Thursday, December 2, 2021
spot_img
Homeಅಂಕಣಕಗ್ಗದ ಸಂದೇಶ - ನಾನು ಎಂಬುದು ಅಜ್ಞಾನವು…

ಕಗ್ಗದ ಸಂದೇಶ – ನಾನು ಎಂಬುದು ಅಜ್ಞಾನವು…

“ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್|
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು|
ನೂನದಿಂದೆಲ್ಲವೆನುವಬ್ದಿಯೊಳಗದನಿರಿಸೆ|
ಮೌನವದು ಮಣ್ಕರಗಿ -ಮಂಕುತಿಮ್ಮ |”.

‌‌‌‌ನೀರು ತುಂಬಿದ ಒಂದು ಚಿಕ್ಕ ಮಣ್ಣಿನ ಕೊಡ ತನಗಿಂತ ಅದಷ್ಟೋ ಪಟ್ಟು ಹಿರಿದಾದ ಕಡಲನ್ನು ಮರೆತು ನಾನು ನಾನು ಎಂಬ ಭಾವದಿಂದ ನಾನೇ ಎಲ್ಲಾ ನನ್ನ ಬಿಟ್ಟರೆ ಬೇರೆ ಯಾವುದು ಇಲ್ಲವೆಂದು ಗರ್ವದಿಂದ ಬೀಗುತ್ತದೆ. ಅದೇ ಕೊಡವನ್ನು ತೆಗೆದುಕೊಂಡು ಹೋಗಿ ಸಮದ್ರದ ನೀರಿನಲ್ಲಿ ಮುಳಗಿಸಿದಾಗ ಕೊಡದೊಳಗಿರುವ ನೀರೆಲ್ಲಾ ಕಡಲಲ್ಲಿ ಸೇರಿ ಒಂದಾಗುತ್ತದೆ. ಆ ಕೊಡದ ಮಣ್ಣೂ ಮೌನವಾಗಿ ಕರಗಿ ನಾನು ಎಂಬ ಭಾವದೊಂದಿಗೆ ಕೊಡವು ಇಲ್ಲದಂತಾಗುತ್ತದೆ ಎನ್ನುವುದನ್ನು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ಇಲ್ಲಿ ಮಣ್ಣಿನ ಕೊಡವೆಂಬುವುದು ನಮ್ಮ ದೇಹ. ಕೊಡದಲ್ಲಿರುವ ನೀರೆಂದರೆ ನಮಗಿರುವ ಜ್ಞಾನ. ಸಾಗರದಷ್ಟು ಆಳ ಅಗಲವಿರುವ ಜ್ಞಾನದಲ್ಲಿ ನಮಗೆ ಗೊತ್ತಿರುವುದು ಒಂದು ಬಿಂದುವಿನಷ್ಟು ಮಾತ್ರ. ಆದರೆ ನಾವು ಆ ಮಣ್ಣಿನ ಕೊಡದ ಹಾಗೆ ನಮಗೆ ತಿಳಿದಿರುವ ಆ ಅಲ್ಪ ಜ್ಞಾನವನ್ನು ಮಹಾಜ್ಞಾನವೆಂದು ಭಾವಿಸಿ ಹೆಮ್ಮೆಯಿಂದ ಬೀಗುತ್ತೇವೆ. ಅಹಂಕಾರ ಪಡುತ್ತಾ ಅನ್ಯರನ್ನು ವಿಮರ್ಶಿಸುತ್ತಾ, ವ್ಯಂಗ್ಯವಾಡುತ್ತ ವಿಕೃತಿ ಮೆರೆಯುತ್ತೇವೆ. ಇದನ್ನೆ ಪ್ರಾಜ್ಞರು ‘ಅಲ್ಪ ವಿದ್ಯಾ ಮಹಾಗರ್ವಿ’ ಎಂದಿರುವುದು. ” ಅರಿತವನು ನಾನೆಂದು ನೀ ತೋರದಿರು ದರ್ಪ| ಅರಿವೊಂದು ಶರಧಿ ನಿನ್ನರಿವು ಅಲ್ಪ| ಅರಿತುದಕೆ ಲಕ್ಷಣವು ನಿಜ ವಿನಯ ಸೌಜನ್ಯ| ಅರಿದೊಡಿದ ನೀಂ ಮಾನ್ಯ – ಬೋಳುಬಸವ” ಎಂಬ ನಿಜಗುಣ ಕವಿಯ ನುಡಿಯಂತೆ ತನಗೆ ತಿಳಿದಿರುವುದು ಸಿಂಧುವಿನ ಬಿಂದು ಎಂದರಿತು ಸೌಜನ್ಯದಿಂದ ನಡೆದುಕೊಂಡಾಗಲೆ ನಮ್ಮ ವ್ಯಕ್ತಿತ್ವಕ್ಕೆ ಮಾನ್ಯತೆ ಅಂದರೆ ಗೌರವ ಬರುವುದು. ‘ಫಲ ತುಂಬಿದ ಮರ, ತೆನೆ ಬಿಟ್ಟ ಪೈರು, ಗೊನೆ ಬಿಟ್ಟ ಬಾಳೆ ಬಾಗುವಂತೆ ನಿಜವಾದ ಜ್ಞಾನಿಗಳಾದವರು ಹೆಮ್ಮೆಯಿಂದ ಬೀಗದೆ ನಮ್ರತೆಯಿಂದ ಬಾಗುತ್ತಾರೆ.
” ನಾನು ಇದ್ದಾಗ ದೇವನಿಲ್ಲ ಈಗ ದೇವನಿಹ ನಾನಿಲ್ಲ. ಕತ್ತಲೆ ಕರಗಿಯೆ ಹೋಹಿತಲ್ಲ ಬೆಳಕ ಕಂಡೆನಲ್ಲಾ” ಎಂಬ ಕಬೀರವಾಣಿ ನಮಗೆ ಮಾರ್ಗದರ್ಶಿಯಾಗಬೇಕು. ‘ನಾನು ಎನ್ನುವ ಅಹಂಕಾರದ ಕತ್ತಲು ಕರಗಿದಾಗಲೇ ಜ್ಞಾನದ ಬೆಳಕು ಕಾಣುವುದು. ‘ಎಲ್ಲಾ ರೋಗಕ್ಕೂ ಮದ್ದುಂಟು ಅಹಂ ಎನ್ನುವ ಜಾಡ್ಯಕ್ಕೆ ಇಲ್ಲವಯ್ಯ’ ಎನ್ನುವಂತೆ ಅಹಂಕಾರ ಬೆಳೆಯುವ ಗಿಡಕ್ಕೆ ಹತ್ತುವ ರೋಗ ಇದರಿಂದ ಬೆಳೆಯಬೇಕಾದ ಗಿಡ ಕ್ರಮೇಣ ನಶಿಸಿ ನಾಶವಾಗುತ್ತದೆ. ನಾನು ಎನ್ನುವ ಅಹಂಕಾರದ ಅಮಲೇರಿದರೆ ವ್ಯಕ್ತಿತ್ವ ಸಂಪೂರ್ಣವಾಗಿ ನಾಶವಾಗುತ್ತದೆ. ನಾನು ಎನ್ನುವುದು ಅಜ್ಞಾನ ನಾವು ಎನ್ನುವುದು ನಿಜವಾದ ಜ್ಞಾನ. ನಾನು ಎನ್ನುವುದು ರೋಗ ನಾವು ಎನ್ನುವುದು ಮಧುರ ರಾಗ. ಈ ಕಗ್ಗದ ಆಶಯವನ್ನರಿತು ನಾನು ಎನ್ನುವುದನ್ನು ಮರೆತು ನಾವಾಗಿ ಎಲ್ಲರೊಂದಿಗೆ ಬೆರೆತು ಬಾಳಿದಾಗಲೆ ಜೀವನ ಸಾರ್ಥಕವಾಗುವುದಲ್ಲವೆ ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!