Tuesday, December 7, 2021
spot_img
Homeಅಂಕಣಕಗ್ಗದ ಸಂದೇಶ-ಯಾವುದೂ ನಿಕೃಷ್ಟವಲ್ಲ ಈ ಪುಣ್ಯ ಭೂಮಿಯಲ್ಲಿ...

ಕಗ್ಗದ ಸಂದೇಶ-ಯಾವುದೂ ನಿಕೃಷ್ಟವಲ್ಲ ಈ ಪುಣ್ಯ ಭೂಮಿಯಲ್ಲಿ…

“ಏನಾನುಮಂ ಮಾಡು ಕೈಗೆದೊರೆತುಜ್ಜುಗವ|
ನಾನೇನು ಹುಲುಕಡ್ಡಿಯೆಂಬ ನುಡಿಬೇಡ|
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ|
ತಾಣ ನಿನಗಿಹುದಲ್ಲಿ-ಮಂಕುತಿಮ್ಮ”.

ನಿನ್ನ ಕೈಗೆ ದೊರಕಿದ ಯಾವುದೇ ಉದ್ಯೋಗವಾಗಲಿ ಅದನ್ನು ಶ್ರದ್ಧೆಯಿಂದ ಮಾಡು .'ನಾನೊಬ್ಬ ಹುಲು ಮಾನವ ನನ್ನ ಕೈಯಲ್ಲಿ ಏನಾಗುತ್ತದೆ'  ಎನ್ನುವ  ಕೀಳರಿಮೆಯ ಮಾತನ್ನು ಆಡಬೇಡ.ಈ ಜಗತ್ತೆನ್ನುವ ಪವಿತ್ರವಾದ ದೇವಾಲಯದಲ್ಲಿ ನಿಕೃಷ್ಟವಾದ ಕೆಲಸ ಎಂದು ಯಾವುದೂ ಇಲ್ಲ. ಈ ಪುಣ್ಯ ಭೂಮಿಯಲ್ಲಿ ನಿನಗೂ ಕೆಲಸ ಮಾಡುವುದಕ್ಕೆ ಸ್ಥಳವಿದೆ ಅದನ್ನು ಸದುಪಯೋಗ ಪಡಿಸಿಕೊ ಎಂದು ಮಾನ್ಯ ಡಿ ವಿ.ಜಿ ಯವರು  ಈ ಮುಕ್ತಕದಲ್ಲಿ ಹೇಳಿದ್ದಾರೆ.
ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ.ಪ್ರತಿಯೊಂದು ಕೆಲಸವೂ ಪವಿತ್ರ. ಸಣ್ಣದಿರಲಿ ದೊಡ್ಡದಿರಲಿ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.ಇದರೊಂದಿಗೆ ನಮ್ಮ ಬಗ್ಗೆ ನಮಗೆ ಕೀಳರಿಮೆ ಇರಬಾರದು.ಆತ್ಮವಿಶ್ವಾಸದ ಅವಿರತ ಶ್ರಮದಿಂದ ಸಾಧನೆ ಸಾಧ್ಯವಾಗುವುದು.'ಬಲಹೀನ ನಾನೆಂದು ಕಳವಳ ಪಡಬೇಡ ನೀಂ| ಸಲೆ ಮಹಿಮ ನಾನೆಂದು ಬೀಗಬೇಡ| ಇಲಿ ಮಾಡ್ವ ಕಾರ್ಯವನು ಹುಲಿ ಮಾಡಲಾದೀತೆ | ಬೆಲೆಯುಂಟು ಅದಕದರ-ಬೋಳುಬಸವ" ಎಂಬ ನಿಜಗುಣ ಕವಿಯ ಮಾತಿನಂತೆ ನಾನು ಶಕ್ತಹೀನವೆಂದು ಚಿಂತೆಯನ್ನು ಮಾಡಬಾರದು ಮತ್ತು ಬಹಳ ಬಲಶಾಲಿ ಎಂಬ ಅಹಂಕಾರವನ್ನು ಪಡಬಾರದು. ನಾವು ಮಾಡುವ ಪ್ರತಿ ಕೆಲಸದ ಬಗ್ಗೆ ಗೌರವ ಹಾಗೂ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿಟ್ಟಾಗಲೇ ಬದುಕಿನಲ್ಲಿ ಯಶಸ್ಸು ಪ್ರಾಪ್ತವಾಗುವುದು.
  'ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ, ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು. ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು. ಇದು ಚೆನ್ನಬಸವಣ್ಣ ಪ್ರಿಯ ಚಂದೇಶ್ವರ ಲಿಂಗದರಿವು'  ಎಂಬ ನುಲಿಯ ಚೆಂದಯ್ಯನ ವಚನ ಹೇಳುವಂತೆ ನಿಷ್ಠೆಯ ಕೆಲಸದಿಂದಲೇ ಪ್ರತಿಯೊಬ್ಬರ ಜೀವನ ಸಫಲವಾಗುವುದು."ಕಿರಿದು ಹಿರಿದೆನಬೇಡ ಕೆಲಸ ಯಾವುದೆ ಇರಲಿ| ಸೇತುವೆಗೆ ತಳಹದಿಯೊ ಹಿರಿದೊಂದು ಕಲ್ಲು| ಸೇವೆಯಲಿ  ಶಾಂತಿಯಿದೆ ಮಮಕಾರ ನಾಶವಿದೆ| ಅಳಿಲಾಗು ರಾಮಂಗೆ-ಮುದ್ದುರಾಮ" ಎಂಬ ಕೆ.ಶಿವಪ್ಪನವರ ನುಡಿಯಂತೆ ಕೆಲಸದಲ್ಲಿ ಹಿರಿದು ಕಿರಿದೆಂಬ ಭಾವನೆ ಇರಬಾರದು.ರಾಮ ಸೇತುವಿನ ನಿರ್ಮಾಣದಲ್ಲಿ ಅಳಿಲು ಸೇವೆ ಮಾಡಿದಂತೆ ನಮ್ಮ ಪಾಲಿನ ಕರ್ತವ್ಯವನ್ನು ಸೇವಾ ಮನೋಭಾದೊಂದಿಗೆ ನಿಷ್ಠೆಯಿಂದ ಮಾಡಿದಾಗ ನಮ್ಮೆಲ್ಲರ ಜೀವನವೂ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!