ಉದ್ವಿಗ್ನ ವಾತಾವರಣ – ಪೊಲೀಸರ ಮಧ್ಯಪ್ರವೇಶ
ಕಾರ್ಕಳ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅಕ್ರಮ ಎನ್ನಲಾದ ಮತಾಂತರ ಕೇಂದ್ರಕ್ಕೆ ದಾಳಿ ನಡೆಸಿದ ಘಟನೆ ಸೆ. 10ರ ಬೆಳಿಗ್ಗೆ ನಡೆದಿದೆ. ಸುಮಾರು 35 ಕ್ಕೂ ಅಧಿಕ ಹಿಂದೂ ಧರ್ಮಿಯರನ್ನು ಸೇರಿಸಿಕೊಂಡು ಪ್ರಗತಿ ಕಾಂಪೌಂಡ್ ಬಳಿ ಪ್ರಾರ್ಥನೆ ನೆಪದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕಾರ್ಕಳ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೇಂದ್ರಕ್ಕೆ ದಾಳಿ ಮಾಡಿರುತ್ತಾರೆ. ದಿಢೀರ್ ದಾಳಿಯಿಂದಾಗಿ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಪ್ರಾರ್ಥನೆ ಆಯೋಜಿಸಿದವರ ನಡುವೆ ಘರ್ಷಣೆ ನಡೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿರುತ್ತಾರೆ. ಪ್ರಾರ್ಥನೆ ನಡೆಸುತ್ತಿದ್ದವರು ಯಾವುದೇ ಅನುಮತಿ ಪಡೆಯದೇ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿವಿಧ ಆಮೀಷ ಮತ್ತು ಒತ್ತಡಗಳ ಮೂಲಕ ಅನೇಕ ಹಿಂದೂ ಕುಟುಂಬಗಳನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವ ಹುನ್ನಾರ ನಡೆಯುತ್ತಿದೆ. ಕಾರ್ಕಳ ಆಸುಪಾಸು 16ಕ್ಕೂ ಅಧಿಕ ಪ್ರಾರ್ಥನಾ ಕೇಂದ್ರಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಿಳಿಸಿರುತ್ತಾರೆ.