Wednesday, January 19, 2022
spot_img
Homeಅಂಕಣಭಾರತರತ್ನ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ

ಭಾರತರತ್ನ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ

ಕೇವಲ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯ ಇದೆಯೇ ?

ಮೈಸೂರು ಸೋಪು (ಇದೀಗ ಮೈಸೂರು ಸ್ಯಾಂಡಲ್ ಸೋಪ್), ಮೈಸೂರು ಲಾಂಪ್ಸ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕೃಷಿ ವಿವಿ, ಅಪೆಕ್ಸ್ ಚೇಂಬರ್ ಆಫ್ ಕಾಮರ್ಸ್, ಬೆಂಗಳೂರು ಪ್ರೆಸ್ ಕ್ಲಬ್, ಸೆಂಚುರಿ ಕ್ಲಬ್ ಹೀಗೆ ಸಾಗುತ್ತದೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳ ಪಟ್ಟಿ.

ಅದರ ಜೊತೆಗೆ ಹತ್ತಾರು ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳು, ಮೈಸೂರು ಆಹಾರ ಸಂಶೋಧನಾ ಸಂಸ್ಥೆ, ಕೃಷ್ಣ ರಾಜ ಸಾಗರ ಅಣೆಕಟ್ಟು, ಮಂಡ್ಯದ ಪ್ರಸಿದ್ದವಾದ ಸಕ್ಕರೆ ಕಾರ್ಖಾನೆಗಳು ಹೀಗೆ ನೂರಾರು ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಅವರು ಕಟ್ಟಿದ ಯಾವ ಸಂಸ್ಥೆ ಕೂಡ ಇದುವರೆಗೆ ಬಾಗಿಲು ಮುಚ್ಚಿದ ಉದಾಹರಣೆ ಇಲ್ಲ. ಅದು ಸರ್ ಎಂ.ವಿ. ಅವರ ತಾಕತ್ತು. ಅವರು ಕರ್ನಾಟಕಕ್ಕೆ ತೊಡಿಸಿದ ಪ್ರಭಾವಳಿ. ಅವರು ಮುಟ್ಟಿದ್ದೆಲ್ಲ ಚಿನ್ನವಾಗಿದೆ.

ಸರ್ ಎಂ.ವಿ. ಮೈಸೂರು ರಾಜ್ಯದ ದಿವಾನರಾಗಿ ಇದ್ದದ್ದು ಕೇವಲ 7 ವರ್ಷ. ಅದಕ್ಕಿಂತ ಮೊದಲು ಅವರು ಮುಂಬೈ, ನಾಸಿಕ್, ಸೂರತ್, ಹೈದರಾಬಾದ್ ನಗರಗಳಲ್ಲಿ ಮಾಡಿದ ಅಭಿವೃದ್ದಿಯ ಕಾರ್ಯಗಳು ಭಾರೀ ಅಚ್ಚರಿ ಮೂಡಿಸುತ್ತವೆ.

ಹೈದರಾಬಾದ್ ನಗರದ ನೆರೆ ಸಂರಕ್ಷಣಾ ಯೋಜನೆ, ವಿಶಾಖ ಪಟ್ಟಣ ಬಂದರಿನ ಸಮುದ್ರ ಕೊರೆತ ತಡೆ ಯೋಜನೆ, ಹೈದರಾಬಾದ್ ನಗರದ ಒಳ ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳು ಆಗಿನ ಕಾಲಕ್ಕೆ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಹೈದರಾಬಾದಿನ ನವಾಬ ಅವರನ್ನು ಭಾರೀ ದೊಡ್ಡದಾಗಿ ಸನ್ಮಾನ ಕೂಡ ಮಾಡಿದ್ದರು. ಆದರೆ, ಮುಂದೆ ಮೈಸೂರಿನ ಮಹಾರಾಜರು ಅವರ ಸೇವೆಯನ್ನು ಬಯಸಿ ಕರೆದಾಗ ಕನ್ನಡ ಮತ್ತು ಮೈಸೂರು ಮೇಲಿನ ಅತೀವ ಪ್ರೀತಿಯಿಂದ ಅವರು ರಾಜೀನಾಮೆಯನ್ನು ಕೊಟ್ಟು ಮೈಸೂರಿಗೆ ಬಂದರು. ಅದು ಮೈಸೂರಿನ ಭಾಗ್ಯವೇ ಸರಿ.

ಮೈಸೂರು, ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳ ಕಬ್ಬು ಮತ್ತು ಭತ್ತದ ಬೆಳೆಗಾರರ ಕಷ್ಟವನ್ನು ನೋಡಲಾಗದೆ ಅವರು ಮೈಸೂರು ಮಹಾರಾಜರ ಮನಸನ್ನು ಒಲಿಸಿಕೊಂಡು ಅಣೆಕಟ್ಟು ಕಟ್ಟುವ ಯೋಜನೆ ರೂಪಿಸಿದರು. ಕಾವೇರಿ ನದಿಯ ನೀರಿನ ಪ್ರವಾಹ ಅಲ್ಲಿ ಹೆಚ್ಚು ಇದ್ದ ಕಾರಣ ಹಲವಾರು ತಾಂತ್ರಿಕ ಪರಿಣತರು ಅಣೆಕಟ್ಟು ನಿರ್ಮಾಣದ ಬಗ್ಗೆ ಅಪಸ್ವರ ತೆಗೆದಾಗ ಒಂದಿಷ್ಟು ವಿಚಲಿತರಾಗದ ಎಂ.ವಿ. ಅವರು ಅಣೆಕಟ್ಟಿನ ಯೋಜನೆ ರೂಪಿಸಿ ಕೆಲಸಕ್ಕೆ ಇಳಿದರು. ಮಧ್ಯೆ ಕೂಡ ಸಾಕಷ್ಟು ಅಡೆ ತಡೆಗಳು ಬಂದರೂ ಅವರು ಇಡೀ ಅಣೆಕಟ್ಟು ಪೂರ್ತಿ ಮಾಡಿದ ರೀತಿಯು ಅದ್ಭುತವಾದದ್ದು.

ಈಗ ಭಾರತದ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೃಷ್ಣ ರಾಜ ಸಾಗರ ಅಣೆಕಟ್ಟು ಅವರ ಕರ್ತೃತ್ವ ಶಕ್ತಿಗೆ ಮತ್ತು ಹಟಕ್ಕೆ ಸಾಕ್ಷಿ ಆಗಿ ತಲೆ ಎತ್ತಿ ನಿಂತಿದೆ. ಮೈಸೂರು ಸುತ್ತಲಿನ ಜಿಲ್ಲೆಯ ರೈತರ ಮನೆಗಳಲ್ಲಿ ಸರ್ ಅವರ ಭಾವಚಿತ್ರ ಇವೆ.

ಕನ್ನಡದ ಮೇಲಿನ ಅವರ ಪ್ರೀತಿ ಅವರಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ರೂಪಿಸಿತ್ತು. ಅದರಲ್ಲಿ ನಡೆಯುವ ಎಲ್ಲಾ ಸಮ್ಮೇಳನ, ಸೆಮಿನಾರ್‌ ಗಳಲ್ಲಿ ತಪ್ಪದೇ ಹಾಜರಾಗುತ್ತಿದ್ದರು. ಆದರೆ, ವೇದಿಕೆಯನ್ನು ಹತ್ತುತ್ತಲೆ ಇರಲಿಲ್ಲ.

ಮುಂದೆ ಭಾರತ ಸರಕಾರವು ಬಿಹಾರ ರಾಜ್ಯದಲ್ಲಿ ಗಂಗಾ ನದಿಗೆ ಮೋಕಾಂ ಎಂಬ ಬೃಹತ್ ಸೇತುವೆಯನ್ನು ಕಟ್ಟುವ ಯೋಜನೆಯನ್ನು ಕೈಗೆ ಎತ್ತಿಕೊಂಡು ರೂಪಿಸುವಾಗ ಸರ್ ಅವರ ಪರಿಣತಿಯನ್ನು ಬಳಸಿತು. 1955ರಲ್ಲೀ ಅವರಿಗೆ ಭಾರತ ರತ್ನ ಪ್ರಶಸ್ತಿಯ ಗೌರವ ದೊರೆಯಿತು.

ಅವರಲ್ಲಿ ಪ್ರಾಮಾಣಿಕತೆ, ಸಮಯ ಪ್ರಜ್ಞೆ, ಪರಿಶ್ರಮ ಮತ್ತು ದೂರದೃಷ್ಟಿ ಎದ್ದು ಕಾಣುವ ಗುಣಗಳಾಗಿದ್ದವು. ಅದಕ್ಕೆ ಸಾವಿರಾರು ನಿದರ್ಶನಗಳು ಅವರ ಬದುಕಿನಲ್ಲಿ ದೊರೆಯುತ್ತವೆ. ಒಮ್ಮೆ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ ಅವರ ಹತ್ತಿರದ ಸಂಬಂಧಿ ಒಬ್ಬರು ತಮ್ಮ ಮಗನನ್ನು ಕರೆದುಕೊಂಡು ಬಂದು ಒಂದು ಕೆಲ್ಸ ಕೊಡಿಸಲು ಒತ್ತಾಯ ಮಾಡಿದ್ದರು. ಮನೆಯಲ್ಲಿ ತುಂಬಾ ಆರ್ಥಿಕ ಮುಗ್ಗಟ್ಟು ಇದೆ, ಸಹಾಯ ಮಾಡಿ ಎಂದರು. ಎಂ. ವಿ ಸರ್ ಅವನ ಸರ್ಟಿಫಿಕೇಟನ್ನು ನೋಡಿದಾಗ ಅವನ ಅರ್ಹತೆ ತುಂಬಾ ಕೆಳಗಿತ್ತು. ಆಗ ಸರ್ ಅವರು ನಯವಾಗಿ ಕೆಲ್ಸ ಕೊಡಲು ಸಾಧ್ಯ ಇಲ್ಲ ಕ್ಷಮಿಸಿ ಎಂದು ಕೈಮುಗಿದು ಕಳುಹಿಸಿದರು. ಬಂದವರು ಸರ್ ಅವರನ್ನು ಕೆಟ್ಟದಾಗಿ ಬೈಯ್ಯುತ್ತ ಅಲ್ಲಿಂದ ನಿರ್ಗಮಿಸಿದರು.

ಮುಂದೆ ಅವರ ಕುಟುಂಬದ ಹಿನ್ನೆಲೆಯನ್ನು ವಿಚಾರಣೆ ಮಾಡಿದಾಗ ಅವರಿಗೆ ನಿಜವಾಗಿಯೂ ಆರ್ಥಿಕ ಸಂಕಷ್ಟಗಳು ಇರುವುದು ಸರ್ ಅವರಿಗೆ ಗೊತ್ತಾಯಿತು. ಅವರಿಗೆ ಪಾಪ ಪ್ರಜ್ಞೆಯು ಕಾಡಿತು. ಅವರು ಮುಂದಿನ ತಿಂಗಳಿಂದ ಆ ಕುಟುಂಬಕ್ಕೆ ಪ್ರತೀ ತಿಂಗಳು 100 ರೂಪಾಯಿ ಮನಿ ಆರ್ಡರ್ ಕಳುಹಿಸಲು ಆರಂಭ ಮಾಡಿದರು. ಎಂ. ವಿ. ಸರ್ ಅವರು ನಿವೃತ್ತರಾಗುವವರೆಗೆ ಈ ಸೇವೆ ಮುಂದುವರೆಯಿತು.

ಮತ್ತೊಮ್ಮೆ ಒಮ್ಮೆ ಪತ್ರಕರ್ತ ಅವರ ಸಂದರ್ಶನಕ್ಕೆ ಐದು ಗಂಟೆಗೆ ಸಮಯ ನಿಗದಿ ಪಡಿಸಿದ್ದ. ಅವನು ಸರ್ ಮನೆಗೆ ಬಂದಾಗ ಸಮಯ 4.50 ಆಗಿತ್ತು ಮತ್ತು ಸರ್ ಮಲಗಿದ್ದರು. ಪತ್ರಕರ್ತರು ಹಿಂದಿರುಗಿ ಹೋಗಲು ಮನಸ್ಸು ಮಾಡಿದರು. ಆದರೆ ಸರ್ ಅವರ ಆಪ್ತ ಕಾರ್ಯದರ್ಶಿ ಸ್ವಲ್ಪ ಹೊತ್ತು ನಿಲ್ಲಲು ಹೇಳಿದರು. ಅಷ್ಟು ಹೊತ್ತಿಗೆ ಎದ್ದ ಸರ್, ಐದೇ ನಿಮಿಷದಲ್ಲಿ ತಯಾರಾಗಿ, ಸೂಟ್ ಬೂಟ್ ಹಾಕಿ ತಯಾರಾಗಿ ಐದು ಗಂಟೆಗೆ ಸಂದರ್ಶನ ಕೊಠಡಿಗೆ ಬಂದಿದ್ದರು. ಇದು ಅವರ ಸಮಯ ಪ್ರಜ್ಞೆಯ ಮೇಲ್ಪಂಕ್ತಿ.

ಇಂದವರ ಬರ್ತ್ ಡೇ. ಇದನ್ನು ಇಂಜಿನಿಯರ್ಸ್ ಡೇ ಎಂದು ಭಾರತ, ತಾಂಜಾನಿಯಾ ಮತ್ತು ಶ್ರೀಲಂಕಾ ದೇಶದಲ್ಲಿ ಆಚರಿಸುತ್ತಿರುವುದು ಕೂಡ ಸ್ಮರಣೀಯ. ದೇಶವನ್ನು ಕಟ್ಟುವ ಇಂಜಿನಿಯರ್ ಬಂಧುಗಳಿಗೆ ನ್ಯೂಸ್ ಕಾರ್ಕಳ ಅಭಿನಂದನೆ ಸಲ್ಲಿಸುತ್ತಿದೆ.

ರಾಜೇಂದ್ರ ಭಟ್‌ ಕೆ.

ಜೆಸಿಐ ರಾಷ್ಟ್ರೀಯ ತರಬೇತಿದಾರರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!