Wednesday, January 26, 2022
spot_img
Homeಅಂಕಣಆರೋಗ್ಯಧಾರ - ರೋಗ ಬಾರದೇ ಇರಲು ಹೀಗೆ ಮಾಡಿ ( ಭಾಗ 2 )

ಆರೋಗ್ಯಧಾರ – ರೋಗ ಬಾರದೇ ಇರಲು ಹೀಗೆ ಮಾಡಿ ( ಭಾಗ 2 )

ಅಂಜನ – ಕಣ್ಣಿಗೆ ಕಾಡಿಗೆ ಹಚ್ಚುವುದು. ಮನೆಯಲ್ಲಿಯೇ ತಯಾರಿಸಿದ ಕಾಡಿಗೆ ಕಣ್ಣಿಗೆ ತಂಪು ತರುವುದಲ್ಲದೆ ಅನೇಕ ದೃಷ್ಟಿದೋಷಗಳನ್ನು ನೇತ್ರ ರೋಗಗಳನ್ನು ತಡೆಯಬಹುದು. ಸೌವೀರಾಂಜನವು ಶ್ರೇಷ್ಠ ಎಂದು ಆಯುರ್ವೇದದಲ್ಲಿ ತಿಳಿಸಿದೆ ಇದನ್ನು ದಿನಾಲು ಹಚ್ಚಬಹುದು.

ಗಂಡೂಷ ಮತ್ತು ಕವಾಲ – ನಾಲಿಗೆ ಸ್ವಚ್ಛ ಮಾಡಿದ ಬಳಿಕ ಬಾಯಿಯನ್ನು ಸರಿಯಾಗಿ ಮುಕ್ಕಳಿಸಬೇಕು. ತದನಂತರ ಎಣ್ಣೆಯನ್ನು ಬಾಯಿಯಲ್ಲಿ ತುಂಬಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು ಇದನ್ನು ಗಂಡೂಷ ಎಂದು ಹೇಳುತ್ತೇವೆ. ಕವಾಲ ಎಂದರೆ ಸ್ವಲ್ಪವೇ ಎಣ್ಣೆಯನ್ನು ಬಳಸಿ ಬಾಯನ್ನು ಸರಿಯಾಗಿ ಮುಕ್ಕಳಿಸುವುದು. ಇಲ್ಲಿ ಬಳಸುವಂತಹ ಎಣ್ಣೆ ಹದ ಬಿಸಿ ಇದ್ದರೆ ಒಳ್ಳೆಯದು. ತೆಂಗಿನ ಎಣ್ಣೆ ಬಳಸುವುದು ಉತ್ತಮ. ಖದೀರ, ಅರಿಮೇದಾ ಮುಂತಾದ ದ್ರವ್ಯಗಳನ್ನು ಬಳಸಿ ತಯಾರಿಸಿದ ಕಷಾಯವನ್ನು ಉಪಯೋಗಿಸಬಹುದು. ಇದು ಕಫವನ್ನು ಹೊರಗೆ ಹಾಕುತ್ತದೆ ಹಾಗೂ ನಾಲಿಗೆಯನ್ನು ಶುದ್ಧಗೊಳಿಸುತ್ತದೆ. ರಕ್ತಸ್ರಾವ ಆಗುತ್ತಿದ್ದರೆ ತಣ್ಣೀರಿನಿಂದ ಬಾಯಿ ತೊಳೆದುಕೊಳ್ಳುವುದು ಸೂಕ್ತ . ಇದರಿಂದ ತುಟಿಗಳ ಒಡೆಯುವಿಕೆ, ಬಾಯಿ ಶುಷ್ಕತೆ, ವಸಡಿನ ರೋಗ, ಹಲ್ಲಿನ ಹುಳುಕು, ಧ್ವನಿಯ ಸಮಸ್ಯೆಗಳನ್ನು ನಿವಾರಿಸಬಹುದು.

ಅಭ್ಯಂಗ – ದಿನಾಲು ಅಭ್ಯಂಗ ಮಾಡುವುದರಿಂದ ನಮ್ಮ ತ್ವಚೆಯು ಮೃದುವಾಗಿರುತ್ತದೆ ಹಾಗೂ ಕಾಂತಿಯುಕ್ತವಾಗಿರುತ್ತದೆ. ಕಣ್ಣುಗಳಿಗೆ ಹಿತಕರ, ಆಯಾಸವನ್ನು ತೊಲಗಿಸುತ್ತದೆ ಹಾಗೂ ವಾತದೋಷವನ್ನು ಕಡಿಮೆಗೊಳಿಸಿ ದೇಹ ಬೇನೆ ಸಂದುನೋವನ್ನು ಗುಣಪಡಿಸುತ್ತದೆ. ದಿನಾಲು ಆಗದಿದ್ದರೆ ಕಡೆಪಕ್ಷ ವಾರಕ್ಕೊಮ್ಮೆ ಅಭ್ಯಂಗವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ಮುಖಕ್ಕೆ ಹಾಗೂ ಹಸ್ತ ಪಾದಗಳಿಗೆ ಸ್ವಲ್ಪ ಎಣ್ಣೆಯನ್ನು ದಿನಾಲು ಹಚ್ಚಿ ಚಮತ್ಕಾರವನ್ನು ನೋಡಿ. ತೆಂಗಿನೆಣ್ಣೆ ದಿನಾಲು ಬಳಸಬಹುದು. ಚಳಿಗಾಲದಲ್ಲಿ ಎಳ್ಳೆಣ್ಣೆಯು ಒಳ್ಳೆಯದು.

ವ್ಯಾಯಾಮ – ದಿನಾಲು ವ್ಯಾಯಾಮ ಮಾಡುವುದರಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ದೇಹಬಲ ಹೆಚ್ಚುತ್ತದೆ. ಇದರಿಂದ ಬೊಜ್ಜುತನ ಕರಗಿ ಖುಷಿಯನ್ನು ಕೊಡುತ್ತದೆ. ದೇಹವನ್ನು ಹಗುರಗೊಳಿಸುತ್ತದೆ. ದೇಹವು ಹಗುರವಾಗಿದ್ದರೆ ಕೆಲಸದಲ್ಲಿ ಚುರುಕುತನವನ್ನು ಕಾಣಬಹುದು. ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಆಯಸ್ಸನ್ನು ವೃದ್ಧಿಸುತ್ತದೆ.

ಉದ್ವರ್ತನ – ಅಂದರೆ ಕಡ್ಲೆಹಿಟ್ಟು, ಜೋಳದ ಹಿಟ್ಟು, ಹುರುಳಿ ಹಿಟ್ಟು, ಹೆಸರುಕಾಳಿನ ಹಿಟ್ಟು ಯಾವುದಾದರೂ ಒಂದನ್ನು ಬಳಸಿ ತ್ವಚೆಯ ಮೇಲೆ ತಿಕ್ಕುವುದು. ಇದರಿಂದ ಕೊಬ್ಬು ಕರಗುವುದಲ್ಲದೆ ತ್ವಚೆಯ ಹೊಳಪು ಹೆಚ್ಚುತ್ತದೆ. ಹಿಟ್ಟಿಗೆ ಅರಶಿಣ ಅಥವಾ ಎಣ್ಣೆ ಅಥವಾ ಹಾಲು ಹಾಕಿ ಬೆರೆಸಿ ಕಲ್ಕ ತಯಾರಿಸಿ ತ್ವಚೆಯ ಮೇಲೆ ಲೇಪಿಸಬಹುದು. ಇದನ್ನು ಪ್ರಸಾಧನವೆಂದು ಆಯುರ್ವೇದದಲ್ಲಿ ಹೇಳಿದೆ.

ಸ್ನಾನ – ಸ್ನಾನ ಮಾಡುವುದರಿಂದ ನಮ್ಮ ದೇಹದ ಕಲ್ಮಶಗಳು ದೂರವಾಗಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಶುದ್ಧಗೊಳಿಸಿ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಹದಬಿಸಿ ನೀರನ್ನು ಬಳಸಿದರೆ ಉತ್ತಮ. ತಲೆಸ್ನಾನ ಮಾಡುವಾಗ ತಣ್ಣೀರನ್ನು ಬಳಸಬೇಕು. ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಿದರೆ ಕಣ್ಣುಗಳಿಗೆ ಹಾನಿಯುಂಟುಮಾಡುತ್ತದೆ. ಚಳಿಗಾಲದಲ್ಲಿ ಮಾತ್ರ ಹದಬಿಸಿ ನೀರನ್ನು ತಲೆಸ್ನಾನಕ್ಕೆ ಬಳಸಬಹುದು.

ಸದ್ ವೃತ ಪಾಲನೆ – ಆಯುರ್ವೇದದಲ್ಲಿ ಸದ್ವೃತ್ ಪಾಲನೆಯ ಬಗ್ಗೆ ತಿಳಿಸಿದೆ. ಅಹಿಂಸೆಯ ಮಾರ್ಗವನ್ನು ಪಾಲಿಸಿ, ಪಾಪಕರ್ಮಗಳಿಂದ ದೂರವಿರಿ, ಹಿರಿಯರಿಗೆ ಗೌರವ ನೀಡಿ, ಇತರರಿಗೆ ಸಹಾಯವನ್ನು ಮಾಡಿ. ನಿಮ್ಮ ಮಾತುಗಳು ಹಿತಮಿತವಾಗಿರಲಿ ಮಿತವಾಗಿರಲಿ. ಪ್ರಕೃತಿಯ ಮೇಲೆ, ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ ದಯೆ ತೋರಿಸಿ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ನಮ್ಮ ನಿತ್ಯ ಕರ್ಮಗಳು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೆಲ್ಲ ಪಾಲಿಸಿ ರೋಗದಿಂದ ದೂರವಿರಿ.

ಡಾ. ಹರ್ಷಾ ಕಾಮತ್

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!