Sunday, October 24, 2021
spot_img
Homeಸ್ಥಳೀಯ ಸುದ್ದಿಬಸ್‌ ವಿರಳ - ಕಾರ್ಕಳದಲ್ಲಿ ವಿದ್ಯಾರ್ಥಿಗಳ ಪರದಾಟ

ಬಸ್‌ ವಿರಳ – ಕಾರ್ಕಳದಲ್ಲಿ ವಿದ್ಯಾರ್ಥಿಗಳ ಪರದಾಟ

ಸೀಮಿತ ಬಸ್- ನೇತಾಡಿಕೊಂಡೇ ಪ್ರಯಾಣ

ಗ್ರಾಮೀಣ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಲಿ

ಕಾರ್ಕಳ : ಶಾಲಾ ಕಾಲೇಜುಗಳು ಪ್ರಾರಂಭಗೊಂಡಿದ್ದು, ಇದೀಗ ಪ್ರಯಾಣಕ್ಕೆ ಬಸ್‌ವಿರಳವಾಗಿರುವ ಪರಿಣಾಮ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಕಾರ್ಕಳದಲ್ಲಿದೆ. ಶಾಲಾ ಸಮಯದಲ್ಲಿ ಸೂಕ್ತ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಕಷ್ಟಕರವಾಗಿದೆ. ಆದ್ದರಿಂದ ಸಮಯಕ್ಕೆ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಆಶಯವಾಗಿದೆ

ಕಾಲೇಜು ವಿದ್ಯಾರ್ಥಿಗಳು ಬಸ್ ಮೆಟ್ಟಿಲಿನಲ್ಲೇ ನಿಂತುಕೊಂಡು ನೇತಾಡಿಕೊಂಡೇ ಪ್ರಯಾಣಿಸುವ ದೃಶ್ಯ ಕಾರ್ಕಳ ಪೇಟೆಯಲ್ಲಿ ನಿತ್ಯ ಬೆಳಗ್ಗಿನ ವೇಳೆ ಕಂಡುಬರುತ್ತಿದೆ. ಸಮಯಕ್ಕೆ ಸರಿಯಾಗಿ ಕಾಲೇಜು ಸೇರಬೇಕೆಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆತುರಾತುರವಾಗಿ ಕಾರ್ಕಳದ ಬಸ್‍ಸ್ಟಾಂಡ್‍ನಲ್ಲಿ ಬಸ್ ಏರುತ್ತಾರೆ. ಎಂಪಿಎಂ ಸೇರಿದಂತೆ ಇಲ್ಲಿನ ಸ್ಥಳೀಯ ಕಾಲೇಜುಗಳಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸರಕಾರಿ ಬಸ್ ಸೌಲಭ್ಯ್ಯವಿಲ್ಲದ ಕಾರಣ ಖಾಸಗಿ ಬಸ್ ಮೂಲಕವೇ ಪ್ರಯಾಣಿಸಬೇಕಿದೆ. ಖಾಸಗಿ ಬಸ್ ಕೂಡ ಬೆರಳೆಣಿಕೆಯಲ್ಲಿರುವುದರಿಂದ ಇದ್ದ ಬಸ್‍ನಲ್ಲಿ ನೂಕುನುಗ್ಗಲು. ನೇತಾಡಿಕೊಂಡೇ ಪ್ರಯಾಣಿಸುವ ಗೋಳು.

ಅಪಾಯಕಾರಿ
ಸುರಕ್ಷತೆಯ ಹಿನ್ನೆಲೆಯಲ್ಲಿ ಬಸ್‍ನ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವುದು ಅಪಾಯಕಾರಿ ಮತ್ತು ಕಾನೂನು ಬಾಹಿರ. ಆದರೆ, ನಿಯಮಗಳನ್ನೆಲ್ಲ ಗಾಳಿಗೆ ತೂರಿ ಕಾರ್ಕಳದಲ್ಲಿ ಕಾಲೇಜು ವಿದ್ಯಾರ್ಥಿಗಳು ನೇತಾಡಿಕೊಂಡೇ ಪ್ರಯಾಣಿಸುತ್ತಾರೆ. ಆಯಾ ತಪ್ಪಿ ಬಿದ್ದಲ್ಲಿ ಅನಾಹುತ ಖಚಿತ. ಚಾಲಕ ಓವರ್ ಟೇಕ್ ಮಾಡುವ ವೇಳೆ ಸೇರಿದಂತೆ ಇನ್ನಿತರ ಸಂದರ್ಭದಲ್ಲೂ ಅವಘಢ ಸಂಭವಿಸುವ ಸಾಧ್ಯತೆಯಿದೆ. 4 ವರ್ಷಗಳ ಹಿಂದೆ ಎಂಪಿಎಂ ಕಾಲೇಜು ಬಳಿ ಖಾಸಗಿ ಬಸ್ ಪಲ್ಟಿಯಾಗಿದ್ದನ್ನು ಜನರು ಇಂದೂ ನೆನಪಿಸುತ್ತಾರೆ.

ಅನಿವಾರ್ಯತೆ
ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬುವುದು ಆರ್‍ಟಿಓ ನಿಯಮದಂತೆ ತಪ್ಪು. ನಿಯಮ ಉಲ್ಲಂಸಿದಲ್ಲಿ ಆರ್‍ಟಿಒ ಅಧಿಕಾರಿ, ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬಹುದಾಗಿದೆ. ಆದರೆ, ಬಸ್ ಸೌಕರ್ಯವಿಲ್ಲದಿರುವುದರಿಂದ ಪೊಲೀಸರು ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.

ಬಸ್ ನಿಲ್ದಾಣದ ಅವ್ಯವಸ್ಥೆ
ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುವ ವೇಳೆ ಪ್ರಯಾಣಿಕರು ಕೂರಲು ಸೌಕರ್ಯವಿಲ್ಲ. ತಾಲೂಕು ಕೇಂದ್ರದ ಬಸ್ ನಿಲ್ದಾಣ ಇಷ್ಟೊಂದು ಶೋಚನೀಯ ಪರಿಸ್ಥಿತಿಯಲ್ಲಿರುವುದು ವಿಷಾದನೀಯ. ಬಸ್ ಸ್ಟಾಂಡ್‍ನಿಂದ ಹೊರಟ ಬಸ್‍ಗಳು ಪೇಟೆಯಲ್ಲಿ ನಿಧಾನವಾಗಿ ಚಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ರೂಢಿಯೂ ಕಾರ್ಕಳದಲ್ಲಿದ್ದು ಸಂಚಾರಕ್ಕೂ ತೊಡಕಾಗಿ ಪರಿಣಮಿಸುತ್ತಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದೆ.

ಕೆಎಸ್‍ಆರ್‍ಟಿಸಿ ಬಸ್ ಒದಗಿಸಲಿ
ಖಾಸಗಿ ಬಸ್‍ನವರು ಬಸ್ ಒದಗಿಸುವುದು ಕಷ್ಟಕರವಾಗಿದ್ದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್ ಒದಗಿಸುವ ಕಾರ್ಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕಿದೆ.

ಕಾರ್ಕಳದಿಂದ ಉಡುಪಿಗೆ ಪ್ರತಿ 10 ನಿಮಿಷಕ್ಕೊಂದು ಕೆಎಸ್‌ಆರ್‌ಟಿಸಿ ಬಸ್‌ ಓಡುತ್ತಿದೆ. ಖಾಸಗಿ ಬಸ್‌ನವರೊಂದಿಗೆ ಕೆಎಸ್‌ಆರ್‌ಟಿಸಿ ಪೈಪೋಟಿ ನಡೆಸುವ ಬದಲು ರೆಂಜಾಳ, ಇರ್ವತ್ತೂರು, ತೆಳ್ಳಾರು, ಹೆರ್ಮುಂಡೆ ಗ್ರಾಮೀಣ ಭಾಗಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಿದ್ದಲ್ಲಿ ವಿದ್ಯಾರ್ಥಿಗಳಿಗೆ, ಬಸ್‌ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಕೆಎಸ್‌ಆರ್‌ಟಿಸಿ ಈ ಕುರಿತು ಇಚ್ಛಾಶಕ್ತಿ ತೋರುವುದು ಅಗತ್ಯವಾಗಿದೆ.

ಬೆಳಗ್ಗಿನ ಜಾವ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಬಸ್‍ನಲ್ಲಿ ನೇತಾಡಿಕೊಂಡೇ ಹೋಗುತ್ತಾರೆ. ಬಸ್ ಮಾಲಕ- ಚಾಲಕರು, ಮುಖ್ಯವಾಗಿ ಪೋಷಕರು ಈ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ.

ಸಿಯಾ ಸಂತೋಷ್‌ ನಾಯಕ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!