Thursday, December 2, 2021
spot_img
HomeUncategorizedನವರಾತ್ರಿ ನೆಪದಲ್ಲಾದರೂ ಕಲಾವಿದರ ಸಂಕಷ್ಟ ದೂರಾಗಲಿ

ನವರಾತ್ರಿ ನೆಪದಲ್ಲಾದರೂ ಕಲಾವಿದರ ಸಂಕಷ್ಟ ದೂರಾಗಲಿ

ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಮಹಾಮಾರಿಯ ಕಾರಣಕ್ಕೆ ಎಲ್ಲ ರಂಗಗಳಲ್ಲೂ ತಲ್ಲಣ, ನೋವು ಕಂಡಿದ್ದೇವೆ. ಅದರಲ್ಲಿಯೂ ಸಾಂಸ್ಕೃತಿಕ ಕ್ಷೇತ್ರ, ಕಲೆ, ನಾಟಕ, ಸಂಗೀತ ರಂಗಗಳಲ್ಲಿ ಉಂಟಾಗಿರುವ ನಷ್ಟ ನಮ್ಮ ಊಹೆಗೂ ಮೀರಿದೆ. ಕಲೆಯನ್ನು ನಂಬಿಕೊಂಡು ಬಂದಿರುವ ಕಲಾವಿದರು ಎದುರಿಸಿದ ಸಂಕಷ್ಟ ಅವರನ್ನು ಪೂರ್ಣವಾಗಿ ಖಾಲಿ ಮಾಡಿವೆ. ಅದು ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಈ ವರ್ಷ ಸಾರ್ವಜನಿಕ ಚೌತಿ, ಅಷ್ಟಮಿ ಮೊದಲಾದ ಎಲ್ಲ ಹಬ್ಬಗಳೂ ಸರಕಾರದ ಆದೇಶದ ಅನುಸಾರವಾಗಿ ಸರಳವಾಗಿ ಮುಗಿದು ಹೋದವು. ಕೇವಲ ಧಾರ್ಮಿಕ ಆಚರಣೆಗೆ ಸೀಮಿತ ಆದವು. ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಸೇರುತ್ತಾರೆ ಎಂಬ ಕಾರಣಕ್ಕೆ ನಡೆಯಲೇ ಇಲ್ಲ. ಸರಕಾರ ಅನುಮತಿ ನೀಡಲೆ ಇಲ್ಲ. ರಸಮಂಜರಿ, ನಾಟಕ, ತುಳು ನಾಟಕ, ಯಕ್ಷಗಾನ, ಹರಿ ಕತೆ, ತಾಳ ಮದ್ದಳೆ, ಭಕ್ತಿ ಸಂಗೀತ, ನೃತ್ಯ ಪ್ರದರ್ಶನಗಳು ಎಲ್ಲದಕ್ಕೂ ಬ್ರೇಕ್ ಬಿದ್ದವು. ಪರಿಣಾಮವಾಗಿ ಕಲಾವಿದರು ಪಡಬಾರದ ಕಷ್ಟ ಪಡುವಂತಾಯಿತು.

ಈ ಅವಧಿಯಲ್ಲಿ ಒಂದಿಷ್ಟು ಆನ್ಲೈನ್ ವೇದಿಕೆಗಳಲ್ಲಿ ಕಲೆ, ಕಲಾವಿದರು ಕಾಣಿಸಿಕೊಂಡರು. ಆದರೆ, ಅದು ಸೀಮಿತವಾದ ಅವಕಾಶ. ಕೆಲವೇ ಕೆಲವು ಕಲಾವಿದರು ಈ ಅವಕಾಶ ಪಡೆದರು. ಇದು ಕಲಾವಿದರಿಗೆ ತುತ್ತು ಚೀಲ ತುಂಬಿಸಲಿಲ್ಲ. ಯಕ್ಷಗಾನ, ನಾಟಕ, ಸಂಗೀತ, ನೃತ್ಯ ಕಲಾವಿದರಿಗೆ ಈ ಆನ್ಲೈನ್ ವೇದಿಕೆ ಯಾವ ಅನುಕೂಲವನ್ನು ಮಾಡಿಕೊಡಲಿಲ್ಲ. ಸಾವಿರಾರು ಕಲಾವಿದರು ಇಂದಿಗೂ ನಿಜವಾದ ಸಂಕಷ್ಟದಲ್ಲಿದ್ದಾರೆ.

ಇದೀಗ ನವರಾತ್ರಿ ಆರಂಭವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನವರಾತ್ರಿ ಬಹಳ ದೊಡ್ಡ ಹಬ್ಬ. ಇಲ್ಲಿ ಅತೀ ಹೆಚ್ಚು ದೇವಿ ಮಂದಿರಗಳಿರುವ ಕಾರಣ ಒಂಬತ್ತು ದಿನವೂ ಜಾತ್ರೆ, ಉತ್ಸವ, ಪೂಜೆ, ಸಂತರ್ಪಣೆ ನಡೆಯುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ನಡೆಯತ್ತಿದ್ದವು. ದೇವಿ ಮಂದಿರಗಳು ಇಡೀ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದವು. ಆದರೆ, ಈ ವರ್ಷ ನವರಾತ್ರಿ ಹಬ್ಬಕ್ಕೆ ಅನುಮತಿ ನೀಡುವ ಸರಕಾರಿ ಆದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಜನ ಸೇರುತ್ತಾರೆ ಅನ್ನುವುದು ಸರಕಾರದ ಅಭಿಪ್ರಾಯ.

ಆದ್ರೆ ಈಗ ಶಾಲೆ, ಕಾಲೇಜುಗಳು ಆರಂಭವಾಗಿವೆ. ಅಂಗಡಿ, ವ್ಯಾಪಾರ, ಸಂತೆ, ಜಾತ್ರೆ, ಮಾರುಕಟ್ಟೆ ಜನ ಜಂಗುಳಿಗೆ ಸಾಕ್ಷಿ ಆಗ್ತಾ ಇವೆ. ರಾಜ್ಯದಾದ್ಯಂತ ಎಲ್ಲ ಸಿನೆಮಾ ಮಂದಿರಗಳು ಫುಲ್ ಹೌಸ್ ಶೋ ಕೊಡಲು ಅನುಮತಿ ನೀಡಲಾಗಿದೆ. ಎರಡು ಕ್ಷೇತ್ರಗಳ ಉಪಚುನಾವಣೆಯ ರಂಗು ಇನ್ನೇನು ಏರಲಿದ್ದು ಜನ ಜಾತ್ರೆ ಕಡಿಮೆ ಆಗೋದಿಲ್ಲ. ಬಸ್ಸುಗಳಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೆಚ್ಚಿನ ಬಸ್ಸುಗಳಲ್ಲಿ ಉಸಿರು ಕಟ್ಟುವ ಹಾಗೆ ಪ್ರಯಾಣಿಕರು ತುಂಬಿರುತ್ತಾರೆ !

ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಸೇರುತ್ತಾರೆ ಎಂಬ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿವೆ. ಯಾವುದೇ ದೇವಿ ಮಂದಿರದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ತೆಗೆದು ನೋಡಿದರೆ ಧಾರ್ಮಿಕ ಆಚರಣೆ, ಸಂತರ್ಪಣೆ, ಭಜನೆ ಕಾಣುತ್ತದೆಯೇ ಹೊರತು ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲವೇ ಇಲ್ಲ. ನವರಾತ್ರಿಯ ಉತ್ಸವಕ್ಕೆ ಪೂರಕವಾಗಿ ಕನ್ನಡ ಮತ್ತು ತುಳು ನಾಟಕಗಳನ್ನು ಸಿದ್ಧಪಡಿಸಿಕೊಂಡ ನಾಟಕ ಕಲಾವಿದರು, ರಸಮಂಜರಿ ಗಾಯಕರು, ಹಿಮ್ಮೇಳದ ಕಲಾವಿದರು, ಯಕ್ಷಗಾನದ ಕಲಾವಿದರು, ತಾಳ ಮದ್ದಳೆ ಕಲಾವಿದರು, ನೃತ್ಯ ಸಂಗೀತ ತಂಡಗಳು ಸರಕಾರಿ ಆದೇಶಕ್ಕೆ ಶಾಪ ಹಾಕುತ್ತ, ತಮ್ಮ ಗ್ರಹಚಾರವನ್ನು ತಾವೇ ಬಯ್ಯುತ್ತಾ ಇರುವುದನ್ನು ಕಂಡಾಗ ನಿರಾಸೆ ಮೂಡುವುದು. ಯಕ್ಷಗಾನದ ಮೇಳಗಳು ಇಷ್ಟು ಹೊತ್ತಿಗೆ ತಿರುಗಾಟವನ್ನು ಆರಂಭ ಮಾಡಬೇಕಾಗಿದ್ದು ಇನ್ನೂ ಆರಂಭ ಪಡೆದಿಲ್ಲ. ಹಾಗಾಗಿ ಸಾವಿರಾರು ಯಕ್ಷಗಾನ ಕಲಾವಿದರು ಸದ್ಯಕ್ಕಂತೂ ನಿರುದ್ಯೋಗಿಗಳು. ದೇವಾಲಯದ ಹರಕೆ ಮೇಳಗಳ ಯಕ್ಷಗಾನದ ಕಲಾವಿದರಿಗೆ ಫುಡ್ ಕಿಟ್ ಇತ್ಯಾದಿ ಸಣ್ಣ ಪುಟ್ಟ ಸಹಾಯ ಹೊರತುಪಡಿಸಿ ಬೇರೆ ಏನೂ ಸಿಕ್ಕಿಲ್ಲ ಎನ್ನುವುದು ದುರಂತ. ಕಳೆದ ವರ್ಷಕ್ಕೆ ಲಾಕ್ ಡೌನ್ ಪರಿಣಾಮವಾಗಿ ಅರ್ಧ ವರ್ಷಕ್ಕೆ ತಿರುಗಾಟ ನಿಂತು ಹೋಗಿತ್ತು.

ಕಲೆಯನ್ನು ನಂಬಿ ಬದುಕು ಕಟ್ಟಿಕೊಂಡ ಸಾವಿರಾರು ಸಹೃದಯ ಕಲಾವಿದರು ಆದಷ್ಟು ಬೇಗ ಈ ಸಂಕಷ್ಟಗಳು ಕಳೆದು ಒಳ್ಳೆಯ ದಿನಗಳು ಬರಲಿ ಎಂದು ಚಾತಕ ಪಕ್ಷಿಯಂತೆ ಕಾದು ಕೂತಿದ್ದಾರೆ. ಅವರ ಮೊರೆ ಸರಕಾರದ, ಕಲಾ ಪೋಷಕರ ಕಿವಿಗೆ
ತಲುಪಬಹುದಾ ? ಕಾದು ನೋಡೋಣ.

ರಾಜೇಂದ್ರ ಭಟ್‌ ಕೆ.
ಜೆಸಿಐ ರಾಷ್ಟ್ರೀಯ ತರಬೇತುದಾರರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!