Friday, September 24, 2021
spot_img
Homeಅಂಕಣಕಗ್ಗದ ಸಂದೇಶ- ಭರತನೆಂಬ ಆದರ್ಶದಂತೆ...

ಕಗ್ಗದ ಸಂದೇಶ- ಭರತನೆಂಬ ಆದರ್ಶದಂತೆ…

ಅರಸಡವಿಗೈದಿದೊಡಮವನಿತ್ತ ಪಾದುಕೆಗಳ್|
ಒರೆಯದೊಡೇನನುಮ್ ವರದಿ ತಾನೊರೆದು|
ದೊರೆತನದ ಭಾರಗಳ ಹೊತ್ತು ತಾ ದೊರೆಯಾಗದ|
ಭರತನವೊಲಿರು ನೀನು -ಮಂಕುತಿಮ್ಮ”

‌ ‌‌ಅರಸನು ಕಾಡಿಗೆ ಹೋದರೂ;ಅವನು ನೀಡಿದ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು ಭರತ ಆಡಳಿತ ನಡೆಸಿದನು.ಆ ಪಾದುಕೆಗಳು ಏನನ್ನು ಹೇಳದಿದ್ದರೂ ತಾನೇ ರಾಜ್ಯದ ಎಲ್ಲಾ ವರದಿಯನ್ನು ಒಪ್ಪಿಸುವನು.ಅರಸನ ಜವಾಬ್ದಾರಿಯನ್ನು ತಾನು ನಿರ್ವಹಿಸುತ್ತಿದ್ದರೂ ಅರಸುತನದ ಗತ್ತು ಗಾಂಭೀರ್ಯವನ್ನು ತೋರಿಸದ ಭರತನ ಹಾಗೆ ನೀನಿರು ಎಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
 
ಅಯೋಧ್ಯೆಯ ಅರಸನಾಗಬೇಕಿದ್ದ ಶ್ರೀರಾಮ ತಂದೆಯ ಆಶಯದಂತೆ ವನವಾಸಕ್ಕೆ ಹೋದಾಗ ತಮ್ಮನಾದ ಭರತ ಕಾಡಿಗೆ ಹೋಗಿ ಅವನ ಮನವೊಲಿಸಿ ಅಯೋಧ್ಯೆಗೆ ಕರೆತರಲು ಪ್ರಯತ್ನಿಸುತ್ತಾನೆ.ಶ್ರೀರಾಮನು ಅದಕ್ಕೆ ಒಪ್ಪದಿದ್ದಾಗ ಅವನ ಪಾದುಕೆಗಳನ್ನು ಬೇಡಿ ತಂದು ಸಿಂಹಾಸನದ ಮೇಲಿಟ್ಟು ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುತ್ತಾನೆ.ಪಾದುಕೆಗಳು ಏನೂ ಹೇಳುವುದಿಲ್ಲ,ಕೇಳುವುದಿಲ್ಲ ಎಂದು ಭಾವಿಸಿ ಭರತ ತನ್ನ ಮನಸ್ಸಿಗೆ ಬಂದ ಹಾಗೆ ವರ್ತಿಸಲಿಲ್ಲ.ನಿರ್ಮೋಹ ಮತ್ತು ನಿರ್ಲಿಪತ್ತೆಯಿಂದ ನಡೆದುಕೊಂಡ ಭರತ ರಾಜನ ಎಲ್ಲಾ  ಕರ್ತವ್ಯಗಳನ್ನು ನಿರಾಡಂಬರದಿಂದ ನಿಷ್ಠಾವಂತ ಸೇವಕನಂತೆ ನಿರ್ವಹಿಸುತ್ತಾನೆ.
  ಒಂದು ಹುಲ್ಲು ಕಡ್ಡಿಯನ್ನು ಸೃಷ್ಟಿಸಲು ನಮ್ಮಿಂದಾಗದಿದ್ದರೂ ಕೂಡ ನಾ ಮಾಡಿದ್ದು,ನನ್ನದು ಎಂದು ಪ್ರಾಪಂಚಿಕ ವಸ್ತುಗಳ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸುವುದನ್ನು ನೋಡುತ್ತೇವೆ.ಇಲ್ಲಿರುವ ಯಾವುದು ನಮ್ಮದಲ್ಲ ಅಲ್ಲದೆ ಯಾವುದೂ ಶಾಶ್ವತವಲ್ಲ ಎಂಬ ಅರಿವಿದ್ದರೂ ಅಂಟಿಕೊಳ್ಳುವುದನ್ನು ಬಿಟ್ಟಿಲ್ಲ.ಈ ನಿಟ್ಟಿನಲ್ಲಿ ಭರತನ ಬದುಕು ನಮಗೆ ಮಾದರಿಯಾಗಬೇಕು ಎಂದಿದ್ದಾರೆ ಡಿವಿಜಿ.

ಜೀವನದ ಜವಾಬ್ದಾರಿಯನ್ನು ನಿರ್ವಿಕಾರದಿಂದ, ನಿರ್ವಂಚನೆಯಿಂದ ನಿರ್ವಹಿಸಬೇಕು.ಆಡಂಬರದ ಆಟೋಪಗಳನ್ನು ಬಿಟ್ಟು ಭಗವಂತನು ನೀಡಿದ ಹೊಣೆಯೆಂದು ಭಾವಿಸಿ ಸೌಜನ್ಯದಿಂದ ನಿಭಾಯಿಸಬೇಕು.ಈ ಕಗ್ಗದ ಆಶಯದಂತೆ ಭರತನ ಕರ್ತವ್ಯನಿಷ್ಠೆ,ನಿರಾಡಂಬರತೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡಾಗ ಎಲ್ಲರ ಜೀವನವೂ ಸಾರ್ಥಕವಾಗುವುದಲ್ಲವೆ?
ಕೊಂಡಳ್ಳಿ ಪ್ರಭಾಕರ ಶೆಟ್ಟಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್,ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!