Tuesday, December 7, 2021
spot_img
HomeUncategorizedಕಾರ್ಕಳದಲ್ಲಿ ಯಕ್ಷ ರಂಗಾಯಣ - ಸಾಂಸ್ಕೃತಿಕ ಅವಕಾಶಗಳ ಹೆಬ್ಬಾಗಿಲು

ಕಾರ್ಕಳದಲ್ಲಿ ಯಕ್ಷ ರಂಗಾಯಣ – ಸಾಂಸ್ಕೃತಿಕ ಅವಕಾಶಗಳ ಹೆಬ್ಬಾಗಿಲು

ರಾಜೇಂದ್ರ ಭಟ್ ಕೆ.

ಕಾರ್ಕಳದ ಶಾಸಕರಾಗಿದ್ದು ಇದೀಗ ಕರ್ನಾಟಕದ ಸಂಸ್ಕೃತಿ ಸಚಿವರಾಗಿರುವ ವಿ. ಸುನೀಲ್‌ ಕುಮಾರ್ ಅವರು ಕಾರ್ಕಳದಲ್ಲಿ ಯಕ್ಷರಂಗಾಯಣವನ್ನು ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಹೆಜ್ಜೆಯು ಖಂಡಿತವಾಗಿಯೂ ಅತ್ಯಂತ ಶಾಘನೀಯ ನಡೆಯಾಗಿದೆ.

ಯಕ್ಷ ರಂಗಾಯಣ ಯಾಕೆ ಬೇಕು ?

ಕರ್ನಾಟಕದಲ್ಲಿ ರಂಗ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು 1980ರಲ್ಲಿ ಮೈಸೂರು ರಂಗಾಯಣ ಸಂಸ್ಥೆಯನ್ನು ಮೇರು ಕಲಾವಿದರಾದ ಬಿ.ವಿ. ಕಾರಂತರು ಆರಂಭ ಮಾಡಿದರು. ಅವರ ಕಠಿಣ ದುಡಿಮೆ ಮತ್ತು ಕರ್ತತ್ವ ಶಕ್ತಿಯ ಪ್ರತೀಕವಾಗಿ ಮೈಸೂರು ರಂಗಾಯಣ ಸಂಸ್ಥೆಯು ಭಾರೀ ಹೆಸರನ್ನು ಗಳಿಸಿತು. ಒಂದು ವರ್ಷದ ರಂಗ ತರಬೇತಿ ಡಿಪ್ಲೊಮ ಕೋರ್ಸ್, ರಂಗ ಸಂಚಾರ, ತಿರುಗಾಟ, ವಿನೂತನ ಪ್ರಯೋಗಗಳು, ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆ, ಚಿಕ್ಕ ಮಕ್ಕಳಿಗೆ ರಜಾ ದಿನದ ಚಿನ್ನಾರಿ ನಾಟಕೋತ್ಸವ, ನೂರಾರು ರಂಗ ತರಬೇತಿ ಶಿಬಿರ, ಸಂಗೀತ ಮಹೋತ್ಸವಗಳು, ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ನಾಟಕ ಉತ್ಸವಗಳು ನಡೆದು ಮೈಸೂರು ರಂಗಾಯಣ ಸಂಸ್ಥೆಯು ವಿಶ್ವ ಮಟ್ಟದ ಛಾಪು ಮೂಡಿಸಿತು. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಹೊರ ರಾಜ್ಯದಲ್ಲೂ ರಂಗಾಯಣ ಸಂಸ್ಥೆಯ ನಾಟಕಗಳು ನಡೆದವು. ಅಲ್ಲಿ ತರಬೇತಿ ಪಡೆದ ನೂರಾರು ನಾಟಕ ಕಲಾವಿದರು ಇಂದು ಸಿನೆಮಾ, ಧಾರಾವಾಹಿ, ನಾಟಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ.

ಕುವೆಂಪು ಅವರ ಮಹಾಕೃತಿಗಳಾದ ಶ್ರೀ ರಾಮಾಯಣ ದರ್ಶನಂ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿ, ಭೈರಪ್ಪ ಅವರ ಪರ್ವ ಮೊದಲಾದ ಅನರ್ಘ್ಯ ಕೃತಿಗಳು ನೂರಾರು ಜನ ಕಲಾವಿದರ ದುಡಿಮೆಯಲ್ಲಿ ರಂಗಾಯಣದ ವೇದಿಕೆಯನ್ನು ಏರಿದ್ದು ಸ್ಮರಣೀಯ. ಈ ರಂಗಪ್ರಯೋಗಗಳು ಜನರ ಮನಸ್ಸಿನಲ್ಲಿ ಈಗಲೂ ಚಿರಸ್ಥಾಯಿ.

ಭೈರಪ್ಪ ಅವರ ಮಹಾ ಕಾದಂಬರಿಯಾದ ಪರ್ವವನ್ನು ನೂರಾರು ಮಹಾ ಕಲಾವಿದರು ಸೇರಿ ನಾಟಕದ ವೇದಿಕೆಗೆ ಅಳವಡಿಸಿದ್ದು ಅದು ಸುಮಾರು ಎಂಟು ಗಂಟೆಗಳ
ಮೈ ಮನ ಮರೆಸುವ ನಾಟಕವಾಗಿ ಮೂಡಿ ಬಂದದ್ದನ್ನು ನಾನು ಮೈಸೂರಿನಲ್ಲಿ ರಂಗಾಯಣದ ವೇದಿಕೆಯಲ್ಲಿ ಪ್ರತ್ಯಕ್ಷವಾಗಿ ನೋಡಿ ಮೂಕವಿಸ್ಮಿತ ಆಗಿದ್ದೇನೆ. ಮೈಸೂರು ರಂಗಾಯಣ ಸಂಸ್ಥೆಯು ನಾಡಿನ ಸಾಂಸ್ಕೃತಿಕ ಪರಿಷೆಗೆ ಭಾರೀ ಕೊಡುಗೆಗಳನ್ನು ಈಗಾಗಲೆ ಕಟ್ಟಿ ಕೊಟ್ಟಿದೆ.

ಮುಂದಿನ ವರ್ಷಗಳಲ್ಲಿ ಶಿವಮೊಗ್ಗ, ಧಾರವಾಡ, ಕಲಬುರ್ಗಿಗಳಲ್ಲಿ ರಂಗಾಯಣ ಶಾಖೆಗಳು ತೆರೆದವು. ಅಲ್ಲಿ ಕೂಡ ನೂರಾರು ರಂಗ ಕಲಾವಿದರು ತರಬೇತು ಪಡೆದು ಹೊರಬಂದಿದ್ದಾರೆ.

ಇದೀಗ ಕಾರ್ಕಳದಲ್ಲಿ ಯಕ್ಷ ರಂಗಾಯಣ
ಈ ಸುದ್ದಿಯೇ ನನಗೆ ಭಾರೀ ರೋಮಾಂಚನವನ್ನು ತಂದುಕೊಡುತ್ತಿದೆ. ಉಡುಪಿ ಜಿಲ್ಲೆ ಹಾಗೂ ವಿಶೇಷವಾಗಿ ಕಾರ್ಕಳ ತಾಲೂಕು ಪರಿಗಣಿಸಿದಾಗ ವೃತ್ತಿಪರವಾದ ನಾಟಕ ತಂಡಗಳ ಕೊರತೆ ಎದ್ದು ಕಾಣುತ್ತದೆ. ಹವ್ಯಾಸಿ ವಲಯದಲ್ಲಿ ನೂರಾರು ಸಂಘಟನೆಗಳು ತಮ್ಮ ತಮ್ಮ ಮಿತಿಯಲ್ಲಿ ರಂಗ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿವೆ. ಅವುಗಳ ಪ್ರಯತ್ನಗಳು ಶ್ಲಾಘನೀಯವೇ ಆಗಿದೆ.

ಉಡುಪಿಯಲ್ಲಿ ಇರುವ ರಂಗಭೂಮಿ (ರಿ.) ಸಂಸ್ಥೆಯು ಪ್ರತೀ ವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ. ಬೈಂದೂರಿನ ಲಾವಣ್ಯ ಸಂಸ್ಥೆಯು ಸಾಕಷ್ಟು ಪ್ರಯೋಗಾತ್ಮಕ ನಾಟಕ ಪ್ರದರ್ಶಿಸುತ್ತಿದೆ. ಕಾರ್ಕಳದಲ್ಲಿ ಮುದ್ರಾಡಿಯ ನಾಟ್ಕದೂರು ಒಂದು ಮಹಾ ನಾಟಕದ ಸಂಸ್ಥೆಯಾಗಿ ಬೆಳೆದಿದೆ. ಅವರು ನಡೆಸುವ ರಾಷ್ಟ್ರ ಮಟ್ಟದ ನಾಟಕ ಉತ್ಸವಗಳು ಭಾರೀ ಮನ್ನಣೆ ಪಡೆದಿವೆ. ಕಾರ್ಕಳದಲ್ಲಿ ನೂರಾರು ಜನ ನಾಟಕದ ಅಭಿಮಾನಿಗಳಿದ್ದಾರೆ. ನೂರಾರು ಸಂಖ್ಯೆಯ ನಾಟಕದ ಕಲಾವಿದರಿದ್ದಾರೆ.

ಕಾರ್ಕಳದಲ್ಲಿ ನಾಟಕದ ಚಟುವಟಿಕೆಗಳಿಗೆ ಮೀಸಲು ಆದ ರಂಗ ಸಂಸ್ಕೃತಿ (ರಿ.) ಎಂಬ ಸಂಸ್ಥೆಯು ಈ ವರ್ಷ ದಶಮಾನೋತ್ಸವದ ಸಂಭ್ರಮದಲ್ಲಿದೆ. ಪ್ರತೀ ವರ್ಷ ನಡೆಸುವ ನಾಟಕದ ಹಬ್ಬಗಳಿಗೆ ಉತ್ತಮ ಸ್ಪಂದನೆಯಿದೆ. ಕಾರ್ಕಳದ ಮತ್ತೊಂದು ನಾಟಕ ಸಂಸ್ಥೆಯಾದ ಕಲಾ ರಂಗ ತುಳು ಮತ್ತು ಕನ್ನಡದ ಪ್ರಯೋಗಾತ್ಮಕ ನಾಟಕಗಳ ಮೂಲಕ ಮುಂಚೂಣಿಯಲ್ಲಿದೆ. ಹಾಗೆಯೇ ಗ್ರಾಮ ಮಟ್ಟದಲ್ಲಿ ಕೂಡ ತುಳು, ಕನ್ನಡ ನಾಟಕ ಚಟುವಟಿಕೆಗಳು ನಡೆಯುತ್ತ ಬಂದಿವೆ.

ಅಂತಹ ಕಾರ್ಕಳದಲ್ಲಿ ಯಕ್ಷ ರಂಗಾಯಣ ಶಾಖೆಯು ಆರಂಭ ಆಗುವುದು ಶ್ಲಾಘನೀಯ. ಅದರಲ್ಲಿ ಕೂಡ ಕರಾವಳಿಯ ಬ್ರಾಂಡ್ ಕಲೆಯಾದ ಯಕ್ಷಗಾನಕ್ಕೆ ಸ್ಥಾನವನ್ನು ಕೊಟ್ಟಿರುವುದು ನಿಜಕ್ಕೂ ಗ್ರೇಟ್. ಕಾರ್ಕಳದ ಕೋಟಿ-ಚೆನ್ನಯ ಥೀಮ್ ಪಾರ್ಕ್‌ ಹತ್ತಿರ ಇರುವ ಮೂರು ಎಕರೆ ಜಾಗದಲ್ಲಿ ಈ ರಂಗಾಯಣ ಸಂಸ್ಥೆಯು ಸದ್ಯದಲ್ಲಿಯೇ ತಲೆ ಎತ್ತಲಿದ್ದು ಪ್ರತೀ ಒಬ್ಬ ನಾಟಕ, ಯಕ್ಷಗಾನ ಅಭಿಮಾನಿ ಮತ್ತು ಕಲಾವಿದರು ಚಾತಕ ಪಕ್ಷಿಯಂತೆ ಕಾಯುವ ಸನ್ನಿವೇಶವು ನಿರ್ಮಾಣವಾಗಿದೆ. ಕಾರ್ಕಳದ ರಾಜ್ಯ, ರಾಷ್ಟ್ರ ಮಟ್ಟದ ನಾಟಕ ಉತ್ಸವಗಳಿಗೆ, ಯಕ್ಷಗಾನದ ಉತ್ಸವಗಳಿಗೆ ಮುಂದಿನ ದಿನಗಳಲ್ಲಿ ಸಾಕ್ಷಿ ಆಗಲಿದೆ. ಅದಕ್ಕೆ ಕಾರಣರಾದ ಸಚಿವರಾದ ವಿ. ಸುನೀಲ್ ಕುಮಾರ್ ಅವರನ್ನು ಅಭಿನಂದಿಸೋಣ.

ರಾಜೇಂದ್ರ ಭಟ್ ಕೆ.
ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!