Saturday, October 16, 2021
spot_img
Homeಅಂಕಣಕಗ್ಗದ ಸಂದೇಶ-ಆತ್ಮ ಬಲವೊಂದಿದ್ದರೆ ಸಾಕು...

ಕಗ್ಗದ ಸಂದೇಶ-ಆತ್ಮ ಬಲವೊಂದಿದ್ದರೆ ಸಾಕು…

ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು|
ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ||

ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗಲಸಗಳನು|
ತೊಡಗಾತ್ಮ ಬಲಿತಂದು-ಮಂಕುತಿಮ್ಮ||

ಸಣ್ಣದಾಗಿರುವ ಬೆಂಕಿಯ ಕಿಡಿಯ ಮೇಲೆ ಮರದ ತುಂಡು ಬಿದ್ದಾಗ ಆ ಬೆಂಕಿಯ ಕಿಡಿ ಆರಿಹೋಗುತ್ತದೆ.ಅದೇ ಬೆಂಕಿಯ ಕಿಡಿ ಉರಿದರೆ ನೂರು ಮರದ ಕೊರಡುಗಳನ್ನು ಸುಟ್ಟು ಬೂದಿ ಮಾಡುತ್ತದೆ.ನಮ್ಮ ಆತ್ಮಶಕ್ತಿ ಉಡುಗಿರುವಾಗ ಅಂದರೆ ಕುಂದಿದಾಗ ದೊಡ್ಡ ಕೆಲಸಗಳನ್ನು ಮಾಡಲು ಹೋಗಬಾರದು.ಆತ್ಮಸ್ಥೈರ್ಯ ಹಿಗ್ಗಿದಾಗ ಅಂದರೆ ಬಲಯುತವಾದಾಗ ಹಿರಿದಾದ ಕಾರ್ಯಗಳನ್ನು ಮಾಡಲು ತೊಡಗು ಎಂದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ ಯವರು ಹೇಳಿದ್ದಾರೆ.


‘ಕಲ್ಲು ಬಂಡೆಗಳನ್ನು ಎತ್ತುವ ಮಾಂಸ ಖಂಡಗಳ ಬಲ ಇರುವವನಿಗಿಂತ ಜವಾಬ್ದಾರಿಗಳನ್ನು ಸಮರ್ಥವಾಗಿ ಹೊರುವ ಆತ್ಮಬಲ ಇರುವವನು ನಿಜವಾದ ಶಕ್ತವಂತ’ ಎಂಬ ಮಾತಿನಂತೆ ಆತ್ಮಬಲಕ್ಕಿಂತ ಶ್ರೇಷ್ಠವಾದ ಬಲ ಬೇರೊಂದಿಲ್ಲ.ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರು ಸಹಾಯ ಮಾಡಲು ಬರುವುದಿಲ್ಲ. ನಂತರ ನಾವು ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ.ಬದುಕಿನಲ್ಲಿ ನಮಗೆ ನಿಜವಾದ ಶಕ್ತಿ ಎಂದರೆ ನಮ್ಮ ಆತ್ಮಬಲ.’ಸಾಧಿಸಿಯೇ ಸಾಧಿಸುತ್ತೇನೆ ಎಂಬ ದಿಟ್ಟ ಆತ್ಮಶಕ್ತಿಯ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು’ ಎಂದು ಡಾ.ಅಬ್ದುಲ್ ಕಲಾಂ ಹೇಳಿದ್ದಾರೆ.ಬದುಕಿನ ಉಸಿರು ಎಂದರೆ ಆತ್ಮವಿಶ್ವಾಸ. ನಮ್ಮ ಆತ್ಮಬಲದ ಮೇಲೆ ಅಚಲವಾದ ನಂಬಿಕೆಯಿಟ್ಟಾಗಲೇ ಕಾರ್ಯದ ಹಾದಿಯಲ್ಲಿ ಬೆಳಕು ಮೂಡುವುದು.ಆ ಮೂಲಕ ಗುರಿಯನ್ನು ಯಶಸ್ವಿಯಾಗಿ ಮುಟ್ಟಲು ಸಾಧ್ಯವಾಗುವುದು.
” ಇಲಿಯೆಂದರಿಲಿ ನೀನು,ಸಿಂಹವೆಂದರೆ ಸಿಂಹ| ಇಲಿಸಿಂಹ ಗುಣವೆಲ್ಲ ನಿನ್ನೆದೆಯಲಿದೆಯೊ|
ಏನಾಗುವೆಯೊ ನೀನು ಅದು ನಿನ್ನದೇ ಆಯ್ಕೆ| ಗುರಿಯ ನಿಟ್ಟಿಸಿ ನೋಡೊ-ಮುದ್ದುರಾಮ|” ಎಂಬ ಕೆ. ಶಿವಪ್ಪನವರ ನುಡಿ ನಮಗೆ ಬದುಕಿನ ಎದುರಾಗುವ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿ ಗೆಲ್ಲಲು ಬೇಕಾದ ಬಲ ನಮ್ಮದೆಯಲ್ಲಿಯೆ ಇದೆ.ಆತ್ಮಬಲವೆ ನಮಗೆ ಪರಮಾತ್ಮನ ಬಲ.ನಮ್ಮೆದೆಯಲ್ಲಿರುವ ಸಣ್ಣ ಕಿಡಿಯಂತಿರುವ ಆತ್ಮಶಕ್ತಿ ಪ್ರಜ್ವಲವಾಗಿ ಉರಿದಾಗಲೇ ಬಾಳು ಬೆಳಗುವುದು.ದಿವ್ಯವಾದ ಈ ಆತ್ಮಬಲ ಕುಗ್ಗದಂತೆ ಪೋಷಣೆ ಮಾಡಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!