ಖಾಸಗಿ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣ ಕ್ರಮ- ಕಾನೂನು ಮಾಹಿತಿ

ಖಾಸಗಿ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣ ಕ್ರಮ- ಕಾನೂನು ಮಾಹಿತಿ

ಹಿಂದೂ ಧರ್ಮಿಯರಿಗೆ ಸೇರಿದ ವಿವಿಧ ಧಾರ್ಮಿಕ ಸಂಸ್ಥೆಗಳ ಅಥವಾ ದೇವಸ್ಥಾನಗಳ ಹಿತಾಸಕ್ತಿಯನ್ನು ರಕ್ಷಿಸುವ ಮತ್ತು ಅದಕ್ಕೆ ಸಂಬಂಧಪಟ್ಟ ಆಡಳಿತ ಅಥವಾ ಅರ್ಚಕರು ಅಂತಹ ಧಾರ್ಮಿಕ ಸಂಸ್ಥೆಗಳ, ದೇವಸ್ಥಾನಗಳ ಯಾವುದೇ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸದಂತೆ ತಡೆಗಟ್ಟುವ ಮತ್ತು ಅನುವಂಶಿಕ ಆಡಳಿತದಾರರ ಅಥವಾ ಅರ್ಚಕರ ಹಕ್ಕಿಗೆ ಯಾವುದೇ ರೀತಿಯ ಅಡ್ಡಿ ಆತಂಕ ಉಂಟಾಗುವ ಸಂದರ್ಭದಲ್ಲಿ ಅವರಿಗೆ ಕಾನೂನಿನ ನಿಯಮಾನುಸಾರವಾಗಿ ರಕ್ಷಣೆ ನೀಡುವ ನಿಟ್ಟಿನಲ್ಲಿ ನಮ್ಮ ದೇಶದಾದ್ಯಂತ “ಹಿಂದೂ ಧಾರ್ಮಿಕ ಸಂಸ್ಥೆ ದತ್ತಿ ಕಾಯ್ದೆ” ಎಂಬ ಕಾನೂನು ಜಾರಿಯಲ್ಲಿರುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸರಕಾರವು ಬಹಳ ವರ್ಷಗಳ ಹಿಂದೆಯೇ ದೇಶದಾದ್ಯಂತ ಹಲವಾರು ದೇವಸ್ಥಾನಗಳನ್ನು ಮತ್ತು ಧಾರ್ಮಿಕ ಕೇಂದ್ರಗಳನ್ನು ಸರಕಾರದ ಮುಜರಾಯಿ ಇಲಾಖೆಯ ಅಧೀನಕ್ಕೆ ಪಡೆದುಕೊಂಡಿದ್ದು ಸದ್ರಿ ಇಲಾಖೆಯ ಅಧೀನದಲ್ಲಿರುವ ವಿವಿಧ ದೇವಸ್ಥಾನಗಳ ಆಡಳಿತ ಸಮಿತಿಯನ್ನು ರಚಿಸಿ ಅಂತಹ ಧಾರ್ಮಿಕ ಸಂಸ್ಥೆಗಳ ಆಡಳಿತದ ಹೊಣೆಗಾರಿಕೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿರುತ್ತದೆ.

ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸರಕಾರಕ್ಕೆ ನೀಡಿರುವ ನಿರ್ದೇಶನವನ್ನು ಅನುಷ್ಠಾನಕ್ಕೆ ತರುವ ಕ್ರಮವಾಗಿ ಸರಕಾರವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಕಾಯ್ದೆಯನ್ನು ದಿನಾಂಕ 05-03-2012 ರಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿದ್ದು ಈ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಕಾಯ್ದೆ 2011 ರ ಪ್ರಕಾರ ಮುಜರಾಯಿ ಇಲಾಖೆಯ ಪ್ರಕಾರ ಈಗಾಗಲೇ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ದೇವಸ್ಥಾನಗಳು ಸಹ ಕಡ್ಡಾಯವಾಗಿ ಸರಕಾರದ ಮುಜರಾಯಿ ಇಲಾಖೆಯ ಸಂಬಂಧಪಟ್ಟ ಸಹಾಯಕ ಆಯುಕ್ತರಲ್ಲಿ ನೊಂದಾಯಿಸಿಕೊಳ್ಳಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ನೋಂದಾವಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸರಕಾರ ಈಗಾಗಲೇ ಆದೇಶವನ್ನು ಸಹ ಹೊರಡಿಸಿರುತ್ತದೆ. ಖಾಸಗಿ ದೇವಸ್ಥಾನಗಳ ಆಡಳಿತ ವ್ಯವಹಾರದಲ್ಲಿ ನಡೆಯಬಹುದಾದ ದುರುಪಯೋಗವನ್ನು ತಪ್ಪಿಸುವುದು ಈ ಕಾನೂನಿನ ತಿದ್ದುಪಡಿಯ ಮೂಲ ಉದ್ದೇಶವಾಗಿರುತ್ತದೆ. ಈ ಪ್ರಕಾರ ಎಲ್ಲ ಖಾಸಗಿ ದೇವಸ್ಥಾನಕ್ಕೆ ಸಂಬಂಧಪಟ್ಟ ಟ್ರಸ್ಟಿ, ಮ್ಯಾನೇಜರ್ ಅಥವಾ ಆಡಳಿತ ನಡೆಸುತ್ತಿರುವ ಯಾವುದೇ ವ್ಯಕ್ತಿ ದೇವಸ್ಥಾನಕ್ಕೆ ಸಂಬಂಧ ಪಟ್ಟ ಇತಿಹಾಸ, ಮೂಲಸ್ಥಳ ಹಿನ್ನೆಲೆ, ಹಿಂದಿನ ಆಡಳಿತ ಮತ್ತು ಪ್ರಸ್ತುತ ಆಡಳಿತದಾರರ ಹೆಸರು ಮತ್ತು ವಿವರ, ದೇವಸ್ಥಾನಕ್ಕೆ ಸೇರಿದ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಿರುವ ಸ್ಥಳಗಳ ವಿವರ, ದೇವಸ್ಥಾನಕ್ಕೆ ಸಂಬಂಧಪಟ್ಟ ಚಿನ್ನ, ಬೆಳ್ಳಿ ಮತ್ತಿತರ ಬೆಲೆ ಬಾಳುವ ಆಭರಣ, ಪಾತ್ರೆ ಮತ್ತಿತರ ಸೊತ್ತುಗಳ ವಿವರ ಮತ್ತು ಅಂದಾಜು ಮೌಲ್ಯ ಮತ್ತು ಅವೆಲ್ಲವುಗಳ ರಕ್ಷಣೆಗಾಗಿ ದೇವಸ್ಥಾನದ ಆಡಳಿತ ಸಮಿತಿಯು ಮಾಡಿರುವ ರಕ್ಷಣಾ ವ್ಯವಸ್ಥೆಯ ವಿವರ, ದೇವಸ್ಥಾನದ ಮತ್ತು ಕಟ್ಟಡದ ವಾರ್ಷಿಕ ವರಮಾನ, ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಸ್ಥಳ ಅಥವಾ ಕಟ್ಟಡವನ್ನು ಯಾರಾದರೂ ಆಕ್ರಮಿಸಿಕೊಂಡಿದಲ್ಲಿ ಈ ಕುರಿತ ವಿವರ ಇತ್ಯಾದಿಗಳನ್ನು ನಿಗದಿತ ನಮೂನೆಯಲ್ಲಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಈ ರೀತಿಯಾಗಿ ಪಡೆದ ನೊಂದಣಿ ಅರ್ಜಿಯನ್ನು ಸಹಾಯಕ ಆಯುಕ್ತರು ತನಿಖೆ ಮಾಡಿ ಸಂಬಂಧಪಟ್ಟ ದೇವಸ್ಥಾನವನ್ನು ಕಲಂ 53 ರಂತೆ ನೊಂದಾಯಿಸಿಕೊಂಡು ನೋಂದಣಿ ಪ್ರಮಾಣ ಪತ್ರವನ್ನು ಅರ್ಜಿದಾರ ದೇವಸ್ಥಾನಕ್ಕೆ ನೀಡಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿಯವರಿಗೆ ರವಾನಿಸಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681






























































































































































































































error: Content is protected !!
Scroll to Top