Thursday, December 2, 2021
spot_img
Homeಸ್ಥಳೀಯ ಸುದ್ದಿಆರೋಗ್ಯಧಾರ : ಮೂತ್ರಪಿಂಡ ಕಲ್ಲನ್ನು ತಡೆಯುವ ಬಗೆ

ಆರೋಗ್ಯಧಾರ : ಮೂತ್ರಪಿಂಡ ಕಲ್ಲನ್ನು ತಡೆಯುವ ಬಗೆ

ಭಯಂಕರ ನೋವು ಕೊಡುವ ರೋಗ ಮೂತ್ರಪಿಂಡ ಕಲ್ಲು ಎನ್ನಬಹುದು. ಇದನ್ನು ಆಯುರ್ವೇದದಲ್ಲಿ ಅಶ್ಮರಿ ರೋಗ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಬದಲಾದ ಆಹಾರ, ವಿಹಾರ, ಜೀವನ ಶೈಲಿಯಿಂದ ಮೂತ್ರಪಿಂಡ ಕಲ್ಲು ಕಂಡುಬರುವುದು ಜಾಸ್ತಿಯಾಗಿದೆ. ಇದರ ಬಗ್ಗೆ ಇವತ್ತು ತಿಳಿದುಕೊಳ್ಳೋಣ.
ಕಾರಣಗಳು – ವಾತವು ಮೂತ್ರ, ಪಿತ್ತ ಹಾಗೂ ಕಫವನ್ನು ಒಣಗಿಸುವುದರಿಂದ ಕಲ್ಲುಗಳಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅತ್ಯಧಿಕ ಉಪ್ಪಿನ ಸೇವನೆ, ಮಾಂಸಾಹಾರ, ಕೋಲ್ಡ್ ಡ್ರಿಂಕ್ಸ್, ಫಾಸ್ಟ್ ಫುಡ್, ಮದ್ಯಪಾನ, ಚಾ, ಕಾಫಿ, ಹಾಲಿನ ಉತ್ಪನ್ನಗಳ ಅತ್ಯಧಿಕ ಸೇವನೆ, ಸಿಹಿತಿಂಡಿ, ನೀರನ್ನು ಕಡಿಮೆ ಸೇವಿಸುವುದು, ಅತ್ಯಧಿಕ ಆಹಾರ ಸೇವಿಸುವುದು, ಮೂತ್ರ ವೇಗವನ್ನು ತಡೆಯುವುದು. ಪ್ರಿಸರ್ವೇಟಿವ್ಸ್ ಹಾಕಿದ ತಿಂಡಿಗಳು, ರಾತ್ರಿ ಜಾಗರಣೆ.
ಲಕ್ಷಣಗಳು – ಕಲ್ಲುಗಳು ಮೂತ್ರಕೋಶ, ಮೂತ್ರ ನಾಳ ಹಾಗೂ ಮೂತ್ರಪಿಂಡಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಲ್ಲುಗಳು ಯಾವ ಜಾಗದಲ್ಲಿರುತ್ತದೆ ಅದರ ಲಕ್ಷಣಗಳು ಕಂಡುಬರುತ್ತದೆ. ಕಲ್ಲುಗಳು ಮೂತ್ರಪಿಂಡದಲ್ಲಿ ಇದ್ದಾಗ ಪಕ್ಕೆಗಳಲ್ಲಿ ನೋವಾಗುತ್ತದೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಕಲ್ಲು ಮೂತ್ರ ನಾಳದಲ್ಲಿ ಇದ್ದರೆ ಅತ್ಯಧಿಕ ನೋವು ಆಗುತ್ತದೆ, ರೋಗಿಯು ಒದ್ದಾಡುತ್ತಾನೆ, ವಾಂತಿ ಆಗುತ್ತದೆ. ಪುನಃ ಪುನಃ ಮೂತ್ರ ವಿಸರ್ಜನೆ ಆಗುತ್ತದೆ, ಜ್ವರ, ಧೀರ್ಘ ಶ್ವಾಸ ಕಂಡುಬರುವುದು. ಆಗ ತಕ್ಷಣ ವೈದ್ಯರನ್ನು ಭೇಟಿ ನೀಡಿ.

ಮೂತ್ರಪಿಂಡ ಕಲ್ಲುಗಳು ತಡೆಯುವ ಉಪಾಯಗಳು
• ಮೇಲೆ ತಿಳಿಸಿದ ಕಾರಣಗಳನ್ನು ದೂರ ಮಾಡಿರಿ.
• ಅತ್ಯಧಿಕ ಉಪ್ಪಿನ ಸೇವನೆ, ಮದ್ಯಪಾನ, ಚಾ, ಕಾಫಿ, ಮಾಂಸಾಹಾರ, ಫಾಸ್ಟ್ ಫುಡ್, ಕೂಲ್ ಡ್ರಿಂಕ್ಸ್ ಆದಷ್ಟು ಕಡಿಮೆ ಸೇವಿಸಿ.
• ದಿನನಿತ್ಯ ಏಳರಿಂದ ಎಂಟು ಗ್ಲಾಸ್ ನೀರನ್ನು ಕುಡಿಯಿರಿ.
• ಬಾರ್ಲಿ ನೀರು, ತೆಂಗಿನ ನೀರು, ಮಜ್ಜಿಗೆ, ನಿಂಬೆ ನೀರು ಕುಡಿಯುವುದರಿಂದ ಮೂತ್ರಪಿಂಡ ಕಲ್ಲನ್ನು ತಡೆಯಬಹುದು.
• ಅಡುಗೆಗಳಲ್ಲಿ ಏಲಕ್ಕಿ, ಜೀರಿಗೆ, ಕೊತ್ತಂಬರಿ, ಮೆಂತೆಯನ್ನು ಬಳಸಿ.
• ಬೆಂಡೆಕಾಯಿ, ತುಳಸಿ, ಹುರುಳಿಕಾಳು, ನೆಲ್ಲಿಕಾಯಿ ಸೇವಿಸುವುದರಿಂದ ಪ್ರಯೋಜನವಾಗುತ್ತದೆ.
• ಕಿಡ್ನಿ ಸ್ಟೋನ್ ಇರುವವರು ಟೊಮೆಟೊ, ಬದನೆ ಕಾಯಿ, ಬಾಳೆಹಣ್ಣು, ಮೈದಾ, ಮಾಂಸಾಹಾರ ಹಾಲಿನ ಉತ್ಪನ್ನಗಳು, ಉಪ್ಪಿನಕಾಯಿ ಇವುಗಳನ್ನು ಕಡಿಮೆ ಸೇವಿಸಿ ಅಥವಾ ಸೇವಿಸಬೇಡಿ.
• ವ್ಯಾಯಾಮ, ಯೋಗಾಸನ, ನಡಿಗೆ ದಿನನಿತ್ಯ ಮಾಡಿರಿ.

ಮನೆ ಮದ್ದು
• 100 ನುಗ್ಗೆಯ ಬೇರನ್ನು ನಾಲ್ಕು ಲೋಟ ನೀರು ಹಾಕಿ ಒಂದು ಲೋಟ ಬರುವವರೆಗೆ ಕುದಿಸಿ ದಿನಕ್ಕೆ ಎರಡು ಬಾರಿ ಸೇವಿಸಿ.
• ಹುರುಳಿ ಕಾಳಿನಿಂದ ತಯಾರಿಸಿದ ಸೂಪನ್ನು ಸೇವಿಸಿರಿ. ನಾಲ್ಕು ಚಮಚ ಹುರುಳಿಯನ್ನು ಅರ್ಧ ಲೀಟರ್ ನೀರಿಗೆ ಹಾಕಿ ಕುದಿಸಿ ಅದನ್ನು ಲೋಟ ಬರುವವರೆಗೆ ಕುದಿಸಿ ದಿನಕ್ಕೆ ಒಂದು ಬಾರಿ ಸೇವಿಸಿ.
• ಬಾಳೆದಿಂಡನ್ನು ಜಜ್ಜಿ ಜ್ಯೂಸನ್ನು ಮಾಡಿ ದಿನಕ್ಕೆ ಎರಡು ಸಲ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದು ತುಂಬಾ ಸಹಾಯಕಾರಿ.

ಆಯುರ್ವೇದ ಚಿಕಿತ್ಸಾ ಸೂತ್ರ – ಘೃಥಪಾನ, ಕ್ಷಾರ ಪ್ರಯೋಗ, ಕಷಾಯ ಸೇವನೆ, ಉತ್ತರ ಬಸ್ತಿಯನ್ನು ನೀಡಲಾಗುವುದು.
ಆಯುರ್ವೇದ ಔಷಧಿಗಳು – ತ್ರಿವಿಕ್ರಮ ರಸ, ಪಾಷಾಣ ವಜ್ರ ರಸ, ವರುಣಾದಿ ಲೋಹ, ತ್ರಿನೇತ್ರ ರಸ, ಶ್ವೇತ ಪರ್ಪಟಿ, ಪಾಷಾಣಭೇದ ಚೂರ್ಣ, ಚಂದ್ರಪ್ರಭಾ ವಟಿ, ಗೋಕ್ಷುರಾದಿ ಗುಗ್ಗುಳು ಮುಂತಾದವುಗಳು.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!