Saturday, October 16, 2021
spot_img
Homeಅಂಕಣಕಗ್ಗದ ಸಂದೇಶ- ಹೆಸರೆಂಬ ಮೋಹವು...

ಕಗ್ಗದ ಸಂದೇಶ- ಹೆಸರೆಂಬ ಮೋಹವು…

“ಹೆಸರು ಹೆಸರೆಂಬುದೇಂ? ಕುಸುರು ಬೀಸುವ ಗಾಳಿ|
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ||
ಶಿಶುವಾಗು ನೀಂ ಮನದಿ‌ ಹಸುವಾಗು ಸಸಿಯಾಗು|
ಕಸಬೊರಕೆಯಾಗಿಳೆಗೆ-ಮಂಕುತಿಮ್ಮ”

ಹೆಸರು ಹೆಸರೆಂದು ಖ್ಯಾತಿಯ ಬೆನ್ನು ಬೀಳುವುದು ಕೊಳೆಯಿಂದ ಕೂಡಿದ ಗಾಳಿ ಬೀಸಿದಂತೆ.ಈ ಜಗತ್ತಿನಲ್ಲಿ ತನಗೊಂದು ಮನ್ನಣೆಯ ಸ್ಥಾನಬೇಕೆಂಬ ಬಯಕೆ ನಿನಗೇಕೆ?.ಮುಗ್ಧ ಮನಸ್ಸಿನ ಎಳೆಯ ಮಗುವಿನಂತಾಗು.ಸಾಧು ಸ್ವಭಾವದ ಗೋವಿನಂತಾಗು.ಮುಂದೆ ಬೆಳೆದು ಮರವಾಗಿ ಹೂ ಹಣ್ಣು ಮತ್ತು ನೆರಳು ನೀಡುವ ಚಿಕ್ಕ ಗಿಡವಾಗು.ಮೌನವಾಗಿ ಕಸವನ್ನು ಗುಡಿಸಿ ಶುದ್ಧ ಮಾಡುವ ಪೊರಕೆಯಾಗು ನೀನು ಈ ಭೂಮಿಗೆ ಎಂದು  ಮಾನ್ಯ ಡಿವಿಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಮನುಷ್ಯನಿಗಿರುವ ಹಲವು ದೌರ್ಬಲ್ಯಗಳಲ್ಲಿ ಮನ್ನಣೆಯ ದಾಹವು ಒಂದು.ಸದಾ ಪ್ರಚಾರದಲ್ಲಿರಬೇಕೆಂಬ ಉತ್ಕಟವಾದ ಬಯಕೆಯನ್ನು ಈಡೇರಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಾನೆ. ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ.ಹೆಸರುವಾಸಿಯಾಗಬೇಕೆಂಬ ಹಸಿವು ಹೆಚ್ಚಾದಾಗ  ವರ್ತನೆಗಳು ವಿಪರೀತವೆನಿಸಿ ನೋಡುವವರು ಅಸಹ್ಯಪಟ್ಟುಕೊಳ್ಳುವಂತಾಗುತ್ತದೆ 'ಅದನ್ನೇ ಡಿವಿಜಿ 'ಕಸುರು ಬೀಸುವ ಗಾಳಿ' ಎಂದಿದ್ದಾರೆ. ಒಳ್ಳೆಯ ಕೆಲಸ ಮಾಡಿದವರು ಒಳ್ಳೆಯ ಹೆಸರನ್ನು ಬಯಸುವುದು ತಪ್ಪಲ್ಲ ಆದರೆ ಹೆಸರಿಗಾಗಿಯೇ ಕೆಲಸ ಮಾಡುವುದು ತರವಲ್ಲ.ಪ್ರಚಾರದ ಹುಚ್ಚು ಹಿಡಿದು ಬಿಟ್ಟರೆ ಅದಕ್ಕಿಂತ ಅಪಾಯಕಾರಿ ಬೇರೊಂದಿಲ್ಲ.ಖ್ಯಾತಿಯೆನ್ನುವುದು ನೆರಳಿನಂತೆ ಅದಾಗಿಯೇ ನಮ್ಮನ್ನು ಹಿಂಬಾಲಿಸಬೇಕೆ ಹೊರತು ನಾವೇ ಅದರೆ ಬೆನ್ನು ಬೀಳಬಾರದು.
ಪ್ರಚಾರದ ಹುಚ್ಚನ್ನು ಬಿಟ್ಟು ಬದುಕಿನ ಸಾರವನ್ನು ಅರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.ನಮ್ಮ ಮನಸ್ಸು ಎಲ್ಲರಿಂದಲೂ ಆಕರ್ಷಿತವಾಗುವ ಮುಗ್ಧ ಮಗುವಿನಂತಾಗಬೇಕು.ಎಲ್ಲರ ಗೌರವಕ್ಕೂ ಪಾತ್ರವಾಗಿರುವ ಸಾಧು ಸ್ವಭಾವದ ಮತ್ತು ಬದುಕಿಗೆ ಉಪಯೋಗಿಯಾಗಿರುವ ಹಸುವಿನಂತಾಗಬೇಕು.ಮುಂದೆ ಬೆಳೆದು ಮರವಾಗಿ  ಹೂ ಹಣ್ಣು ಮತ್ತು ನೆರಳನ್ನು ನೀಡುವ ಸಣ್ಣ ಗಿಡದಂತಾಗಬೇಕು.ಮನೆಮನದ ಕಸವನ್ನು ಗುಡಿಸಿ ಸದ್ದುಗದ್ದಲವಿಲ್ಲದೆ ಶುದ್ಧ ಮಾಡುವ ಕಸಪೊರಕೆಯಾಗಬೇಕು ಈ ಭೂಮಿಗೆ ಎಂದಿದ್ದಾರೆ. ಹೆಸರು ಹೆಸರೆಂದು ಬಸವಳಿಯದೆ ಸೇವಾ ಮನೋಭಾವದಿಂದ ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು ಎನ್ನುವ  ಡಿವಿಜಿಯವರ ಮಾತನ್ನು ಅರಿತು ನಡೆದರೆ ಎಲ್ಲರ ಜೀವನವೂ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು , ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!