Saturday, October 16, 2021
spot_img
Homeಸ್ಥಳೀಯ ಸುದ್ದಿವಿಶೇಷ ವಿವಾಹ ಅಧಿನಿಯಮ 1954 – ವಿವಾಹ ನೋಂದಣಿ- ಕಾನೂನು ಮಾಹಿತಿ

ವಿಶೇಷ ವಿವಾಹ ಅಧಿನಿಯಮ 1954 – ವಿವಾಹ ನೋಂದಣಿ- ಕಾನೂನು ಮಾಹಿತಿ

ನಮ್ಮ ಸಮಾಜದಲ್ಲಿನ ವಿವಿಧ ಧರ್ಮಗಳಿಗೆ ಸೇರಿದ ಯುವಕ- ಯುವತಿ ವಿವಾಹಕ್ಕೆ (ಅಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವಗೈರೆ) ಬೇರೆ ಬೇರೆ ರೀತಿಯ ಕಾನೂನುಗಳಿವೆ. ಅಂತರ್‌ ಧರ್ಮೀಯ ವಿವಾಹಗಳನ್ನು ಇಂತಹ ಕಾನೂನುಗಳು ಮಾನ್ಯ ಮಾಡುವುದಿಲ್ಲ. ಈ ಕಾರಣದಿಂದ ಅಂತರ್‍ಧರ್ಮಿಯ ಅಂದರೆ ಬೇರೆ ಬೇರೆ ಧರ್ಮಗಳಿಗೆ ಸೇರಿದ ಯುವಕ- ಯುವತಿ ಮದುವೆಗೆ ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ನಮ್ಮ ದೇಶದಾದ್ಯಂತ ವಿಶೇಷವಾದ ಕಾನೂನು ಅಂದರೆ “ವಿಶೇಷ ವಿವಾಹ ಅಧಿನಿಯಮ, 1954″ 01-01-1955 ರಿಂದ ಜ್ಯಾರಿಗೆ ಬಂದಿರುತ್ತದೆ.

ಈ ಮೇಲ್ಕಾಣಿಸಿದ ವಿಶೇಷ ವಿವಾಹ ಅಧಿನಿಯಮದ ಪ್ರಕಾರ ಯಾವುದೇ ಬೇರೆ ಬೇರೆ ಧರ್ಮಗಳಿಗೆ ಸೇರಿದ ಯುವಕ- ಯುವತಿ ತಮ್ಮ ಧರ್ಮಕ್ಕೆ ಅನುಸಾರ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅಥವಾ ಸಂಪ್ರದಾಯಗಳನ್ನು ಬದಿಗಿಟ್ಟು ಈ ಕೆಳಗೆ ತಿಳಿಸಿದ ಶರ್ತಗಳಿಗೆ ಅನುಸಾರವಾಗಿ, ಸರಳವಾಗಿ ಮತ್ತು ಕಾನೂನು ಸಮ್ಮತ ವಿವಾಹ ಮಾಡಿಕೊಳ್ಳಬಹುದಾಗಿದೆ. ಆ ಶರ್ತಗಳು ಯಾವುದೆಂದರೆ (1) ಮದುವೆಯ ಸಮಯದಲ್ಲಿ ವರನಿಗೆ ಜೀವಂತ ಪತ್ನಿ ಮತ್ತು ವಧುವಿಗೆ ಜೀವಂತ ಪತಿ ಇರಬಾರದು. (2) ಮದುವೆಗೆ ಸಮ್ಮತಿ ನೀಡುವ ವರ ಮತ್ತು ವಧು ಇವರಿಬ್ಬರು ಮಾನಸಿಕ ಸ್ವಾಸ್ಥ ಹೊಂದಿರಬೇಕು. ಮಕ್ಕಳನ್ನು ಹೊಂದಲು ಅರ್ಹರಿರಬೇಕು. (3) ನಿರಂತರವಾದ ಬುದ್ಧಿ ಭ್ರಮಣೆಯಿಂದ ಬಳಲುತ್ತಿರಬಾರದು. (4) ಮದುವೆಯ ಸಮಯದಲ್ಲಿ ವರ 21 ವರ್ಷ ಮತ್ತು ವಧು 18 ವರ್ಷ ವಯಸ್ಸನ್ನು ಪೂರೈಸಿದವರಾಗಿರಬೇಕು. (5) ವಧು-ವರರು ನಿಷೇಧಿತ ಸಂಬಂಧಿಗಳಾಗಿರಬಾರದು.

ಮೇಲ್ಕಾಣಿಸಿದ ವಿಶೇಷ ವಿವಾಹ ಅಧಿನಿಯಮದ ಪ್ರಕಾರ ನೋಂದಾಯಿತ ಮದುವೆ ಆಗಬಯಸುವ ವಧು ಮತ್ತು ವರ ತಮ್ಮ ಉದ್ದೇಶಿತ ಮದುವೆಯ ಬಗ್ಗೆ ಸೂಚನೆಯನ್ನು ಸಂಬಂಧಿಸಿದ ವಿವಾಹಾಧಿಕಾರಿಗಳಿಗೆ ನಿರ್ದಿಷ್ಟ ನಮೂನೆಯಲ್ಲಿ ಸಲ್ಲಿಸಬೇಕು. ವಧು ಅಥವಾ ವರ ಇಬ್ಬರಲ್ಲಿ ಯಾರಾದರೊಬ್ಬರು ಸದರಿ ನೋಟೀಸಿನ ದಿನಾಂಕದ ನಿಕಟಪೂರ್ವದಲ್ಲಿ ಕನಿಷ್ಠ 30 ದಿನಗಳಿಗಿಂತ ಕಡಿಮೆ ಇಲ್ಲದ ಅವಧಿಯಲ್ಲಿ ಯಾವ ಸ್ಥಳದಲ್ಲಿ ವಾಸವಾಗಿದ್ದಾರೋ ಆ ಸ್ಥಳಕ್ಕೆ ಸಂಬಂಧಿಸಿದ ವಿವಾಹಾಧಿಕಾರಿಗೆ ಸದರಿ ನೋಟೀಸನ್ನು ಕೊಡಬಹುದು. ಉದ್ದೇಶಿತ ಮದುವೆಯ ವಧು ವರರು ಮೇಲಿನಂತೆ ನೋಟೀಸನ್ನು ಕೊಟ್ಟ ನಂತರ, ಅದರ ಒಂದು ಪ್ರತಿಯನ್ನು ವಿವಾಹಾಧಿಕಾರಿಯ ಕಚೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರದರ್ಶಿಸಬೇಕಾಗುತ್ತದೆ. ನೋಟೀಸನ್ನು ಪ್ರಚುರಗೊಳಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ವಧು- ವರರು ಪರಸ್ಪರ ಮದುವೆಯಾಗುವ ವಿಷಯದಲ್ಲಿ ಯಾರದ್ದಾದರೂ ತಕರಾರು ಇದ್ದಲ್ಲಿ ಅವರುಗಳು ವಿವಾಹಾಧಿಕಾರಿಯ ಮುಂದೆ ತಮ್ಮ ತಕರಾರನ್ನು ಸಲ್ಲಿಸಲು ಅವಕಾಶವಿರುತ್ತದೆ. ಉದ್ದೇಶಿತ ಮದುವೆಯನ್ನು ವಿರೋಧಿಸಿ ಯಾರಾದರೂ ತಕರಾರನ್ನು ಸಲ್ಲಿಸಿದಲ್ಲಿ ವಿವಾಹಾಧಿಕಾರಿಯು ಆ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಉದ್ದೇಶಿತ ವಿವಾಹವನ್ನು ನೆರವೇರಿಸುವ ಸಂಬಂಧ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ವಿಚಾರಣೆಯ ಸಂಬಂಧವಾಗಿ ಸಿವಿಲ್ ನ್ಯಾಯಾಲಯಕ್ಕೆ ಇರುವ ಅಧಿಕಾರಗಳು ವಿವಾಹಾಧಿಕಾರಿಗೆ ಇರುತ್ತದೆ. ನೋಟೀಸ್ ಪ್ರಕಟಿಸಿದ 30 ದಿನಗಳ ಅವಧಿಯಲ್ಲಿ ಯಾವುದೇ ತಕರಾರು ಬಾರದಿದ್ದಲ್ಲಿ ಅಥವಾ ತಕರಾರು ಆಧಾರರಹಿತ ಎಂಬುದಾಗಿ ವಿವಾಹಾಧಿಕಾರಿ ನಿರ್ಣಯಿಸಿದಲ್ಲಿ ಅರ್ಜಿದಾರ ವಧು- ವರರು ಇಚ್ಛಿಸಿದ, ವಿಧಿ ವಿಧಾನಗಳ ಪ್ರಕಾರ ಅವರುಗಳ ಮದುವೆಯನ್ನು ವಿವಾಹಾಧಿಕಾರಿಯ ಹಾಗೂ ಕನಿಷ್ಠ 3 ಜನ ಸಾಕ್ಷಿಗಳ ಸಮಕ್ಷಮದಲ್ಲಿ ವಿವಾಹಾಧಿಕಾರಿ ಕಚೇರಿಯಲ್ಲಾಗಲೀ ಅಥವಾ ವಧು- ವರರು ಇಚ್ಛಿಸಿದಲ್ಲಿ, ಆ ಕಚೇರಿಗೆ ಸಮೀಪದ ಅವರ ಆಯ್ಕೆಯ ಬೇರಾವುದೇ ಸ್ಥಳದಲ್ಲಾಗಲೀ ಜರುಗಿಸಲಾಗುತ್ತದೆ. ವಿವಾಹವನ್ನು ಜರುಗಿಸಿದ ನಂತರ ವಿವಾಹಾಧಿಕಾರಿಯು ನೂತನ ದಂಪತಿಗಳಿಗೆ ‘ವಿವಾಹ ಧೃಡೀಕರಣ ಪತ್ರ’ ವನ್ನು ನೀಡಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್,
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!