಂಧಪಟ್ಟ ಕೌನ್ಸಿಲರ್‌ಗೆ ಜಾರಿಗೊಳಿಸಬಹುದು. ಈ ರೀತಿಯಾಗಿ ಜಾರಿಗೊಳಿಸುವ ನೋಟೀಸು ಸಭೆಯ ಉದ್ದೇಶ ಮತ್ತು ಸಭೆಯಲ್ಲಿ ಚರ್ಚಿಸಿ ಇತ್ಯರ್ಥಗೊಳಿಸಬೇಕಾಗಿರುವ ಪ್ರಸ್ತಾವನೆಗಳನ್ನು ಒಳಗೊಂಡಿರಬೇಕು.
  3. ಸಭೆಯಲ್ಲಿ ತೀರ್ಮಾನಿಸುವ ಪ್ರತಿಯೊಂದು ವಿಷಯವು ಸಾರ್ವಜನಿಕರಿಗೆ ಮುಕ್ತವಾಗಿರತಕ್ಕದ್ದು.
  4. ಸಭೆಯಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಯಾವುದೇ ಕಾಲದಲ್ಲಿ ಕೌನ್ಸಿಲರ್‌ಗಳ ಒಟ್ಟು ಸಂಖ್ಯೆಯ ಮೂರನೇ ಒಂದಕ್ಕಿಂತ ಜಾಸ್ತಿ ಕೌನ್ಸಿಲರ್‌ಗಳು ಜಾಸ್ತಿ ಇದ್ದಲ್ಲಿ ಮಾತ್ರ ಸಭೆಯು ತನ್ನ ತೀರ್ಮಾನವನ್ನು ಕೈಗೊಳ್ಳಬಹುದು.
  5. ಯಾವುದೇ ಪುರಸಭೆಯು ಕೈಗೊಂಡಿರುವ ನಿರ್ಣಯವು ಸಾರ್ವಜನಿಕರ ಹಿತಾಸಕ್ತಿಗೆ ಅಥವಾ ಕಾನೂನಿನ ನಿಯಮಾನುಸಾರಗಳಿಗೆ ವ್ಯತಿರಿಕ್ತವಾದಲ್ಲಿ ಅಥವಾ ಅಂತಹ ನಿರ್ಣಯವು ಸಮಾಜದಲ್ಲಿ ಶಾಂತಿ ಭಂಗವನ್ನು ಉಂಟು ಮಾಡುವ ಸಾಧ್ಯತೆ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯವರು ಸಾರ್ವಜನಿಕರ ದೂರಿನ ಮೇರೆಗೆ ಅಥವಾ ಸ್ವತಃ ತನ್ನ ಸೂಕ್ತ ಆದೇಶದ ಮೂಲಕ ಅಂತಹ ನಿರ್ಣಯದ ಜಾರಿಯನ್ನು ಅಮಾನತು ಗೊಳಿಸಬಹುದು ಅಥವಾ ಅದನ್ನು ಜಾರಿಗೊಳಿಸುವಿಕೆಯ ಬಗ್ಗೆ ನಿಷೇಧಿಸಬಹುದು.
  6. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಯಾವುದೇ ಕಾಮಗಾರಿಯನ್ನು ಪುರಸಭೆ ಮೂಲಕ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡುವ ಅಥವಾ ಅಂತಹ ಕಾಮಗಾರಿಯನ್ನು ನಿರ್ವಹಿಸಲು ಯಾವುದೇ ಸೂಕ್ತ ವ್ಯಕ್ತಿಯನ್ನು ನೇಮಿಸುವ ಮತ್ತು ಅಂತಹ ಕಾಮಗಾರಿಯ ವೆಚ್ಚವನ್ನು ಪುರಸಭೆಯವರು ಸಂದಾಯ ಮಾಡುವಂತೆ ನಿರ್ದೇಶಿಸುವ ವಿಶೇಷ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಯವರು ಹೊಂದಿರುತ್ತಾರೆ.
  7. ಪುರಸಭೆಯ ಪ್ರತಿಯೊಬ್ಬ ಕೌನ್ಸಿಲರ್ ಸಹಭಾಗಿಯಾಗುವ ತನ್ನ ಯಾವುದೇ ಕರ್ತವ್ಯದಲ್ಲಿನ ದುರ್ವರ್ತನೆ ಅಥವಾ ಅತೀವ ನಿರ್ಲಕ್ಷತೆಯಿಂದ ಉಂಟಾಗುವ ಪುರಸಭೆಯ ಅಥವಾ ಸಾರ್ವಜನಿಕ ಫಂಡಿನ ಯಾವುದೇ ಹಣ ಅಥವ ಇತರ ಸ್ವತ್ತಿನ ನಷ್ಟ, ಪೋಲು ಅಥವಾ ದುರ್ವಿನಿಯೋಗಕ್ಕಾಗಿ ಸಂಬಂಧಪಟ್ಟ ಕೌನ್ಸಿಲರ್ ವೈಯಕ್ತಿಕವಾಗಿ ಹೊಣೆಗಾರನಾಗಿರುತ್ತಾನೆ. ಮತ್ತು ಈ ಸಂಬಂಧ ಸೂಕ್ತ ವಿಚಾರಣೆ ನಡೆಸಿ ಸಂಬಂಧಪಟ್ಟ ಕೌನ್ಸಿಲರ್ ವಿರುದ್ಧ ಕ್ರಮ ಕೈಗೊಂಡು ಅಂತಹ ನಷ್ಟವನ್ನು ಆತನಿಂದ ವಸೂಲು ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಯವರು ಹೊಂದಿರುತ್ತಾರೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 984523 2490,9611682681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!