ಕಗ್ಗದ ಸಂದೇಶ – ಒಳಗಣ್ಣು ತೆರೆದು ನೋಡಿ…


“ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ?|
ಗುರುತಿಸುವಂ ಸೋಂಕಿಂದೆ ಬಿಸಿಲುತನಿವುಗಳ |
ನರನುಮಂತೆಯೇ ಮನಸಿನನುಭವದಿ ಕಾಣುವನು |
ಪರಸತ್ವ ಮಹಿಮೆಯನು – ಮಂಕುತಿಮ್ಮ |”.

   ಕುರುಡನಿಗೆ ಸೂರ್ಯ ಮತ್ತು ಚಂದ್ರರ ಇರುವಿಕೆಯನ್ನು ತನ್ನ ಕಣ್ಣಿನಿಂದ ಕಾಣಲು ಸಾಧ್ಯವಾಗದು. ಆದರೆ ಅವನು ಬಿಸಿಲಿನ ಸ್ಪರ್ಶದಿಂದ ಸೂರ್ಯನನ್ನು ಹಾಗೂ ಬೆಳುದಿಂಗಳ ತಂಪಿನ ಸ್ಪರ್ಶದಿಂದ ಚಂದ್ರನ ಇರುವಿಕೆಯನ್ನು ಗುರುತಿಸುವನು. ಇದೇ ರೀತಿಯಲ್ಲಿ ಮನುಷ್ಯನು ಪರಮಾತ್ಮನ ಇರುವಿಕೆಯನ್ನು ತನ್ನ ಭಾವನೆಗಳ ಮೂಲಕ ಅರಿಯುತ್ತಾನೆ ಎಂದು ಮಾನ್ಯ ಡಿ.ವಿ‌.ಜಿ. ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
     'ಕಣ್ಣಿನೊಳಗೆ ನೋಡೋ ಹರಿಯ ಒಳಗಣ್ಣಿನೋಳಗೆ ನೋಡೋ' ಎಂಬ ಕೀರ್ತನೆಯ ಸಾಲಿನಿಂದ ನಮಗೆ ಹೊರಗಿನ ಕಣ್ಣಿನಂತೆ ನೋಡುವ ಇನ್ನೊಂದು ಕಣ್ಣು ನಮ್ಮೊಳಗೆ ಇದೆ ಎಂಬುದು ತಿಳಿಯುತ್ತದೆ. ಅದುವೇ ಅನುಭವದ ಅಥವಾ ಭಾವನಾತ್ಮಕ ಕಣ್ಣು. ಹೊರಗಣ್ಣಿನ ದೃಷ್ಟಿಯ ವ್ಯಾಪ್ತಿ ಸೀಮಿತ. ಆದರೆ ಒಳಗಣ್ಣಿನ ದೃಷ್ಟಿಯ ವ್ಯಾಪ್ತಿ ವಿಸ್ತಾರವಾದುದು. ಹೊರಗಣ್ಣಿನಿಗೆ ಗೋಚರವಾಗದ ಅನೇಕ ವಿಷಯ ವಿಚಾರಗಳು ಒಳಗಣ್ಣಿಗೆ ತಿಳಿಯುತ್ತವೆ. ಕುರುಡನಿಗೆ ಹೊರಗಣ್ಣು ಕಾಣದಿರಬಹುದು ಆದರೆ ಒಳಗಣ್ಣು ಸದಾ ಜಾಗೃತವಾಗಿರುತ್ತದೆ. ಇತರ ಇಂದ್ರಿಯಗಳ ಮೂಲಕ ಎಲ್ಲವನ್ನು ಅವನು ತಿಳಿದುಕೊಳ್ಳುತ್ತಾನೆ.
   ಪರಸತ್ವದ ಮಹಿಮೆಯನು ಅಂದರೆ ದೇವರ ಅಸ್ತಿತ್ವವನ್ನು ಅರಿಯುವಲ್ಲಿ ನಮಗೆ ಕುರುಡನು ಮಾದರಿಯಾಗುತ್ತಾನೆ. ಭಗವಂತನನ್ನು ಹುಡುಕುವುದಲ್ಲ ಅವನನ್ನು ಕಂಡುಕೊಳ್ಳಬೇಕು ಯಾಕೆಂದರೆ ಹುಡುಕಲು ಅವನೇನು ಕಳ್ಳರ ಹಾಗೆ ಅಡಗಿಕೊಂಡಿಲ್ಲ ಎಲ್ಲಾ ಕಡೆಯಲ್ಲಿಯೂ ಅವನಿದ್ದಾನೆ. 'ನಂಬಿ ಕರೆದರೆ ಓ ಎನ್ನನೆ ಶಿವನು' ನಂಬಿಕೆಯಿಂದ ಪ್ರಾರ್ಥಿಸಿದರೆ ಪೂಜಿಸಿದರೆ ಅವನನ್ನು ಖಂಡಿತಾ ಕಾಣಲು ಸಾಧ್ಯ.ದೇವರು ಕಟ್ಟೆಯೊಳಗಿಲ್ಲ, ಕಲ್ಲಿನ ಒಳಗಿಲ್ಲ, ಮಣ್ಣಿನ ಒಳಗಿಲ್ಲ ನಮ್ಮ ಭಾವನೆಯೊಳಗಿದ್ದಾನೆ ಎಂದು ಪ್ರಾಜ್ಞರು ಹೇಳಿದ್ದಾರೆ. ಕಣ್ಣುಗಳಿದ್ದ ಮಾತ್ರಕ್ಕೆ ನಮಗೆ ಎಲ್ಲವೂ ಕಾಣದು. ಕಣ್ಣುಗಳಿಗೆ ದೃಷ್ಟಿ ಇರುವುದರೊಂದಿಗೆ ನಮ್ಮ ಮನಸ್ಸು ಜಾಗೃತವಾಗಿರಬೇಕು. ಇಲ್ಲದಿದ್ದರೆ ನಾವು ಕಣ್ಣಿದ್ದು ಕುರುಡರಾಗುತ್ತೇವೆ. ಈ ಕಗ್ಗದ ಭಾವವನ್ನರಿತು ಪ್ರಜ್ಞಾಪೂರ್ವಕವಾಗಿ ನೋಡಿದಾಗಲೇ ಸುಜ್ಞಾನ ಪ್ರಾಪ್ತಿಯಾಗುವುದು ಆ ಮೂಲಕ ಜೀವನ ಸಾರ್ಥಕವಾಗುವುದು ಅಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ,
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.





























































































































































































































error: Content is protected !!
Scroll to Top